ಈ ಜಗತ್ತಿನಲ್ಲಿ ಹೊರಜಗತ್ತಿಗೆ ಗೊತ್ತಾಗದಂಥಾ ಅದೆಷ್ಟೋ ಕೆಲಸ ಕಾರ್ಯಗಳಿರುತ್ತವೆ. ಸಾಮಾನ್ಯವಾಗಿ ಪ್ರಿಯೊಬ್ಬರೂ ಕೂಡಾ ತಾನು ಮಾಡೋ ಕೆಲಸಕ್ಕೆ ವಾರಸೂದಾರಿಕೆ ಬೇಕೆಂದು ಆಶಿಸುತ್ತಾರೆ. ಆದರೆ ಕೆಲವಾರು ಕೆಲ ಕಾರ್ಯಗಳಿಗೆ ಅದು ಸಿಕ್ಕೋದೇ ಇಲ್ಲ. ಪ್ರತೀ ಕ್ಷಣವೂ ಭಯವನ್ನು ಬೆನ್ನಿಗಿಟ್ಟುಕೊಂಡೇ ಬದುಕುತ್ತಾ, ಕೊಂಚ ಯಾಮಾರಿದರೂ ಅನಾಥ ಹೆಣವಾಗಿ ಬಿಡುವ ಅಪಾಯ ಸದಾ ಕೆಲ ಕಸುಬುದಾರರ ಸುತ್ತ ಗಸ್ತು ತಿರುಗುತ್ತಿರುತ್ತದೆ. ಅಂಥಾ ಅಪಾಯಕಾರಿ ವೃತ್ತಿಗಳಲ್ಲಿ ಗೂಢಾಚಾರ ವೃತ್ತಿ ಪ್ರಧಾನವಾದದ್ದು.
ಅದರಲ್ಲಿಯೂ ಶತ್ರು ರಾಷ್ಟರಗಳಿಗೆ ತೆರಳಿ ದೇಶದ ಪರವಾಗಿ ಗೂಢಾಚರ್ಯೆ ನಡೆಸೋದಿದೆಯಲ್ಲಾ? ಅದರಷ್ಟು ಅಪಾಯದ ಕಸುಬು ಬೇರೊಂದಿಲ್ಲ. ಗುರುತು ಪರಿಚಯವಿಲ್ಲದ ಊರು, ಜನರ ನಡುವೆ ದೇಶದ ಪರವಾಗಿ ಮಾಹಿತಿ ಕಲೆ ಹಾಕುತ್ತಾ, ಅದನ್ನು ಸ್ವದೇಶದ ಅಧಿಕಾರಿಗಳಿಗೆ ರವಾನಿಸೋದು ಅದೆಂಥಾ ರಿಸ್ಕಿ ಕೆಲಸವೆಂಬುದು ಯಾರಿಗಾದ್ರೂ ಅರ್ಥವಾಗುತ್ತೆ. ಅಂಥಾ ಕೆಲಸ ಮಾಡಿ ಪ್ರಸಿದ್ಧ ಸ್ಪೈ ಅನ್ನಿಸಿಕೊಂಡ ಅನೇಕರು ನಮ್ಮ ದೇಶದಲ್ಲಿದ್ದಾರೆ. ಆ ಯಾದಿಯಲ್ಲಿ ದೊಡ್ಡ ಹೆಸರು ಸಂಪಾದಿಸಿರುವವರು ಅಜಿತ್ ದೋವಲ್.
ಅಜಿತ್ ದೋವಲ್ ಭಾರತದ ಪ್ರಖ್ಯಾತ ಗೂಢಾಚಾರ ವ್ಯಕ್ತಿ. ಅವರು ವರ್ಷಾಂತರಗಳ ಹಿಂದೆ ಪಾಕಿಸ್ತಾನದಲ್ಲಿ ಭಾರತದ ಪರವಾಗಿ ಗೂಢಾಚರ್ಯೆ ನಡೆಸಿದ್ದರು. ಅವರು ಅಲ್ಲಿ ಓರ್ವ ಮುಸ್ಲಿಮನ ಗೆಟಪ್ಪಿನಲ್ಲಿಯೇ ಓಡಾಡುತ್ತಾ ಗೂಢಚರ್ಯೆ ನಡೆಸಲಾರಂಭಿಸಿದ್ದರು. ಹೀಗೇ ಒಂದು ದಿನ ಹತ್ತಿರದ ಮಸೀದಿಗೆ ದೋವಲ್ ನಮಾಜಿಗೆಂದು ತೆರಳಿದ್ದರು. ಅಲ್ಲಿಯೇ ನಮಾಜು ಮಾಡುತ್ತಿದ್ದ ಮತ್ತೋರ್ವ ದೋವಲ್ರ ಕಿವಿ ಚುಚ್ಚಿಸಿರೋ ಮಾರ್ಕ್ ಅನ್ನು ಪತ್ತೆಹಚ್ಚಿ ಅವರೋರ್ವ ಹಿಂದೂ ಅಂತ ಗುರುತಿಸಿದ್ದ.
ಆ ವ್ಯಕ್ತಿ ನಮಾಜಿನ ನಡುವೆಯೇ ನೀನು ಮುಸ್ಲಿಂ ಅಲ್ಲ ಹಿಂದೂ ಅಲ್ವಾ ಅಂತ ಕಿವಿಯಲ್ಲಿ ಉಸುರಿದಾಗ ದೋವಲ್ಗೆ ಅರೆಕ್ಷಣ ಭೂಮಿಯೇ ಬಾಯ್ಬಿರಿದ ಅನುಭವವಾಗಿತ್ತಂತೆ. ನಂತರ ಆತ ದೋವಲ್ರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ದೋವಲ್ಗೆ ಅದೇಕೋ ತಮ್ಮ ಅಂತ್ಯ ಸಮೀಪಿಸ್ತಿದೆ ಅಂತಲೇ ಅನ್ನಿಸೋಕೆ ಶುರುವಾಗಿತ್ತು. ಆದರೆ ಆ ವ್ಯಕ್ತಿ ತಾನೂ ಕೂಡಾ ಹಿಂದೂ, ಆದ್ರೆ ಹಲವಾರು ವರ್ಷಗಳಿಂದ ಜೀವ ಉಳಿಸಿಕೊಳ್ಳಲು ಮುಸ್ಲಿಮನಾಗಿ ಬದುಕುತ್ತಿರೋದಾಗಿ ವಿವರಿಸಿದ್ದನಂತೆ. ಅದು ಗೂಢಾಚಾರರು ಶತ್ರು ಪಾಳೆಯದಲ್ಲಿ ಎದುರಿಸಬೇಕಾದ ಅತ್ಯಂತ ಕ್ಲಿಷ್ಟಕರ ಸನ್ನಿವೇಶವಾಗಿ ದಾಖಲಾಗುತ್ತದೆ.