ನೀರಿನಾಳದಲ್ಲಿ ಬದುಕೋ ಜೀವಿಗಳು ಮನುಷ್ಯರೊಂದಿಗೆ ನಿಕಟ ಸಾಂಗತ್ಯ ಹೊಂದೋದು ಅಪರೂಪ. ಪ್ರತಿನಿತ್ಯ ಕಣ್ಣೆದುರೋ ಓಡಾಡಿದರೂ ಕೂಡಾ ಮೀನುಗಳು ಮನುಷ್ಯರನ್ನು ಕಂಡರೆ ಸದಾ ಸೇಫ್ ಆಗಿರಲು ಹವಣಿಸುತ್ತವೆ. ಆದರೆ ಡಾಲ್ಫಿನ್ ಮಾತ್ರ ಅದಕ್ಕೆ ತದ್ವಿರುದ್ಧ. ಅದು ಮನುಷ್ಯರ ಎಲ್ಲ ಭಾವನೆಗಳಿಗೂ ಪ್ರತಿ ಸ್ಪಂದಿಸುವ ಅದ್ಭುತ ಶಕ್ತಿಯನ್ನೊಳಗೊಂಡಿದೆ. ತರಬೇತಿ ಕೊಟ್ಟ ಡಾಲ್ಫಿನ್ಗಳು ಮನುಷ್ಯರು ಕಂಡಾಗ ಬಳಿ ಬರುತ್ತವೆ. ನಂಬಿಕೆ ಹುಟ್ಟಿದರೆ ಸುತ್ತಲೇ ಗಿರಕಿ ಹೊಡೆಯುತ್ತವೆ. ಇನ್ನೂ ಹತ್ತಿರಾದರೆ ಮುತ್ತಿಗೂ ಸಿಕ್ಕಿ ಸಂಭ್ರಮ ಪಡುವಂತೆ ಮಾಡುತ್ತವೆ. ಯಾರಿಗೇ ಆದರೂ ಪ್ರೀತಿ ಹುಟ್ಟವಷ್ಟು ಮುದ್ದು ಮುದ್ದಾಗಿರೋ ಡಾಲ್ಫಿನ್ಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಆದರೆ ಅವುಗಳ ಬಗ್ಗೆ ಹೆಚ್ಚಾಗಿ ಗೊತ್ತಿರದ ಅದೆಷ್ಟೋ ಅಚ್ಚರಿಗಳಿದ್ದಾವೆ.
ನೀರ ಮೇಲೆಯೇ ಮನುಷ್ಯರ ಕೈಗೆ ಸಿಕ್ಕು ಬಿಡುವ ಡಾಲ್ಫಿನ್ನುಗಳಿಗೆ ಅಸಾಧಾರಣವಾದ ಶಕ್ತಿ ಇರುತ್ತೆ. ಸಾಮಾನ್ಯವಾಗಿ ಎಲ್ಲ ಜಲಚರಗಳಿಗೂ ಸಾಕಷ್ಟು ಶಕ್ತಿ ಇರುತ್ತೆ. ಆದ್ರೆ ಡಾಲ್ಫಿನ್ನುಗಳು ಬರೋಬ್ಬರಿ ಸಾವಿರ ಅಡಿಗಳಷ್ಟು ಸಮುದ್ರದಾಳಕ್ಕೆ ಡೈವ್ ಹೊಡೆದು ಈಜಾಡಿಕೊಂಡು ಬರೋ ಸಾಮರ್ಥ್ಯವಿದೆಯಂತೆ. ಹೀಗೆ ಸದಾ ಆಕ್ಟೀವ್ ಆಗಿದ್ದುಕೊಂಡು ಆಹಾರಕ್ಕೇನೂ ಕೊರತೆ ಮಾಡಿಕೊಳ್ಳದ ಅವುಗಳು ಸರಿ ಸುಮಾರು ಐವತ್ತು ವರ್ಷಗಳಷ್ಟು ಕಾಲ ಮುದ್ದಾಗಿ ಬದುಕಿ ಬಿಡುತ್ತವೆ.
ಈ ಡಾಲ್ಫಿನ್ನುಗಳಲ್ಲಿ ನಾನಾ ಪ್ರಬೇಧಗಳಿದ್ದಾವೆ. ಅವುಗಳಲ್ಲಿ ಸರಿಸುಮಾರು ನಲವತ್ತು ವೆರೈಟಿಯ ಪ್ರಬೇಧಗಳಿದ್ದಾವೆ. ಆದರೆ ಆ ಗುಣಲಕ್ಷಣಗಳ ಭಿನ್ನತೆ ಇದ್ದರೂ ಕೂಡಾ ಅವೆಂದೂ ತಮ್ಮ ನಡುವೆ ಬೇಧ ಭಾವ ನುಸುಳದಂತೆ ನೋಡಿಕೊಳ್ಳುತ್ತವೆ. ಸ್ನೇಹಶೀಲತೆ ಅವುಗಳ ಹುಟ್ಟು ಗುಣ. ಒಂದು ವೇಳೆ ಅವುಗಳ ಗುಂಪಿನಲ್ಲಿ ಯಾವುದಾದರೂ ಡಾಲ್ಫಿನ್ ಗಾಯಗೊಂಡರೆ ಎಲ್ಲವೂ ಒಟ್ಟಾಗಿ ಸಹಾಯಕ್ಕೆ ನಿಲ್ಲುತ್ತವೆ. ತಮ್ಮದೇ ಆದ ರೀತಿಯಲ್ಲಿ ಚಿಕಿತ್ಸೆಯನ್ನೂ ಕೊಡುತ್ತವೆ. ಭಾರೀ ಬುದ್ಧಿವಂತ ಪ್ರಾಣಿಗಳೆನ್ನಿಸಿಕೊಂಡಿರೋ ಡಾಲ್ಫಿನ್ನುಗಳು ಆಹಾರ ಹುಡುಕೋದರಲ್ಲಿಯೂ ಪಂಟರ್ಗಳು. ಅವೆಷ್ಟು ಹುಶಾರೆಂದರೆ, ಮಲಗಿದ್ದಾಗಲೂ ಅವುಗಳ ಮೆದುಳಿನ ಅರ್ಧ ಭಾಗ ಎಚ್ಚರದ ಸ್ಥಿತಿಯಲ್ಲಿಟ್ಟಿರುತ್ತದೆಯಂತೆ!