ಸ್ಥಿತಿವಂತರ ಮನೆ ಮಕ್ಕಳು ಸಿನಿಮಾರಂಗಕ್ಕೆ ಬಂದಾಕ್ಷಣ ಮೊದಲು ತೂರಿ ಬರುವುದೇ ಮೂದಲಿಕೆ. ಇತ್ತ ಗಾಂಧಿನಗರದ ಗಲ್ಲಿಯಗುಂಟ ನಾನಾ ಸರ್ಕಸ್ಸು ನಡೆಸೋ ಮಂದಿಯ ಸಂತೆ ನೆರೆದಿರುವಾಗ, ಹಣವಂತರ ಮಕ್ಕಳು ಸಲಾಸಾಗಿ ಬಂದು ಮೆರೆಯುತ್ತಾರೆಂಬುದು ಅಂಥಾದ್ದೊಂದು ಮನಃಸ್ಥಿತಿಗೆ ಕಾರಣವಾಗಿದ್ದಿರಬಹುದು. ಅದು ಒಂದು ಮಟ್ಟಿಗೆ ನಿಜವೆನ್ನಿಸಿದರೂ, ತಯಾರಿ ಮತ್ತು ನಟನೆಯ ಮೂಲಕ ಅಂಥಾ ಮನಃಸ್ಥಿತಿಯನ್ನು ಸುಳ್ಳೆಂದು ಸಾಬೀತು ಮಾಡಿದ ಒಂದಷ್ಟು ಪ್ರತಿಭೆಗಳಿದ್ದಾವೆ. ಆ ಸಾಲಿನಲ್ಲಿ ಬನಾರಸ್ ಹೀರೋ ಝೈದ್ ಖಾನ್ ನಿಸ್ಸಂದೇಹವಾಗಿಯೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇಂದು ಬಿಡುಗಡೆಯಾಗಿರೋ ಜಯತೀರ್ಥ ನಿರ್ದೇಶನದ ಬನಾರಸ್ ಚಿತ್ರ ನೋಡಿದ ಪ್ರತಿಯೊಬ್ಬರೂ ಕೂಡಾ ಅಂಥಾದ್ದೊಂದು ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತ ಪಡಿಸುತ್ತಿದ್ದಾರೆ. ಒಟ್ಟಾರೆ ಕಥೆ ಮತ್ತು ಆ ಪಾತ್ರಕ್ಕೆ ಝೈದ್ ಖಾನ್ ಜೀವ ತುಂಬಿರುವ ರೀತಿಯನ್ನು ಪ್ರೇಕ್ಷಕರು ಮನದುಂಬಿ ಮೆಚ್ಚಿಕೊಳ್ಳುತ್ತಿದ್ದಾರೆ.
ಯಾವಾಗ ಬನಾರಸ್ ಚಿತ್ರ ಹಾಡುಗಳ ಮೂಲಕವೇ ಕಳೆಗಟ್ಟಿಕೊಳ್ಳಲಾರಂಭಿಸಿತ್ತೋ, ಆ ಕಾಲಘಟ್ಟದಲ್ಲಿಯೇ ಒಂದಷ್ಟು ವಿದ್ಯಮಾನಗಳೂ ಜರುಗಿದ್ದವು. ಆ ಭೂಮಿಕೆಯಲ್ಲಿಯೇ ಒಂದಷ್ಟು ಮಂದಿ ಬಾಯ್ಕಾಟ್ ಬನಾರಸ್ ಅಂತೆಲ್ಲ ಬಾಯಿಬಡಿದುಕೊಳ್ಳಲಾರಂಭಿಸಿದ್ದರಲ್ಲಾ? ಅಂಥವರೇ ಈ ಚಿತ್ರದ ಬಗ್ಗೆ ವ್ಯಾಪಕವಾಗಿ ಅಪಪ್ರಚಾರ ಶುರುವಿಟ್ಟುಕೊಂಡಿದ್ದರು. ಅದುವೇ ಬನಾರಸ್ ಬಗ್ಗೆ ಮತ್ತೊಂದಷ್ಟು ಕೋನಗಳಲ್ಲಿ ಚರ್ಚೆ ನಡೆಯಲು ಕಾರಣವಾಗಿತ್ತು. ಇದೆಲ್ಲ ಏನೇ ಇದ್ದರೂ ಹಾಡು ಮತ್ತು ಟ್ರೈಲರ್ನಲ್ಲಿಯೇ ಝೈದ್ ನಟನೆಯ ಝಲಕ್ಕುಗಳು ಜಾಹೀರಾಗಿ, ಆ ಬಗ್ಗೆ ಒಂದಷ್ಟು ನಿರೀಕ್ಷೆಗಳು ಮೂಡಿಕೊಂಡಿದ್ದವು. ಅದೆಲ್ಲವನ್ನೂ ತೃಪ್ತಗೊಳಿಸುವಂತೆ ಬನಾರಸ್ ಮೂಡಿ ಬಂದಿದೆ.ಇದೊಂದು ಟೈಮ್ ಟ್ರಾವೆಲಿಂಗ್ ಅಥವಾ ಟೈಮ್ ಲೂಪ್ ಕಾನ್ಸೆಪ್ಟಿನ ಸಿನಿಮಾ ಎಂಬ ವಿಚಾರ ಈ ಹಿಂದೆಯೇ ಜಾಹೀರಾಗಿತ್ತು. ಬನಾರಸ್ನ ಮೋಹಕ ವಾತಾವರಣದಲ್ಲಿ ಭಿನ್ನವಾಗಿ ಹಬ್ಬಿಕೊಳ್ಳುವ ಪ್ರೀತಿಯೂ ಸೇರಿದಂತೆ, ನಾನಾ ಕೊಂಬೆ ಕೋವೆಗಳ ಕಥಾನಕದೊಂದಿಗೆ ಬನಾರಸ್ ಎಲ್ಲರಿಗೂ ಹಿಡಿಸುವಂತೆ ರೂಪುಗೊಂಡಿದೆ. ಅಗರ್ಭ ಶ್ರೀಮಂತರ ಮನೆ ಹುಡುಗ ಸಿದ್ಧಾರ್ಥ್ ಸಿಂಹನಾಗಿ ಝೈದ್ ನಟಿಸಿದ್ದರೆ, ಚಿಕ್ಕಪ್ಪನ ದೇಖಾರೇಖಿಯಲ್ಲಿರುವ ಅಪ್ಪ ಅಮ್ಮನಿಲ್ಲದ ತಬ್ಬಲಿ ಜೀವವಾಗಿ, ಹಾಡುಗಾರ್ತಿಯಾಗಿ ದನಿ ಎಂಬ ಪಾತ್ರದಲ್ಲಿ ಸೋನಲ್ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ಬನಾರಸ್ನಲ್ಲಿ ಹೇಗೆ ಸಂಧಿಸುತ್ತಾರೆ, ವಿರುದ್ಧ ದಿಕ್ಕಿನ ಎರಡು ಜೀವಗಳ ನಡುವೆ ಹೇಗೆ ಪ್ರೀತಿ ಅಂಕುರಿಸುತ್ತೆ? ಅದಕ್ಕೆ ಟೈಮ್ ಟ್ರಾವೆಲಿಂಗ್ ಹೇಗೆ ಕಾರಣವಾಗುತ್ತೆ? ಒಂದಿಡೀ ಸಿನಿಮಾ ಯಾವ್ಯಾವ ದಿಕ್ಕುಗಳತ್ತ ಹೊರಳಿಕೊಳ್ಳುತ್ತೆ ಎಂಬುದೇ ಬನಾರಸ್ನ ಅಸಲೀ ಹೂರಣ. ಅದನ್ನು ನಿರ್ದೇಶಕ ಜಯತೀರ್ಥ ಒಂದು ರೋಚಕ ಅನುಭವ ದಕ್ಕುವಂತೆ ಕಟ್ಟಿ ಕೊಟ್ಟಿದ್ದಾರೆ.
ಮೊದಲಾರ್ಧದಲ್ಲಿ ಬನಾರಸ್ನ ಸಮ್ಮೊಹಕ ಪರಿಸರದಲ್ಲಿ ಕಥೆ ಘಟಿಸುತ್ತದೆ. ನಾಯಕ ನಾಯಕಿಯ ಬೊಗಸೆಯಲ್ಲರಳೋ ಪ್ರೀತಿ ನಾನಾ ರಂಗು ಹೊದ್ದು ಹೊಮ್ಮುತ್ತೆ. ನಿಮಿಷಗಳ ಕಾಲ ವೇಗವಾಗಿ ಚಲಿಸಿ, ಒಂ<ದು ಪ್ರೇಮಕಥಾನಕವಾಗಿಯಷ್ಟೇ ನೋಡುಗರ ಮನಸಿನಲ್ಲಿ ತಿದಿಯೊತ್ತುವ ಹೊತ್ತಿಗೆಲ್ಲ ಇಂಟರ್ವಲ್ ಎದುರಾಗುತ್ತೆ. ಒಂದಿಡೀ ಬನಾರಸ್ನ ನೈಜ ತಾಕತ್ತಿನ ದರ್ಶನವಾಗೋದೇ ದ್ವಿತೀಯಾರ್ಧದಲ್ಲಿ. ಅಲ್ಲಿ ಒಂದರ ಹಿಂದೊಂದರಂತೆ ಟ್ವಿಸ್ಟುಗಳು, ಸರ್ಪ್ರೈಸುಗಳು ಯಥೇಚ್ಛವಾಗಿ ಸಿಗುತ್ತವೆ. ಕಣ್ಣೆದುರಲ್ಲಿಯೇ, ಕಲ್ಪನೆ ಮೀರಿ ಚಹರೆ ಬದಲಿಸೋ ದೃಷ್ಯಗಳಲ್ಲಿ ಪ್ರೇಕ್ಷಕರು ಕಳೆದು ಹೋಗುವಂತಾಗುತ್ತೆ. ಒಂದರೆಕ್ಷಣವೂ ಬೋರು ಹೊಡೆಸದಂತೆ, ಆಚೀಚೆ ಆಲೋಚಿಸಲೂ ಆಸ್ಪದ ಕೊಡದಂಥಾ ಆವೇಗದಲ್ಲಿ ಜಯತೀರ್ಥ ಬನಾರಸ್ ಅನ್ನು ಕಟ್ಟಿಕೊಟ್ಟಿದ್ದಾರೆ.
ಪ್ರಧಾನವಾಗಿ ನವ ನಟ ಝೈದ್ ಖಾನ್ ಅಭಿನಯವೂ ಕೂಡಾ ಬನಾರಸ್ನ ಹೈಲೈಟ್ ಪಾಯಿಂಟುಗಳಲ್ಲೊಂದಾಗಿ ದಾಖಲಾಗುತ್ತದೆ. ಝೈದ್ ತಮ್ಮ ಸುತ್ತಾ ಹಬ್ಬಿಕೊಂಡಿದ್ದ ಗುಮಾನಿಗಳೆಲ್ಲ ಮಾಯವಾಗುವಂತೆ ಚೆಂದಗೆ ನಟಿಸಿದ್ದಾರೆ. ಆ ನಟನೆಯಲ್ಲಿಯೇ ಅವರೆಷ್ಟು ತಯಾರಿ ನಡೆಸಿಕೊಂಡಿದ್ದಾರೆಂಬ ಅಂಶವೂ ಇಣುಕುತ್ತದೆ. ಅದರಲ್ಲಿ ಜಯತೀರ್ಥ ಪಾಲಿರೋದನ್ನು ಉಪೇಕ್ಷಿಸಲು ಸಾಧ್ಯವಿಲ್ಲ. ಇನ್ನುಳಿದಂತೆ ಸೋನಲ್ ಮೊಂತೇರೋ ಪಾತ್ರ ಮತ್ತು ನಟನೆ ಕೂಡಾ ಮನಸಲ್ಲುಳಿಯುತ್ತೆ. ಪ್ರತಿಭಾವಂತ ನಟ ಸುಜಯ್ ಶಾಸ್ತ್ರಿ ಇಲ್ಲಿ ಬಹುಮುಖ್ಯವಾಗಿರುವ ಶಂಭು ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೇವರಾಜ್ ನಾಯಕನ ತಂದೆಯಾಗಿ ನಟಿಸಿದ್ದರೆ, ಅಚ್ಯುತ್ ಕುಮಾರ್ ಕೂಡಾ ಪ್ರಧಾನ್ಯತೆ ಇರೋ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅದೆಲ್ಲವೂ ಬನಾರಸ್ನ ನೈಜ ಶಕ್ತಿ ಎಂಬುದು ಸತ್ಯ.
