ಈ ಪ್ರಾಣಿ ಪಕ್ಷಿಗಳ ಜೀವನ ಕ್ರಮವೇ ಭೂಮಿ ಮೇಲಿನ ಅದ್ಭುತ. ಈಗ ಇಂಥಾ ಜೀವಿಗಳ ಬಗ್ಗೆ ನಾನಾ ಥರದ ಸಂಶೋಧನೆಗಳು ನಡೆದಿವೆ. ಈಗಲೂ ನಡೆಯುತ್ತಲೇ ಇದ್ದಾವೆ. ಬಹುಶಃ ಇನ್ನೆಷ್ಟು ವರ್ಷ ಅದು ಮುಂದುವರೆಯದರೂ ಕೂಡಾ ನಮಗೆಲ್ಲ ಗೊತ್ತಾಗಿದೆ ಸಂತ ಎದೆಯುಬ್ಬಿಸಿ ನಿರಾಳವಾಗೋ ಅವಕಾಶವೇ ಕೂಡಿ ಬರಲಿಕ್ಕಿಲ್ಲವೇನೋ… ಯಾಕಂದ್ರೆ ಪ್ರಾಣಿ, ಪಕ್ಷಿ, ಜೀವ ಜಂತುಗಳ ಲೋಕ ಅಷ್ಟೊಂದು ವಿಸ್ತಾರವಾಗಿದೆ. ಅದರಲ್ಲಿಯೇ ನಾವೆಲ್ಲ ಕಣ್ಣರಳಿಸಿ ನೋಡುವಂಥ ವಿಸ್ಮಯದ ವಿಚಾರಗಳೂ ಇದ್ದಾವೆ.
ಕಣ್ಣಿಗೆ ಕಾಣದ ಜೀವಿಗಳ ಮಾತು ಹಾಗಿರಲಿ. ನಮಗೆ ತೀರಾ ಪರಿಚಿತ ಎಂಬಂಥಾ ಪ್ರಾಣಿಗಳ ಬಗ್ಗೆಗೂ ನಮಗೆ ಗೊತ್ತಿಲ್ಲದಿರುವ ಅದೆಷ್ಟೋ ಅಂಶಗಳಿದ್ದಾವೆ. ನೋಡಿದರೆ ಬರಸೆಳೆದು ಮುದ್ದು ಮಾಡಬೇಕೆನ್ನಿಸುವಷ್ಟು ಮುದ್ದುಮುದ್ದಾಗಿರೋ ಮೊಲಗಳ ಬಗ್ಗೆಯೂ ನಮಗೆ ಗೊತ್ತಿಲ್ಲದಿರೋ ಅನೇಕ ಸಂಗತಿಗಳಿದ್ದಾವೆ. ಮೊಲಗಳು ಸಸ್ಯಾಹಾರಿಗಳು. ತರಕಾರಿ ಸೊಪ್ಪು ಸೆದೆಗಳನ್ನವು ಚಪ್ಪರಿಸಿ ತಿಂದು ತೃಪ್ತವಾಗುತ್ತವೆ. ಆದರೆ ಅವುಗಳಿಗೆ ಏನಾದರೂ ಒತ್ತಡವಾದ್ರೆ ಮಾತ್ರ ತಮ್ಮ ಬಳಗದಲ್ಲಿರೋ ಚಿಕ್ಕ ಮೊಲಗಳಿಗೆ ಗ್ರಹಚಾರ ಕಾಡಿತೆಂದೇ ಅರ್ಥ.
ಯಾಕಂದ್ರೆ ಇಂಥಾ ಒತ್ತಡದ ಸಂದರ್ಭದಲ್ಲಿ ಮೊಲಗಳು ಪುಟ್ಟ ಮೊಲಗಳನ್ನು ಕೊಂದು ತಿನ್ನುತ್ತವೆ. ಅದು ಅವುಗಳ ಪಾಲಿಗೆ ಒತ್ತಡ ನಿವಾರಣೆಯ ಮಾರ್ಗವಂತೆ. ನಾಯಿಗಳು ಒಂದಷ್ಟು ಮರಿ ಹಾಕಿದರೆ ಹುಟ್ಟಿದ ಕೆಲವೇ ಅವಧಿಯಲ್ಲಿ ಒಂದೆರಡು ಮರಿಗಳನ್ನ ತಿನ್ನುತ್ತವೆ. ಆದರೆ ಆ ನಂತರದಲ್ಲಿ ಮರಿಗಳಿಗೆ ತುಸುವೂ ನೋವಾಗದಂತೆ ಜತನದಿಂದ ನೋಡಿಕೊಳ್ತಾವೆ. ಆದರೆ ಮೊಲಗಳು ಮಾತ್ರ ಕೊಂಚ ದೊಡ್ಡವಾಗಿ ಪುಟು ಪುಟು ಓಡಾಡಿಕೊಂಡಿರೋ ತನ್ನದೇ ಕೂಸುಗಳನ್ನು ಚಪ್ಪರಿಸಿ ತಿನ್ನಲೂ ಹಿಂದೇಟು ಹಾಕೋದಿಲ್ಲ.