ಅದೆಂಥಾ ಧೈರ್ಯಶಾಲಿಗಳೇ ಆಗಿದ್ದರೂ ಅವರನ್ನು ತನ್ನ ಗಾತ್ರದ ಮೂಲಕವೇ ಅಳ್ಳೆ ಅದುರಿಸಿಕೊಳ್ಳುವಂತೆ ಮಾಡೋ ತಾಖತ್ತಿರೋ ಪ್ರಾಣಿ ಆನೆ. ತನ್ನ ಗಾತ್ರದಷ್ಟೇ ಅಗಾಧವಾದ ಶಕ್ತಿಯನ್ನೊಳಗೊಂಡಿರೋ ಆನೆ ರೊಚ್ಚಿಗೆದ್ದಿತೆಂದರೆ ಕಂಟ್ರೋಲು ಮಾಡೋದು ಕಷ್ಟ. ಕಾಡಾನೆಗಳ ಕಥೆ ಹಾಗಿರಲಿ; ಸಾಕಿದ ಆನೆಗಳೂ ಕೂಡಾ ಮದವೇರಿ ಅಬ್ಬರಿಸೋ ಪರಿ ಭೀಕರವಾಗಿರುತ್ತೆ. ಇಂಥಾ ರೌದ್ರಾವತಾರಗಳ ಹೊರತಾಗಿ ಆನೆಯಷ್ಟು ಪಾಪದ, ಸೆನ್ಸಿಟಿವ್ ಆದ ಪ್ರಾಣಿ ಮತ್ತೊಂದಿರಲಾರದು. ಬಹುಶಃ ಆನೆಯೊಂದಿಗೆ ನಿಕಟ ನಂಟು ಹೊಂದಿರುವವರನ್ನು ಹೊರತಾಗಿಸಿದರೆ ಮತ್ಯಾರಿಗೂ ಅದೆಷ್ಟು ಸೆನ್ಸಿಟಿವ್ ಪ್ರಾಣಿ ಎಂಬುದರ ಅರಿವಿರಲು ಸಾಧ್ಯವಿಲ್ಲ.
ಮನುಷ್ಯರು ಪ್ರತೀ ಭಾವನೆಗಳನ್ನೂ ವ್ಯಕ್ತ ಪಡಿಸುತ್ತಾರೆ. ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ಸ್ಪಂದಿಸೋ ಶಕ್ತಿಯೂ ಮನುಷ್ಯರಿಗಿದೆ. ಯಾರಾದರೂ ಸತ್ತಾಗ, ಸೂತಕ ಆವರಿಸಿಕೊಂಡಾಗ ನಾವು ಮರುಗುತ್ತೇವೆ. ದುಃಖಿಸುತ್ತೇವೆ. ನಾಯಿಯಂಥಾ ಪ್ರಾಣಿಗಳನ್ನು ಹೊರತಾಗಿಸಿದರೆ ಮತ್ಯಾವ ಪ್ರಾಣಿಗಳೂ ಅಂಥಾ ಶಕ್ತಿ ಹೊಂದಿಲ್ಲ ಎಂದೇ ನಾವು ಭಾವಿಸುತ್ತೇವೆ. ಆದರೆ ಆ ವಿಚಾರದಲ್ಲಿ ದೈತ್ಯ ಗಾತ್ರದ ಆನೆ ನಾಯಿಯನ್ನೂ ಮೀರಿಸುತ್ತೆ. ವಿಶೇಷ ಅಂದ್ರೆ ಅದು ಸಹವರ್ತಿ ಆನೆಗಳು ಸತ್ತಾಗ ಮಾತ್ರವಲ್ಲದೇ ತಮ್ಮ ಸುತ್ತಲ ಯಾವುದೇ ಪ್ರಾಣಿಗಳು, ಮನುಷ್ಯರು ಸತ್ತಾಗಲೂ ದುಃಖಿಸೋ ಗುಣ ಹೊಂದಿವೆಯಂತೆ.
ಆನೆಗಳ ಚಲನವಲನ, ಅವುಗಳ ಮನಸ್ಥಿತಿಯನ್ನು ಸಾಕಷ್ಟು ವರ್ಷಗಳ ಕಾಲ ಅಧ್ಯಯನಕ್ಕೊಳಪಡಿಸಿದವರೇ ಈ ವಿಚಾರವನ್ನು ಅನುಮೋದಿಸ್ತಾರೆ. ಅಂದಹಾಗೆ ಅಂಥಾ ಸೂತಕದ ಸಂದರ್ಭದಲ್ಲಿ ಅವುಗಳ ವರ್ತನೆ ಬದಲಾಗುತ್ತೆ. ಆ ದುಃಖವನ್ನವು ತಮ್ಮದೇ ರೀತಿಯಲ್ಲಿ ಹೊರ ಹಾಕುತ್ತವೆ. ಕೆಲವೊಮ್ಮೆ ಅವುಗಳ ಕಣ್ಣುಗಳಲ್ಲಿ ಧಾರಾಕಾರವಾಗಿ ಕಣ್ಣೀರು ಜಿನುಗುತ್ತೆ. ಅಂಥಾದ್ದೊಂದು ಸೆಂಟಿಮೆಂಟ್ ಇಲ್ಲದೇ ಹೋಗಿದ್ದರೆ ಆನೆ ಹುಲು ಮಾನವರ ಅಂಕೆಗೆ ಸಿಗಲು ಸಾಧ್ಯವೇ ಇರುತ್ತಿರಲಿಲ್ಲ. ಅದಷ್ಟು ಅಗಾಧ ಗಾತ್ರದ, ಅಷ್ಟೇ ಶಕ್ತಿಯ ಆನೆಯನ್ನು ಸಣಕಲು ಮಾವುತ ಕಂಟ್ರೋಲು ಮಶಾಡ್ತಾನೆಂದರೆ ಅದು ಆತನ ಶಕ್ತಿ ಖಂಡಿತಾ ಅಲ್ಲ. ಅದು ಆನೆಗಿರೋ ಭಾವುಕ ಮನಸ್ಥಿತಿಯ ಪರಿಣಾಮವಷ್ಟೆ!