ದೀಪಾವಳಿ ಬಂದು ಹೋಗಿದೆ. ಆ ಹಬ್ಬ ನಮ್ಮ ದೇಶಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲ್ಪಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾತ್ರ ಈ ಹಬ್ಬ ಬಂತೆಂದರೆ ಬಾಂಬೆ, ಬೆಂಗಳೂರಿನಂಥಾ ಮಹಾ ನಗರದ ಮಂದಿ ತತ್ತರಿಸಿ ಹೋಗುವಂತಾಗಿದೆ. ಮೊದಲೇ ಅಂಥಾ ನಗರಗಳಲ್ಲಿ ವಾಯುಮಾಲಿನ್ಯವೆಂಬುದು ವಿಕೋಪಕ್ಕೆ ಹೋಗಿದೆ. ಅಂಥಾದ್ದರ ನಡುವೆ ಗಲ್ಲಿಗಲ್ಲಿಗಳಲ್ಲಿ ಅವ್ಯಾಹತವಾಗಿ ಪಟಾಕಿ ಸಿಡಿಸುತ್ತಾ ವಾತಾವರಣವನ್ನು ಮತ್ತಷ್ಟು ಹಡಾಲೆಬ್ಬಿಸಲಾಗುತ್ತಿದೆ. ಅದರ ಪರಿಣಾಮ ಎಂಥಾದ್ದಿದೆ ಅನ್ನೋದಕ್ಕೆ ಮುಂಬೈ ನಗರದಲ್ಲಿ ಬೆಚ್ಚಿಬೀಳುವಂಥಾ ಉದಾಹರಣೆಗಳು ಸಿಕ್ಕಿವೆ.
ಮುಂಬೈನಲ್ಲಿ ಪಟಾಕಿ ಸಿಡಿತದಿಂದ ವಾತಾವರಣ ಅದೆಷ್ಟು ಹದಗೆಟ್ಟಿದೆ ಎಂದರೆ, ಈ ದೀಪಾವಳಿಯ ನಂತರದಲ್ಲಿ ಅಲ್ಲಿ ಜನ ಉಸಿರಾಟದ ಸಮಸ್ಯೆಯಿಂದ ಬಳಲುತಿದ್ದಾರಂತೆ. ಈ ನಗರದ ವಿವಿಧ ಭಾಗಗಳ ವೈದ್ಯರು ಇಂಥಾದ್ದೊಂದು ಭೀಕರ ಪರಿಣಾಮವನ್ನು ಪತ್ತೆಹಚ್ಚಿದ್ದಾರೆ. ಇಲ್ಲಿನ ಬಹುತೇಕ ವೈದ್ಯರ ಬಳಿಗೆ ದಿನನಿತ್ಯ ಸಾಕಷ್ಟು ಪ್ರಮಾಣದಲ್ಲಿ ಉಸಿರಾಟದ ಸಮಸ್ಯೆಯ ಕೇಸುಗಳುಯ ಬರುತ್ತಿವೆಯಂತೆ. ಆ ಪ್ರಮಾಣ ಉಲ್ಬಣಿಸಿರೋದು ಈ ದೀಪಾವಳಿಯ ನಂತರದಲ್ಲಿಯೇ.
ಇನ್ನುಳಿದಂತೆ ಅಸ್ತಮಾ ರೋಗಿಗಳಂತೂ ಈ ದೀಪಾವಳಿಯ ಪಟಾಕಿ ಏಟಿನಿಂದ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ನಿರಂತವಾರ ಚಿಕಿತ್ಸೆ ಪಡೆದು ಒಂದಷ್ಟು ತಹಬಂಧಿಗೆ ತಂದುಕೊಂಡಿದ್ದ ರೋಗಿಗಳೂ ಕೂಡಾ ಸಮಸ್ಯೆ ಅತಿಯಾಗಿ ಆಸ್ಪತ್ರೆಗಳಿಗೆ ಎಡತಾಕುವಂತಾಗಿದೆ. ಇದೆಲ್ಲವೂ ಪಟಾಕಿಯ ನೇರ ಪರಿಣಾಮವೇ. ಅದು ಎಲ್ಲ ನಗರಗಳಲ್ಲಿಯೂ ಮೇರೆ ಮೀರಿಕೊಂಡಿದೆ. ಪಟಾಕಿ ನಿಷೇಧ ಅಂತ ಬಂದಾಗ ಹಿಂದೂ ಹಬ್ಬಗಳಿಗೆ ಮಾತ್ರ ಕಡಿವಾಣ ಯಾಕೆಂದು ಕೆಲ ಮಂದಿ ಬೊಬ್ಬೆ ಹೊಡೆಯುತ್ತಾರೆ. ಆದರೆ ಮಾಲೀನ್ಯಗೊಂಡ ವಾತಾವರಣಕ್ಕೆ ಧರ್ಮಗಳ ಬೇಧವಿಲ್ಲ ಎಂಬ ಕಾಮನ್ಸೆನ್ಸನ್ನೇ ಅಂಥಚವರು ಮರೆತು ಬಿಡುತ್ತಾರೆ!