ಅಧ್ಯಾತ್ಮಿಕ ನಂಬಿಕೆಗಳು, ನಂಬಲಸಾಧ್ಯ ಅನ್ನಿಸುವಂಥ ಪವಾಡಗಳು ನಮ್ಮ ಬದುಕಿನೊಂದಿಗೆ ಹೊಸೆದುಕೊಂಡಿವೆ. ಬಹುಶಃ ನಮ್ಮ ದೇಶದಷ್ಟು ವೈವಿಧ್ಯಮಯ ನಂಬಿಕೆ, ಆಚರಣೆಗಳನ್ನು ಹೊಂದಿರೋ ಇನ್ನೊಂದು ದೇಶ ವಿಶ್ವ ಭೂಪಟದಲ್ಲಿ ಸಿಗಲಿಕ್ಕಿಲ್ಲ. ಈವತ್ತಿಗೂ ವೈಜ್ಞಾನಿಕ ತಳಹದಿಯಲ್ಲಿ ಯೋಚಿಸುವವರು ಇಂಥಾ ನಂಬಿಕೆಗಳನ್ನು ವಿಮರ್ಶೆಯ ಒರೆಗೆ ಹಚ್ಚುತ್ತಾರೆ. ಅವುಗಳನ್ನ ವಿರೋಧಿಸುತ್ತಾರೆ. ಆದರೆ ಇಲ್ಲಿರೋ ಕೆಲ ನಂಬಿಕೆಗಳು, ದೃಷ್ಟಾಂತಗಳಂತೂ ವಿಜ್ಞಾನಕ್ಕೇ ಸವಾಲೆಸೆಯುವಂತಿವೆ. ಅಂಥಾ ಕಾರಣೀಕದ ತಾಣವಾದ ಅನೇಕ ದೇವಸ್ಥಾನಗಳೂ ನಮ್ಮಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ. ಅದರಲ್ಲೊಂದು ದೇವಸ್ಥಾನದ ಬಗೆಗಿನ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.
ರಾಜಸ್ಥಾನದ ಜೈಸಲ್ಮೇರ್ನಲ್ಲಿರೋ ತನೋತ್ ಮಾತಾ ದೇವಾಲಯ ಅಂಥಾದ್ದೊಂದು ಅದ್ಭುತ ಲೀಲೆಗಳನ್ನು ತನ್ನದಾಗಿಸಿಕೊಂಡಿದೆ. ವಿಶೇಷ ಅಂದ್ರೆ ಈ ದೇವಾಲಯವನ್ನು ಭಾರತೀಯ ಸೇನೆಯೇ ಭಯ ಭಕ್ತಿಯಿಂದ ಆರಾಧಿಸುತ್ತಿದೆ. ಅದನ್ನು ಸೇನೆಯೇ ನೋಡಿಕೊಳ್ತಿದೆ. ಈ ದೇವಾಲಯ ಭಾರತೀಯ ಸೇನೆಯನ್ನೇ ಈ ಪರಿಯಾಗಿ ತನ್ನತ್ತ ಸೆಳೆದುಕೊಂಡಿರೋದಕ್ಕೆ ಕಾರಣ ಬಹು ವರ್ಷಗಳ ಹಿಂದೆ ನಡೆದಿದ್ದ ಯುದ್ಧ. ಮತ್ತು ಅದರಲ್ಲಿ ಪಾಪಿ ಪಾಕಿಸ್ತಾನ ಇದೇ ದೇವಾಲಯದ ಮುಂದೆ ಮಣ್ಣು ಮುಕ್ಕಿದ್ದ ರೀತಿ!
ಈ ದೇವಾಲಯ ಇಂಡೋ ಪಾಕ್ ಗಡಿಗೆ ತೀರಾ ಹತ್ತಿರದಲ್ಲಿದೆ. 1965ರಲ್ಲಿ ಭಾರತ ಮತ್ತು ¥ಪಾಕಿಸ್ತಾನಗಳ ನಡುವೆ ಭೀಕರವಾದ ಯುದ್ಧ ನಡೆದಿತ್ತಲ್ಲಾ? ಆ ಸಂದರ್ಭದಲ್ಲಿ ಪಾಪಿ ಪಾಕಿಸ್ತಾನ ಕ್ಷಿಪಣಿಗಳು ಮತ್ತು ಸಿಡಿ ಮದ್ದುಗಳನ್ನು ಭಾರತದ ಗಡಿಯತ್ತ ಉಡಾಯಿಸುತ್ತಿತ್ತು. ಆದರೆ ಅದೆಲ್ಲವೂ ಇಲ್ಲಿನ ಮಾತೇಶ್ವರಿ ದೇವಾಲಯದ ಮುಂದೆ ಬಿದ್ದು ಮಿಸುಕದೆ ಸ್ತಬ್ಧವಾಗುತ್ತಿದ್ದವಂತೆ. ಅದು ಮಾತೆಯ ಪವಾಡವೆಂದೇ ಯೋಧರು ಅಂದುಕೊಂಡಿದ್ದಾರೆ. ಆದ್ದರಿಂದಲೇ ಇಂದಿಗೂ ಕೂಡಾ ಭಾರತೀಯ ಯೋಧರು ಮಾತೆಗೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾ ಈ ದೇವಸ್ಥಾನವನ್ನು ತಾವೇ ಮುಂದೆ ನಿಂತು ಸಂಭಾಳಿಸಿಕೊಂಡು ಬರುತ್ತಿದ್ದಾರಂತೆ.
ಆ ಯುದ್ಧ ಕಾಲದಲ್ಲಿ ಈ ದೇವಸ್ಥಾನವೇ ಭಾರತೀಯ ಯೋಧರಿಗೆ ನವ ಶಕ್ತಿ ತುಂಬಿತ್ತು. ಆದ್ದರಿಂದಲೇ ಈವತ್ತಿಗೂ ಯೋಧರು ಅದೇ ನಂಬಿಕೆಯನ್ನು ಬಲವಾಗಿಸಿಕೊಂಡಿದ್ದಾರೆ. ಈವತ್ತಿಗೂ ಆ ದೇವಸ್ಥಾನದ ಆವರಣದಲ್ಲಿ ಒಂದು ಸಂಗ್ರಿಹಾಲಯವಿದೆ. ಅದರಲ್ಲಿ ಆವತ್ತು ಪಾಕಿಸ್ಥಾನದಿಂದ ಎಸೆಯಲ್ಪಟ್ಟು ಠುಸ್ ಅಂದಿದ್ದ ಮದ್ದುಗುಂಡುಗಳನ್ನ ಹಾಗೆಯೇ ಇಡಲಾಗಿದೆಯಂತೆ. ಈ ಕಾರಣದಿಂದಲೇ ಇದು ಭಾರತದ ಪ್ರಸಿದ್ಧ ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿದೆ.