ಭಾರತದಲ್ಲಿನ ನಾನಾ ಪ್ರದೇಶಗಳಲ್ಲಿ ಹಾಸು ಹೊಕ್ಕಾಗಿರೋ ನಂಬಿಕೆಗಳೇ ಚಿತ್ರ ವಿಚಿತ್ರ. ಕೆಲವೊಂದನ್ನು ಕೇಳಿದರೆ ಯಾವ ಪ್ರತಿಕ್ರಿಯೆಯನ್ನೂ ಕೊಡದೇ ಅವಾಕ್ಕಾಗುವಂತಿರುತ್ತವೆ. ಇನ್ನೂ ಕೆಲ ಆಚರಣೆಗಳಂತೂ ಇಂಥಾದ್ದು ಈ ಕಾಲದಲ್ಲಿ ಮಾತ್ರವಲ್ಲ, ಯಾವ ಕಾಲದಲ್ಲಿಯೂ ಇರಲು ಸಾಧ್ಯವೇ ಇಲ್ಲ ಅನ್ನಿಸುವಂತಿರುತ್ತವೆ. ಈಗ ಹೇಳ ಹೊರಟಿರೋ ವಿಚಾರ ಕೇಳಿದರಂತೂ ನಿಮಗೂ ಕೂಡಾ ಅಂಥಾದ್ದೊಂದು ದಿಗ್ಭ್ರಮೆ ಆಗದಿರಲು ಸಾಧ್ಯವೇ ಇಲ್ಲ!
ಅಂಥಾದ್ದೊಂದು ವಿಚಿತ್ರದಲ್ಲಿಯೇ ವಿಚಿತ್ರವಾದ ಆಚರಣೆ ರೂಢಿಯಲ್ಲಿರೋದು ಪ್ರಸಿದ್ಧ ಪ್ರವಾಸಿ ಸ್ಥಳಗಾಳಾದ ಕುಲು ಮತ್ತು ಮನಾಲಿ ಪ್ರದೇಶದಲ್ಲಿ. ಇವೆರಡೂ ಕೂಡಾ ಅವಳಿ ಪ್ರದೇಶಗಳು. ಇಲ್ಲಿಗೆ ಜೀವಿತದಲ್ಲಿ ಒಮ್ಮೆಯಾದರೂ ಭೇಟಿ ಕೊಡ ಬೇಕೆಂಬುದು ಅದೆಷ್ಟೋ ಪ್ರವಾಸಪ್ರಿಯರ ಮಹಾ ಕನಸು. ಇಂಥಾ ಪ್ರವಾಸಿಗರ ಚಿತ್ರವೆಲ್ಲ ಆ ಪ್ರದೇಶಗಳ ವಾತಾವರಣ, ಪರಿಸರದ ಸುತ್ತಲೇ ಕೇಂದ್ರೀಕರಿಸಿರುತ್ತೆ. ಆದ್ರೆ ಕೊಂಚ ಕ್ಯೂರಿಯಾಸಿಟಿ ಇದ್ದರೂ ಕೂಡಾ ಆ ವಾತಾವರಣದಲ್ಲಿ ಹಾಸುಹೊಕ್ಕಾಗಿರೋ ಅದೆಷ್ಟೋ ಅಚ್ಚರಿದಾಯಕ ಆಚರಣೆಗಳು ಕಣ್ಣಿಗೆ ಬೀಳುತ್ತವೆ.
ಹಿಮಾಚಲಪ್ರದೇಶದ ಭಾಗವಾಗಿರೋ ಕುಲು ಮನಾಲಿಯ ಭಾಗದಲ್ಲಿಯೇ ಪಿನಿ ಅನ್ನೋ ಗ್ರಾಮವಿದೆ. ಅಲ್ಲಿ ದಸರಾ ಬಂತೆಂದರೆ ವಿಶೇಷವಾದ ಹಬ್ಬವೊಂದು ನಡೆಯುತ್ತೆ. ಆ ಸಂದರ್ಭದಲ್ಲಿ ಕುಲು ಮನಾಲಿ ಕಣಿವೆಯ ಪ್ರದ್ರೇಶಗಳೆಲ್ಲವೂ ವೈವಿಧ್ಯಮಯವಾದ ಚಿತ್ತಾರಗಳಿಂದ ಕಂಗೊಳಿಸುತ್ತಿರುತ್ತವೆ. ಹೀಗೆ ದಸರಾ ಮುಕ್ತಾಯದ ದಿನಗಳಲ್ಲಿ ಐದು ದಿನಗಳ ಕಾಲ ಪಿನಿ ಎಂಬ ಹಳ್ಳಿಯಲ್ಲಿ ಹಬ್ಬ ನಡೆಯುತ್ತೆ. ಆ ಅಷ್ಟೂ ದಿನಗಳ ಕಾಲ ಈ ಹಳ್ಳಿಯ ಹೆಂಗಸರು ಬಟ್ಟೆ ಧರಿಸುವಂತಿಲ್ಲ. ಈ ಕಾಲದಲ್ಲಿ ಗಂಡನೂ ಕೂಡಾ ತನ್ನ ಹೆಂಡತಿಯತ್ತ ಕಿರುನಗೆ ಬೀರುವಂತೆಯೂ ಇಲ್ಲವಂತೆ!