ಝೈದ್ ಖಾನ್ ನಾಯಕನಾಗಿ ನಟಿಸಿರುವ ಬನಾರಸ್ ಇದೀಗ ದೇಶಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಎಲ್ಲ ಅಡೆತಡೆಗಳನ್ನೂ ಮೀರಿಕೊಂಡು, ಈ ಚಿತ್ರವೀಗ ಕರ್ನಾಟಕದಲ್ಲಿಯೂ ಗಟ್ಟಿಯಾಗಿ ಕಾಲೂರಿ ನಿಂತಿದೆ. ಈ ಮೂಲಕ ಝೈದ್ ಖಾನ್ ಭರವಸೆಯ ನಾಯಕನಾಗಿಯೂ ಹೊರಹೊಮ್ಮಿದ್ದಾರೆ. ಇದೊಂದು ರೀತಿಯಲ್ಲಿ ರೋಮಾಂಚಕ ಗೆಲುವೆಂದರೂ ಅತಿಶಯವೇನಲ್ಲ. ಇದು ಸಾಧ್ಯವಾಗಿದ್ದು ಹೇಗೆ? ಎಲ್ಲವನ್ನೂ ಗೌಣವಾಗಿಸಿದಂತೆ ಬನಾರಸ್ ಪ್ರೇಕ್ಷಕರನ್ನು ಈ ರೀತಿಯಲ್ಲಿ ಸೆಳೆಯುವಂತೆ ಮಾಡಿದ ಮಾಯೆ ಯಾವುದು ಅಂತೆಲ್ಲ ನೋಡಹೋದರೆ ಬನಾರಸ್ನ ಸಮ್ಮೋಹಕ ಹಾಡುಗಳ ಸಾಲು ಎದುರುಗೊಳ್ಳುತ್ತೆ!
ಹಾಡುಗಳು ಗೆದ್ದರೆ ಸಿನಿಮಾವೂ ಗೆಲ್ಲುತ್ತೆ ಅನ್ನೋದು ಸಿನಿಮಾ ರಂಗದ ಹಳೇ ಫಾರ್ಮುಲಾ. ಆದರೆ, ಅದು ಕಾಲಕಾಲಕ್ಕೆ ನಿಜವಾಗುತ್ತಾ, ಮತ್ತಷ್ಟು ಹೊಳಪುಗಟ್ಟಿಕೊಂಡು ಮುಂದುವರೆಯುತ್ತಿದೆ. ಹಾಗೆ ಹಾಡುಗಳ ಒಡ್ಡೋಲಗದಲ್ಲಿಯೇ ಗೆಲುವು ದಾಖಲಿಸಿದ ಚಿತ್ರಗಳ ಸಾಲಿನಲ್ಲಿ ಬನಾರಸ್ ಕೂಡಾ ತನ್ನದೇ ಆದ ಸ್ಥಾನ ಗಿಟ್ಟಿಸಿಕೊಂಡಿದೆ. ಆರಂಭಿಕವಾಗಿ ಬನಾರಸ್ ಅಚ್ಚರಿಯಂತೆ ಪ್ರೇಕ್ಷಕರೆಲ್ಲರ ಮನಸಿಗೆ ತಾಕಿದ್ದೇ ಮಾಯಗಂಗೆ ಎಂಬ ಹಾಡಿನ ಮೂಲಕ. ಅದು ಟ್ರೆಂಡಿಂಗ್ನಲ್ಲಿರುವಾಗಲೇ ಲಾಂಚ್ ಆಗಿದ್ದದ್ದು ಬೆಳಕಿನ ಕವಿತೆ ಎಂಬ ಹಾಡು. ಹಾಗೆ ಬನಾರಸ್ ಬಿಡುಗಡೆಗೊಂಡ ನಂತರದಲ್ಲಿ ಹಾಡುಗಳ ಬಗ್ಗೆ ಯಾವ ರೇಂಜಿಗೆ ಕ್ರೇಜ್ ಮೂಡಿಕೊಂಡಿದೆಯೆಂದರೆ, ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಈ ಹಾಡಿಗೀಗ ಏಳು ಮಿಲಿಯನ್ನಿಗೂ ಅಧಿಕ ವೀಕ್ಷಣೆ ಸಿಕ್ಕಿದೆ.
ಗಮನೀಯ ಅಂಶವೆಂದರೆ, ಸಿನಿಮಾ ಬಿಡುಗಡೆಯಾದ ತರುವಾಯ, ಬನಾರಸ್ ಹಾಡುಗಳ ವೀಕ್ಷಣೆ ಗಣನೀಯ ಮಟ್ಟದಲ್ಲಿ ಏರುಗತಿ ಕಂಡಿದೆ. ಬೆಳಕಿನ ಕವಿತೆ ಹಾಡಂತೂ ಸಾಹಿತ್ಯ ಮಾತ್ರವಲ್ಲದೇ, ದೃಷ್ಯಗಳ ಮೂಲಕವೂ ಪ್ರೇಕ್ಷಕರನ್ನು ಸೆಳೆದಿತ್ತು. ಅರುಣ್ ಸಾಗರ್ ಕಲಾ ನಿರ್ದೇಶನ ಮತ್ತು ಎ ಹರ್ಷ ಅವರ ಕೋರಿಯೋಗ್ರಫಿ ಆ ಹಾಡಿಗೆ ಬೇರೆಯದ್ದೇ ರೀತಿಯ ಮೆರುಗು ನೀಡಿತ್ತು. ವಿ ನಾಗೇಂದ್ರ ಪ್ರಸಾದ್ ಅವರಂತೂ ಈ ಹಾಡಿಗೆ ಎಲ್ಲರಿಗೂ ಇಷ್ಟವಾಗುವಂಥಾ ಸಾಹಿತ್ಯವನ್ನೊದಗಿಸಿದ್ದರು. ಈ ಮೂಲಕ ಬೆಳಕಿನ ಕವಿತೆ ಸಾರ್ವಕಾಲಿಕ ಇಷ್ಟದ ಗೀತೆಯಾಗಿ ಹೊರಹೊಮ್ಮಿತ್ತು. ಕೇವಲ ಬೆಳಕಿನ ಕವಿತೆ ಮಾತ್ರವಲ್ಲ; ಬನಾರಸ್ನ ಪ್ರತೀ ಹಾಡುಗಳೂ ಸದಾ ಕಾಲವೂ ಉಳಿಯುವಂತೆ ಮೂಡಿ ಬಂದಿವೆ. ಈ ಪಲ್ಲಟದಿಂದ ನಿರ್ದೇಶಕ ಜಯತೀರ್ಥ, ಝೈದ್ ಖಾನ್, ಸೋನಲ್ ಸೇರಿದಂತೆ ಒಂದಿಡೀ ಚಿತ್ರತಂಡವೇ ಖುಷಿಗೊಂಡಿದೆ.