ಮನುಷ್ಯ ತನಗೆಲ್ಲ ತಿಳಿದಿದೆ ಎಂಬ ಅಹಮ್ಮಿಕೆಯಲ್ಲಿ ಕೆನೆದಾಡುತ್ತಾ ಪ್ರಕೃತಿಯ ಸಮತೋಲನದ ಬುಡಕ್ಕೇ ಕುಡುಗೋಲಿಟ್ಟಿದ್ದಾನೆ. ಎಲ್ಲವನ್ನೂ ಆವಿಷ್ಕಾರ ಮಾಡಿ, ಪ್ರತಿಯೊಂದನ್ನೂ ಸಂಶೋಧನೆಗಳ ಒರೆಗೆ ಹಚ್ಚಿ ಇಲ್ಲಿ ನಿಗೂಢವಾದುದೇನೂ ಉಳಿದಿಲ್ಲ ಎಂಬಂತೆ ಮೆರೆದಾಡುತ್ತಿದ್ದಾನೆ. ಆದರೆ ನಮ್ಮ ಸುತ್ತಲೇ ಅಡಗಿ ಕೂತಿರೋ ಹಲವಾರು ಪ್ರಾಕೃತಿಕ ನಿಗೂಢಗಳು ಮನುಷ್ಯನ ಬುದ್ಧಿವಂತಿಕೆಗೆ ಸವಾಲೆಸೆದು, ಅಡಿಗಡಿಗೆ ಅಣಕಿಸಿ ನಗುತ್ತಿವೆ. ಈ ಕ್ಷಣದ ವರೆಗೂ ಕೂಡಾ ಅಂಥಾ ಅದೆಷ್ಟೋ ನಿಗೂಢಗಳು ಬಿಡಿಸಲಾರದ ಕಗ್ಗಂಟಾಗಿ ಉಳಿದುಕೊಂಡಿವೆ. ನಮ್ಮದೇ ದೇಶದ ಭಾಗವಾಗಿರೋ ಅಸ್ಸಾಂನ ಕಾಡುಗಳಲ್ಲಿ ಅವಿತಿರೋದು ಕೂಡಾ ಅಂಥಾದ್ದೇ ನಿಗೂಢ!
ಅಸ್ಸಾಂ ಅಂದರೇನೇ ವಿಶಿಷ್ಟ ಪ್ರದೇಶ. ಅಲ್ಲಿ ಹೇರಳವಾದ ಸಸ್ಯ ರಾಶಿ ಮತ್ತು ಪ್ರಾಣಿ ಪಕ್ಷಿಗಳ ಸಂಕುಲವಿದೆ. ಇಂಥಾ ಎಲ್ಲ ಗುಣ ಲಕ್ಷಣಗಳನ್ನು ಹೊಂದಿರೋ ಊರು ಜತಿಂಗಾ. ಇಲ್ಲಿ ಬಹುವಾಗಿ ಕಾಡಿನಿಂದ ಆವೃತವಾದ ಪ್ರದೇಶಗಳಿದ್ದಾವೆ. ಅದರ ಒಳಗೆಯೇ ಲೆಕ್ಕವಿಡಲಾರದಷ್ಟು ಪ್ರಬೇಧಗಳ ಪಕ್ಷಿಗಳೂ ಇದ್ದಾವೆ. ಅಂಥಾ ಪಕ್ಷಿಗಳೇ ಅಲ್ಲಿನ ನಿಗೂಢ ಘಟನೆಯೊಂದರ ಕೇಂದ್ರ ಬಿಂದುಗಳು. ಯಾಕಂದ್ರೆ, ಪ್ರತೀ ವರ್ಷ ಒಂದು ನಿರ್ದಿಷ್ಟವಾದ ಕಾಲಘಟ್ಟದಲ್ಲಿ ಅಲ್ಲಿನ ಪಕ್ಷಿಗಳೆಲ್ಲ ವಿಚಿತ್ರವಾಗಿ ವರ್ತಿಸಲಾರಂಭಿಸುತ್ತವೆಯಂತೆ. ನಂತರ ಮನ ಬಂದಂತೆ ಹಾರಾಡಿ ರೆಂಬೆ ಕೊಂಬೆ ಕಂಬಗಳಿಗೆ ಡಿಕ್ಕಿ ಹೊಡೆದು ಆತ್ಮಹತ್ಯೆ ಮಾಡಿಕೊಂಡಂತೆ ಸತ್ತು ಬೀಳುತ್ತವಂತೆ.
ಆ ಕಾಲಮಾನದಲ್ಲಿ ಮ್ಲಾನವಾದ ಮಬ್ಬು ಮಬ್ಬು ವಾತಾವರಣ ಅಲ್ಲಿ ಮೇಳೈಸುತ್ತದೆ. ಅದರ ಹಿನ್ನೆಲೆಯಲ್ಲಿ ಢಾಳಾಗಿಯೇ ಮಂಜು ಸುರಿಯಲಾರಂಭಿಸುತ್ತೆ. ಈ ಪ್ರಾಕೃತಿಕ ಬದಲಾವಣೆ ಸಲೀಸಾಗಿಯೇ ಎಲ್ಲರ ಅರಿವಿಗೂ ಬರುತ್ತದೆ. ಇಂಥಾ ಕಾಲದಲ್ಲಿಯೇ ಪಕ್ಷಿಗಳು ಹಿಂಡು ಹಿಂಡಾಗಿ ಕಾಡೊಳಗಿಂದ ಮೇಲೆ ಚಿಮ್ಮುತ್ತವೆ. ನಂತರ ಆ ಮಬ್ಬು ವಾತಾವರಣದಲ್ಲಿ ಕ್ಷೀಣವಾಗಿ ಮಿಂಚುವ ಬೆಳಕಿನ ದಿಕ್ಕಿನತ್ತ ಹುಚ್ಚೆದ್ದು ಹಾರುತ್ತವೆ. ಆ ಭರದಲ್ಲಿ ರೆಂಬೆ ಕೊಂಬೆಗಳು ಮತ್ತು ಕಂಬಗಳಿಗೆ ಡಿಕ್ಕಿ ಹೊಡೆದು ಸಾಯುತ್ತವೆ. ಇದರಿಂದಾಗಿ ಆ ಕಾಲಮಾನದಲ್ಲಿ ಪಕ್ಷಿಗಳ ಮಾರಣಹೋಮವೇ ನಡೆಯುತ್ತೆ. ಇದು ಪ್ರತೀ ವರ್ಷ ಪುನರಾವರ್ತನೆಯಾಗುತ್ತಲೇ ಇರುತ್ತದೆ. ಆದರೆ ಅದಕ್ಕೆ ನಿಖರ ಕಾರಣವೂ ಅಷ್ಟೇ ನಿಗೂಢವಾಗುಳಿದೆ.