ಇತ್ತೀಚಿನ ದಿನಗಳಲ್ಲಿ ಎಲ್ಲದರಲ್ಲಿಯೂ ರಾಜಕೀಯ ಬೆರೆಸುವ ಹೀನ ಬುದ್ಧಿ ಅತಿಯಾಗಿದೆ. ಕಲಾವಿದರ ಜಾತಿ ಧರ್ಮ ಹಿನ್ನೆಲೆ ಹುಡುಕಿ ಬಾಯ್ಕಾಟ್ ಮಾಡೋದು ಕೂಡಾ ಒಂದಷ್ಟು ಮಂದಿಗೆ ಕಸುಬಾಗಿ ಬಿಟ್ಟಿದೆ. ಅದೆಲ್ಲವೂ ಮಾಡಲು ಕ್ಯಾಮೆ ಇಲ್ಲದವರ ವ್ಯರ್ಥ ಪ್ರಲಾಪ ಅನಮ್ನೋದು ಬನಾರಸ್ ನೋಡಿದ ಯಾರಿಗಾದರೂ ಅರ್ಥವಾಗುತ್ತೆ. ಯಾಕೆಂದರೆ, ಝೈದ್ ಖಾನ್ ಅದೆಲ್ಲವನ್ನೂ ಮೀರಿಕೊಂಡಂತೆ ಚೆಂದಗೆ ನಟಿಸಿದ್ದಾರೆ. ಇನ್ನೂ ಒಂಚೂರು ಪ್ರಯತ್ನ ಪಟ್ಟರೆ ನಾಯಕನಾಗಿ ನೆಲೆ ಕಂಡುಕೊಳ್ಳುವ ಭರವಸೆಯನ್ನೂ ಮೂಡಿಸಿದ್ದಾರೆ. ಒಟ್ಟಾರೆಯಾಗಿ, ಬನಾರಸ್ ಒಂದು ಭಿನ್ನ ಅನುಭೂತಿ ನೀಡುವ ಚಿತ್ರ. ಅದರ ಒಟ್ಟಾರೆ ಓಘದ ಮುಂದೆ ಸಣ್ಣಪುಟ್ಟ ಕೊರತೆಗಳೆಲ್ಲವೂ ಗೌಣ ಅನ್ನಿಸುತ್ತೆ. ಒಂದಿಡೀ ಚಿತ್ರ ಅಜನೀಶ್ ಲೋಕನಾರ್ಥರ ಮಾಂತ್ರಿಕ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರೋ ಚೆಂದದ ಹಾಡುಗಳಂತೆಯೇ ಕಾಡುತ್ತೆ. ಇದು ಖಂಡಿತವಠಾಗಿಯೂ ಎಲ್ಲ ಅಭಿರುಚಿಯ ಪ್ರೇಕ್ಷಕರಿಗೂ ಹಿಡಿಸುವಂಥಾ ಅಪರೂಪದ ಚಿತ್ರ!