ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಮಹತ್ವದ ಸ್ಥಾನವಿದೆ. ಅದನ್ನು ಎಲ್ಲರ ಬದುಕಿನ ನಿರ್ಣಾಯಕ ಕಾಲಮಾನ ಎಂದೇ ಪರಿಗಣಿಸಲಾಗುತ್ತೆ. ಆದರೆ ಈ ಮದುವೆಯ ವಿಚಾರದಲ್ಲಿ ರೂಢಿಯಲ್ಲಿರೋ ಸಂಪ್ರದಾಯಗಳು, ವಿಧಿ ವಿಧಾನಗಳನ್ನ ಒಂದು ಚೌಕಟ್ಟಿನಲ್ಲಿ ಸೇರಿಸಲಾಗೋದಿಲ್ಲ. ಯಾಕಂದ್ರೆ ಅವು ತುಂಬಾನೇ ವೈವಿಧ್ಯಮಯವಾಗಿವೆ. ಒಂದು ಮದುವೆ ಅಂದ್ರೆ ಹತ್ತಾರು ಸಂಪ್ರದಾಯಗಳಿರುತ್ತವೆ. ಅದರಲ್ಲೊಂದಿಷ್ಟು ಪ್ರದೇಶದಿಂದ ಪ್ರದೇಶಕ್ಕೆ, ಸಮುದಾಯದಿಂದ ಸಮುದಾಯಕ್ಕೆ ಬದಲಾಗುತ್ತವೆ. ಮತ್ತೊಂದಷ್ಟು ಆಚರಣೆಗಳು ವಿಚಿತ್ರದಲ್ಲಿಯೇ ವಿಚಿತ್ರವಾಗಿರುತ್ತವೆ!
ಗುಜರಾತ್ ರಾಜ್ಯದ ಬುಡಕಟ್ಟು ಜನಾಂಗವೊಂದರಲ್ಲಿ ಚಾಲ್ತಿಯಲ್ಲಿರೋ ಆಚರಣೆಯೊಂದರ ಬಗ್ಗೆ ಕೇಳಿದರೆ ಯಾರೇ ಆದರೂ ನಂಬಲು ತಿಣುಕಾಡದಿರೋದಿಲ್ಲ. ಅಂಥಾದ್ದೊಂದು ವಿಕ್ಷಿಪ್ತವಾದ ಮದುವೆಯ ಪದ್ಧತಿ ಆಚರಣೆಯಲ್ಲಿರೋದು ಗುಜರಾತಿನ ಛೋಟಾ ಉದಯಪುರ್ ಪ್ರದೇಶದಲ್ಲಿ. ಇಲ್ಲಿನ ಬುಡಕಟ್ಟು ಜನಾಂಗದಲ್ಲಿ ಮದುವೆಯಾದರೆ ವರ ತನ್ನ ಹೆಂಡತಿಗೆ ತಾಳಿ ಕಟ್ಟುವಂತಿಲ್ಲ. ಆತನ ಮದುವೆಯಾಗದ ಸಹೋದರಿ ತನ್ನ ಸಹೋದರನ ಪರವಾಗಿ ಅತ್ತಿಗೆಗೆ ತಾಳಿ ಕಟ್ಟುತ್ತಾಳೆ. ನಂತರದ ಎಲ್ಲ ವಿಧಿ ವಿಧಾನಗಳನ್ನೂ ಕೂಡಾ ಆಕೆಯೇ ಪೂರೈಸುತ್ತಾಳೆ.
ಇನ್ನೂ ವಿಚಿತ್ರ ಅಂದ್ರೆ ಆ ಜನಾಂಗದ ಹುಡುಗರಿಗೆ ತಮ್ಮ ಮದುವೆಯಲ್ಲಿ ತಾವೇ ಹಾಜರಿರುವ ಅವಕಾಶವೂ ಇಲ್ಲ. ಅಲ್ಲಿ ಮದುವೆ ದಿನ ವರ ಲಕ್ಷಣವಾಗಿ ರೆಡಿಯಾಗ್ತಾನೆ. ಆದರೆ ಮದುವೆ ನಡೆಯೋ ಸ್ಥಳಕ್ಕೆ ಹೋಗುವಂತಿಲ್ಲ. ಆತ ತನ್ನಮ್ಮನೊಂದಿಗೆ ಮನೆಯಲ್ಲಿಯೇ ಇರಬೇಕು. ನಂತರ ಎಲ್ಲ ವಿಧಿ ವಿಧಾನ ಮುಗಿದ ನಂತರ ಸಹೋದರಿ ಅತ್ತಿಗೆಯನ್ನ ಅಣ್ಣನಲ್ಲಿಗೆ ತಂದು ಬಿಡ್ತಾಳೆ. ಈ ಕ್ರಮ ಇಂದಿಗೂ ಚಾಲ್ತಿಯಲ್ಲಿದೆ. ಒಂದಷ್ಟು ಮಂದಿ ಅದನ್ನು ಮೀರಿಕೊಂಡು ಮದುವೆಯಾದರೂ ಆ ಸಂಸಾರಗಳು ಬರಖತ್ತಾಗಿಲ್ಲವಂತೆ. ಈ ಸಂಪ್ರದಾಯ ಮುರಿದರೆ ಕೆಡುಕಾಗುತ್ತದೆ ಎಂಬ ನಂಬಿಕೆ ಆ ಊರಿನ ಮುಖ್ಯಸ್ಥರಲ್ಲಿದೆ.