ತಮ್ಮಿಷ್ಟದ ಕ್ಷೇತ್ರದಲ್ಲಿ ಮಹತ್ತರವಾದದ್ದನ್ನು ಸಾಧಿಸಿ ಸೆಲೆಬ್ರಿಟಿಗಳಾಗಬೇಕನ್ನೋದು ಬಹುತೇಕರ ಬಯಕೆ. ಆ ಗೆಲುವಿನ ಪ್ರಭೆ, ಅದರ ಮುದಗಳನ್ನೆಲ್ಲ ಇಂಚಿಂಚಾಗಿ ಅನುಭವಿಸಬೇಕೆಂಬ ಕನಸೇ ಹಲವರನ್ನು ಅದರ ಹತ್ತಿರಕ್ಕಾದರೂ ಕೊಂಡೊಯ್ದು ಬಿಡೋದಿದೆ. ಹಾಗೊಂದು ಸೆಲೆಬ್ರಿಟಿ ಪಟ್ಟ ಸಿಕ್ಕಾದ ಮೇಲಿನ ಫಜೀತಿಗಳಿವೆಯಲ್ಲಾ? ಅವು ಅನುಭವಿಸಿದವರಿಗೆ ಮಾತ್ರವೇ ಗೊತ್ತಿರಲು ಸಾಧ್ಯವೇನೋ. ಇದೀಗ ಪ್ರಸಿದ್ಧ ಕ್ರಿಕೆಟಿಗ ವಿರಾಟ್ ಕೊಹ್ಲಿಗೂ ಅಂಥಾದ್ದೊಂದು ಅನುಭವವಾಗಲಾರಂಭಿಸಿದೆ. ಪ್ರಸಿದ್ಧಿಯೇ ಶಾಪವೇನೋ ಎಂಬಂಥಾ ಭಾವವೊಂದು ಕೊಹ್ಲಿಯನ್ನು ಆವರಿಸಿಕೊಂಡು ಬಿಟ್ಟಿದೆ!
ಯಶಸ್ಸಿನ ಉತ್ತುಂಗದಲ್ಲಿರೋ ವಿರಾಟ್ಗೆ ಹಾಗನ್ನಿಸಲು ಕಾರಣವೇನೆಂಬ ಪ್ರಶ್ನೆಗೆ, ಖುದ್ದು ಆತನೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಚಾರವೊಂದು ಉತ್ತರವಾಗುತ್ತದೆ. ವಿರಾಟ್ ಇಲ್ಲದ ವೇಳೆಯಲ್ಲಿ ಅಭಿಮಾನಿಯೋರ್ವ ಆತ ಉಳಿದುಕೊಂಡಿದ್ದ ಹೊಟೇಲ್ ರೂಮಿನೊಳಗಿನ ಚಿತ್ರಣಗಳನ್ನು ಸೆರೆ ಹಿಡಿದಿದ್ದಾನೆ. ಅದುವೇ ವಿರಾಟ್ ಒಂದು ಮಟ್ಟಕ್ಕೆ ರೊಚ್ಚಿಗೆದ್ದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ಪ್ರೇರೇಪಿಸಿದೆ.
ಒಂದು ಮನೆಯಾಗಲೀ, ವಾಸಿಸುವ ಕೋಣೆಯಾಗಲಿ, ಅದೊಂದು ಪಕ್ಕಾ ಖಾಸಗೀ ಸ್ಥಳ. ಸೆಲೆಬ್ರಿಟಿಯಾಗಿದ್ದರೂ, ಸಾಮಾನ್ಯ ಮನುಷ್ಯನೇ ಆಗಿದ್ದರೂ ಅದನ್ನು ಸಾರ್ಜಜನಿಕಗೊಳಿಸಲು ಇಷ್ಟಪಡೋದಿಲ್ಲ. ಹೀಗಿರುವಾಗ ತನ್ನ ಕೋಣೆಯ ದೃಷ್ಯಾವಳಿಗಳನ್ನು ಅಭಿಮಾನದ ಹೆಸರಲ್ಲಿ ಸೆರೆ ಹಿಡಿಯುತ್ತಾರಾದರೆ ತನ್ನ ಖಾಸಗೀತನಕ್ಕೆ ಯಾವ ಘನತೆ ಉಳಿಯಿತು ಅಂತ ಕೋಹ್ಲಿ ಪ್ರಶ್ನಿಸಿದ್ದಾರೆ. ಈ ವಿದ್ಯಮಾನದಿಂದ ತನಗೆ ತೀವ್ರ ಆಘಾತವಾಗಿರೋದಾಗಿಯೂ ಹೇಳಿಕೊಂಡಿದ್ದಾರೆ. ಈ ಅಭಿಮಾನಿಗಳಂತೂ ಒಮ್ಮೊಮ್ಮೆ ತೀರಾ ಅತಿರೇಕಕ್ಕಿಳಿದು ಬಿಡುತ್ತಾರೆ.ಇನ್ನು ಮುಂದಾದರೂ ಅಂಥಾ ಹುಚ್ಚಾಟಗಳ ನನು ದೂರವಿಡೋದೊಳಿತು. ಅದೆಂಥಾ ಆರಾಧನೆ ಇದ್ದರೂ ಎಲ್ಲರ ಖಾಸಗೀತನವನ್ನು ಗೌರವಿಸೋದು ಅವರಿಗೆ ಕೊಡುವ ಗೌರವವೂ ಹೌದು!