ಇದೀಗ ಆಹಾರವೆಂಬುದು ಬರೀ ಹೊಟ್ಟೆ ತುಂಬಿಸೋ ಮೂಲವಾಗುಳಿದಿಲ್ಲ. ಅದಕ್ಕೂ ಕೂಡಾ ಆಧುನಿಕತೆಯ ಶೋಕಿ ಮೆತ್ತಿಕೊಂಡಿದೆ. ತಿನ್ನೋ ಅನ್ನವನ್ನೂ ಕೂಡಾ ಆಡಂಭರ ಅಂದುಕೊಂಡ ಮೂರ್ಖರ ಸಂಖ್ಯೆ ದಿನೇ ದಿನೇ ಬೆಳೆಯುತ್ತಲೇ ಇದೆ. ಇದರ ಭಾಗವಾಗಿ ಜಂಕ್ ಫುಡ್ಗಳ ಹಾವಳಿ ಮಿತಿ ಮೀರಿಕೊಂಡಿದೆ. ಇಲ್ಲಿ ದೇಹಕ್ಕೆ ಆಗೋ ಲಾಭಕ್ಕಿಂತಲೂ ಕಣ್ಣಿಗೆ ಸಮಾಧಾನವಾಗಬೇಕು. ಆ ಕ್ಷಣಕ್ಕೆ ರುಚಿಯೆನ್ನಿಸಬೇಕು… ಅಂಥಾದ್ದಿದ್ದರೆ ಅದು ವಿಷವೇ ಆಗಿದ್ದರೂ ಸಂತೋಷದಿಂದ ಮೆಲ್ಲುವವರೇ ಹೆಚ್ಚು. ಆದರೆ ಇಂಥಾ ಶೋಕಿ ಮಿತಿ ಮೀರಿದರೆ ಜೀವಕ್ಕೇ ಕುತ್ತು ಬರುತ್ತೆ. ಕೊಂಚ ಯಾಮಾರಿದರೂ ಹುಟ್ಟೋ ಕೂಸುಗಳೂ ಅನಾರೋಗ್ಯದ ಮುದ್ದೆಗಳಾಗಿಯೇ ಕಣ್ತೆರೆಯೋ ಅಪಾಯಗಳಿದ್ದಾವೆ.
ಒಂದು ಅಧ್ಯಯನ ಇಂಥಾ ಅನಾಹುತವನ್ನು ಸ್ಪಷ್ಟೀಕರಿಸಿದೆ. ಇತ್ತೀಚಿನ ದಿನಗಳಲ್ಲಿ ನವಜಾತ ಶೀಶುಗಳು ಹಲವಾರು ಕಾಯಿಲೆ ಕಸಾಲೆಗಳಿಂದ ಬಳಲೋದು ಹೆಚ್ಚಾಗುತ್ತಿದೆ. ವಿಶೇಷವಾಗಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹಾಗೆ ನೋಡಿದರೆ ಹಿಂದಿನ ಕಾಲಕ್ಕಿಂತಲೂ ಈಗಿನ ಕಾಲದಲ್ಲಿ ಪ್ರೆಗ್ನೆನ್ಸಿ ಕಾಲದಲ್ಲಿ ಹೆಚ್ಚು ಎಚ್ಚರ ವಹಿಸಲಾಗುತ್ತಿದೆ. ಆ ಸಂದರ್ಭದಲ್ಲಿ ಅಮ್ಮ ಎಷ್ಟು ಆರೋಗ್ಯ ಕಾಪಾಡಿಕೊಳ್ತಾಳೋ ಅಷ್ಟೇ ಆರೋಗ್ಯವಂತವಾಗಿರೋ ಮಗು ಹುಟ್ಟುತ್ತೆ ಅನ್ನೋ ಅರಿವಿದೆ. ಆದರೆ ಆಹಾರ ಕ್ರಮ, ಅದರಲ್ಲಿಯೂ ತಿನ್ನೋ ಅನ್ನದ ಬಗ್ಗೆ ಅನಾಧರ ತೋರಿಸಲಾಗುತ್ತಿದೆ.
ಅದಾಗತಾನೇ ಹುಟ್ಟಿದ ಮಗುವಿಗೂ ಯಾಕೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುತ್ತದೆ ಎಂಬ ಬಗ್ಗೆ ನಮ್ಮದೇ ರಾಜ್ಯದಲ್ಲೊಂದು ಅಧ್ಯಯನ ನಡೆಸಿದೆ. ಅದು ತಿನ್ನೋ ಅನ್ನದತ್ತಲೇ ಬೆಟ್ಟು ಮಾಡಿದೆ. ಬಸುರಿನ ಸಂದರ್ಭದಲ್ಲಿ ಅಮ್ಮಂದಿರು ಪಾಲಿಶ್ ಮಾಡಿದ ಅಕ್ಕಿಯ ಅನ್ನವನ್ನೇ ಹೆಚ್ಚಾಗಿ ಸೇವಿಸಿದರೆ ಹುಟ್ಟೋ ಮಗುವಿಗೆ ಹೃದಯ ಸಂಬಂಧಿ ಕಾಯಿಲೆ ಬರೋ ಸಾಧ್ಯತೆ ಹೆಚ್ಚಿದೆ. ಹೀಗಂತ ಸದರಿ ಅಧ್ಯಯನ ಋಜುವಾತುಪಡಿಸಿದೆ. ಸಾಮಾನ್ಯವಾಗಿ ಅಕ್ಕಿಯಲ್ಲಿ ವಿಟಮಿನ್ ಬಿ೧ ಪ್ರಮಾಣ ಒಂದಷ್ಟಿರುತ್ತೆ. ಆದರೆ ಪಾಲಿಶ್ ಮಾಡಿದ ಅಕ್ಕಿಯಲ್ಲಿ ಆ ಅಂಶವೇ ಇರೋದಿಲ್ಲ. ಇದರಿಂದಾಗಿ ತಾಯಿಯ ಎದೆ ಹಾಲಿನಲ್ಲಿಯೂ ಈ ವಿಟಮಿನ್ ಕೊರತೆಯಾಗುತ್ತೆ. ಆ ಹಾಲು ಕುಡಿಯೋದರಿಂದ ಮಗುವಿಗೆ ಹೃದಯ ಸಂಬಂಧಿ ಕಾಯಿಲೆ ಬರೋ ಸಾಧ್ಯತೆ ಹೆಚ್ಚು ಅಂತ ತಜ್ಞ ವೈದ್ಯರ ತಂಡವೇ ಎಚ್ಚರಿಕೆಯ ಸಂದೇಶ ರವಾನಿಸಿದೆ.