ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕ್ರಾಂತಿ. ಅತ್ತ ಮೀಡಿಯಾಗಳು ಮುನಿಸಿಕೊಂಡಿದ್ದರೂ ಕೂಡಾ, ಖುದ್ದು ಅಭಿಮಾನಿಗಳೇ ಈ ಸಿನಿಮಾದ ಪ್ರಚಾರದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮೀಡಿಯಾ ಮುನಿಸಿನಾಚೆಗೂ ಕ್ರಾಂತಿ ನಿಜಕ್ಕೂ ಕ್ರಾಂತಿ ಮಾಡಲಿದೆ ಎಂಬಂಥಾ ಗಾಢ ನಂಬಿಕೆಯೊಂದು ಅಭಿಮಾನಿ ವಲಯದಲ್ಲಿದೆ. ಮೀಡಿಯಾಗಳಿಗೆ ಸೆಡ್ಡು ಹೊಡೆದು ನಿಂತಿರುವ ದರ್ಶನ್ಗೂ ಕೂಡಾ ಅಂಥಾದ್ದೊಂದು ನಂಬಿಕೆ ಬಲವಾಗಿರುವಂತಿದೆ.
ಈ ಸಿನಿಮಾದ ಕಥೆ ಏನು? ಅದರಲ್ಲಿ ದರ್ಶನ್ ಯಾವ ಥರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬಿತ್ಯಾದಿ ಪ್ರಶ್ನೆಗಳು ಎಲ್ಲರಲ್ಲಿಯೂ ಇವೆ. ಆದರೆ, ಆ ಬಗ್ಗೆ ಸಣ್ಣದೊಂದು ವಿವರವೂ ಜಾಹೀರಾಗದಂತೆ ಚಿತ್ರತಂಡ ಪಹರೆ ಕಾಯುತ್ತಾ ಬಂದಿದೆ. ಇದೆಲ್ಲದರ ನಡುವೆ ಮೊನ್ನೆ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಖುದ್ದು ದರ್ಶನ್ ಕಥಾ ಎಳೆಯ ಬಗ್ಗೆ ಸೂಕ್ಷ್ಮ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.
ಈ ಸಮಾಜದಲ್ಲಿ ಮೇರೆ ಮೀರಿಕೊಂಡಿರುವ ಖಾಸಗಿ ಶಾಲೆಗಳ ಎಜುಕೇಷನ್ ಮಾಫಿಯಾ ಸುತ್ತ ಕ್ರಾಂತಿಯ ಕಥೆಯಿರೋ ಸುಳಿವನ್ನು ದರ್ಶನ್ ಮಾತುಗಳೇ ಸಾಬೀತುಪಡಿಸಿವೆ. ಅತ್ತ ಬಿ. ಸುರೇಶ್ ನಿರ್ಮಾಣ ಮಾಡುತ್ತಿರೋದರಿಂದ ಈ ಸಿನಿಮಾ ನಿಜಕ್ಕೂ ಕ್ರಾಂತಿಕಾರಕ ಕಥೆ ಹೊಂದಿದೆ ಎಂಬ ನಂಬಿಕೆ ಈಗಾಗಲೇ ಬಲಗೊಂಡಿದೆ. ಈ ಮೂಲಕ ದರ್ಶನ್ ಎಲ್ಲರಿಗೂ ಇಷ್ಟವಾಗುವ, ಮಹತ್ತರ ಬದಲಾವಣೆಗೆ ಸ್ಫೂರ್ತಿಯಾಗುವ ಪಾತ್ರದಲ್ಲಿ ಕಾಣಿಸಿಕೊಂಡಿರೋದಂತೂ ಸತ್ಯ!