ಥೇಟು ಝರಾಕ್ಸು ಮಾಡಿದಂಥಾ ಹೋಲಿಕೆಯಿರುವ ಅವಳಿ ಮಕ್ಕಳು ಹುಟ್ಟೋದು ನಮಗೇನು ಅಪರಿಚಿತವಲ್ಲ. ಆದರೆ ಅಂಥಾ ಅವಳಿ ಮಕ್ಕಳು ಹುಟ್ಟೋದು ಅಪರೂಪದಲ್ಲಿಯೇ ಅಪರೂಪ. ಆದ್ದರಿಂದಲೇ ಅವಳಿಗಳ ಬಗೆಗೊಂದು ಕುತೂಹಲ ಬಹುತೇಕರಲ್ಲಿರುತ್ತೆ. ಅದೊಂದು ಪ್ರಾಕೃತಿಕ ಅಚ್ಚರಿ. ಮಾಯೆ ಎಂದರೂ ಅತಿಶಯವೇನಲ್ಲ. ಈ ಅಚ್ಚರಿಯನ್ನೇ ಮೀರಿಸುವಂಥ ಸಯಾಮಿಗಳೂ ಕೂಡಾ ಆಗಾಗ ಸದ್ದು ಮಾಡುತ್ತಿರುತ್ತವೆ. ಆದರೆ ಅಪರೂಪದ ಅವಳಿಗಳಿಂದಲೇ ತುಂಬಿ ತುಳುಕೋ ಊರೊಂದು ನಮ್ಮದೇ ದೇಶದಲ್ಲಿದೆ ಅನ್ನೋದು ಬಹುತೇಕರ ಅರಿವಿಗೆ ಬಂದಿರಲಿಕ್ಕಿಲ್ಲವೇನೋ…
ಅಂಥಾದ್ದೊಂದು ಅಪರೂಪದ ಊರು ದೇವರ ನಾಡೆಂದೇ ಖ್ಯಾತಿವೆತ್ತಿರುವ ಕೇರಳದಲ್ಲಿದೆ. ಆ ಊರು ವೈದ್ಯಕೀಯ ವಿಜ್ಞಾನ ಜಗತ್ತಿನ ಪಾಲಿಗೊಂದು ನಿರಂತರ ಬೆರಗಾಗಿ ಹುಟ್ಟಿಕೊಂಡಿವೆ. ಸಾಮಾನ್ಯವಾಗಿ ಈ ಅವಳಿ ಮಕ್ಕಳು ಹುಟ್ಟೋದು ತೀರಾ ವಿರಳ. ಆದರೆ ಕೋದಿನ್ನಿ ಎಂಬ ಊರಿನ ತುಂಬಾ ಅವಳಿಗಳದ್ದೇ ಸಾಮ್ರಾಜ್ಯ. ಅಲ್ಲಿ ಹುಟ್ಟುವ ಬಹುತೇಕ ಮಕ್ಕಳು ಅವಳಿಗಳಾಗಿರುತ್ತವೆ. ಇಲ್ಲಿನ ಶಾಲೆಗಳಲ್ಲಿಯಂತೂ ವ್ಯತ್ಯಾಸ ಕಂಡು ಹಿಡಿಯೋದೇ ಕಷ್ಟ ಎಂಬಷ್ಟು ಹೋಲಿಕೆ ಇರುವ ಅವಳಿ ಮಕ್ಕಳು ತುಂಬಿಕೊಂಡಿರುತ್ತವೆ.
ಇಂಥಾ ಅಚ್ಚರಿಯನ್ನ ಬಚ್ಚಿಟ್ಟುಕೊಂಡಿರೋ ಕೋದಿನ್ನಿ ಕೋಳಿಕೋಡ್ನಿಂದ ಮೂವತೈದು ಕಿಲೋಮೀಟರ್ ದೂರದಲ್ಲಿದೆ. ಈಗೊಂದಷ್ಟು ತಲೆಮಾರುಗಳಿಂದಲೂ ಆ ಊರಿನಲ್ಲಿ ಅವಳಿ ಮಕ್ಕಳು ಜನಿಸುತ್ತಿವೆ. ಹುಡುಕಿದರೆ ಎರಡು ತಲೆಮಾರುಗಳಷ್ಟು ಹಿಂದಿನ ಅವಳಿಗಳೂ ಇಲ್ಲಿ ಸಿಗುತ್ತವೆ. ಈ ಬಗ್ಗೆ ೨೦೦೯ರಲ್ಲಿ ಒಂದು ಸಮೀಕ್ಷೆ ನಡೆಸಲಾಗಿತ್ತು. ಆಗ ಆ ಹಳ್ಳಿಯಲ್ಲಿ ೨೨೦ ಜೋಡಿ ಅವಳಿಗಳು ಮತ್ತು ಎರಡು ಜೊತೆ ತ್ರಿವಳಿಗಳಿರೋದು ಪತ್ತೆಯಾಗಿತ್ತು. ಈಗಲೂ ಕೋದಿನ್ನಿಯಲ್ಲಿ ಅವಳಿಗಳ ಕರಾಮತ್ತು ಅನೂಚಾನವಾಗಿ ಮುಂದುವರೆಯುತ್ತಲೇ ಇದೆ!