ಇದೀಗ ವಿಶ್ವಾದ್ಯಂತ ಕಾಂತಾರ ಚಿತ್ರ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಕರ್ನಾಟಕಕ್ಕೆ ಮಾತ್ರವೇ ಸೀಮಿತವಾಗಿ ಈ ಸಿನಿಮಾ ಮಾಡಿ, ಇದೀಗ ಪ್ಯಾನಿಂಡಿಯಾ ಮಟ್ಟದಲ್ಲಿ ಹೀರೋ ಆಗಿ ಮಿಂಚುತ್ತಿರೋ ರಿಷಬ್ ಶೆಟ್ಟಿಯ ಹವಾ ಕಂಡು ಎಲ್ಲರೂ ಅವಾಕ್ಕಾಗಿದ್ದಾರೆ. ಯಾವ ದಿಕ್ಕಿನಿಂದ ನೋಡಿದರೂ ಕೂಡಾ ಇದೊಂದು ಸಮ್ಮೋಹಕ ಗೆಲುವೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಅತ್ತ ಬಾಲಿವುಡ್ ಸೇರಿದಂತೆ ಎಲ್ಲ ಚಿತ್ರರಂಗಗಳ ನಟ ನಟಿಯರೂ ಈ ಸಿನಿಮಾ ನೋಡಿ ಅಚ್ಚರಿ ಪಟ್ಟುಕೊಂಡಿದ್ದಾರೆ. ರಿಷಬ್ ಶೆಟ್ಟಿಯನ್ನು ಮನಸಾರೆ ಮೆಚ್ಚಿ ಮಾತಾಡುತ್ತಿದ್ದಾರೆ. ಆದರೆ, ರಿಷಬ್ ಶೆಟ್ಟಿಯ ಸಿನಿಮಾದಿಂದಲೇ ನಟಿಯಾಗಿ, ಈಗ ಪ್ಯಾನಿಂಡಿಯಾ ಮಟ್ಟದಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಮಾತ್ರ ಈವರೆಗೂ ಕಾಂತಾರ ಬಗ್ಗೆ ತುಟಿ ಬಿಚ್ಚಿಲ್ಲ!
ರಶ್ಮಿಕಾ ಮಂದಣ್ಣ ಕಾಂತಾರ ಚಿತ್ರವನ್ನು ನೋಡಿ ಅದರ ಬಗ್ಗೆ ಏನೂ ಮಾತಾಡದೆ ಮುಗುಮ್ಮಾಗಿದ್ದಾಳಾ? ನೋಡಲು ಪುರಸೊತ್ತು ಸಿಗದೆ ಸುಮ್ಮನಾಗಿದ್ದಾಳಾ ಅಂತೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆಗಳಾಗುತ್ತಿದ್ದಾವೆ. ಬಹುತೇಕರು ಇದು ಗೆಲುವೆಂಬುದು ರಶ್ಮಿಕಾಳ ನೆತ್ತಿಗೇರಿರೋದರ ಪರಿಣಾಮ ಅಂತೆಲ್ಲ ಮೂದಲಿಸುತ್ತಿದ್ದಾರೆ. ಆದರೂ ಆ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ಕೊಡದಿದ್ದ ರಶ್ಮಿಕಾ, ಕಡೆಗೂ ದೂರದ ಮುಂಬೈನಲ್ಲಿ ನಿಂತು ಆ ಬಗ್ಗೆ ಮಾತಾಡಿದ್ದಾಳೆ. ಈ ಮೂಲಕ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಬೇರೊಂದು ದಿಕ್ಕಿನ ಮೂದಲಿಕೆಗೆ, ಕಟು ಟೀಕೆಗೆ ಗುರಿಯಾಗಿದ್ದಾಳೆ.
ಮುಂಬೈನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ರಶ್ಮಿಕಾ ಫೋಟೋಗಳಿಗೆ ಪೋಸು ಕೊಡುತ್ತಿದ್ದಳು. ಈ ಸಂದರ್ಭದಲ್ಲಿ ಆಕೆ ಮೂಲ ಅರಿತಿದ್ದ ಪತ್ರಕರ್ತನೋರ್ವ ‘ನೀವು ಕಾಂತಾರ ಚಿತ್ರ ನೋಡಿದ್ದೀರಾ’ ಅಂತೊಂದು ಪ್ರಶ್ನೆ ಕೇಳಿದ್ದಾನೆ. ಅದಕ್ಕೆ ಗಂಭೀರವಾಗಿ ಉತ್ತರಿಸಿದ್ದರೆ ರಶ್ಮಿಕಾಳ ಘನತೆ ತುಸುವಾದರೂ ಉಳಿಯುತ್ತಿತ್ತೇನೋ. ಆದರೆ ಆಕೆ ವಿಚಿತ್ರವಾದ ಆಂಗಿಕ ಅಭಿನಯ ಮಾಡುತ್ತಾ, ಉಡಾಫೆಯ ಶೈಲಿಯಲ್ಲಿ ನೋಡಿಲ್ಲ ಅಂತ ಉತ್ತರಿಸಿದ್ದಾಳೆ. ಬಳಿಕ ಬೆಂಗಳೂರಿಗೆ ಹೋದ ನಂತರ ನೋಡುವುದಾಗಿ ಅದೇ ಧಾಟಿಯಲ್ಲಿ ಉಸುರಿದ್ದಾಳೆ.
ಹೀಗೊಂದು ಹೇಳಿಕೆ ರಶ್ಮಿಕಾ ಕಡೆಯಿಂದ ತೂರಿ ಬರುತ್ತಲೇ ನೆಟ್ಟಿಗರು ಗರಂ ಆಗಿದ್ದಾರೆ. ಇದು ಅತಿರೇಕದ ವರ್ತನೆ ಅಂತಲೇ ಬಹುತೇಕರು ಅಭಿಪ್ರಾಯ ಪಡುತ್ತಿದ್ದಾರೆ. ಅಷ್ಟಕ್ಕೂ ಈ ರಶ್ಮಿಕಾ ಮಂದಣ್ಣ ನಟಿಯಾಗಿ ಹೊರ ಹೊಮ್ಮಿದ್ದೇ ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಚಿತ್ರದ ಮೂಲಕ. ಅದರ ಗೆಲುವಿನ ಪ್ರಭೆಯಲ್ಲಿಯೇ ಆಕೆ ಮುಂದೆ ಒಂದಷ್ಟು ಅವಕಾಶ ಗಿಟ್ಟಿಸಿಕೊಂಡಳೆಂಬುದರಲ್ಲಿ ಅತಿಶಯವಾದುದೇನೂ ಇಲ್ಲ. ಆ ನಂತರ ರಕ್ಷಿತ್ ಶೆಟ್ಟಿಯೊಂದಿಗಿನ ಲವ್ವು, ಎಂಗೇಜ್ಮೆಂಟು ಮತ್ತು ಬ್ರೇಕಪ್ಪುಗಳೆಲ್ಲವೂ ಜರುಗಿದವು. ಹಾಗೆ ಎದ್ದು ಹೋದ ರಶ್ಮಿಕಾ ರಕ್ಷಿತ್ ಶೆಟ್ಟಿ ಮಾತ್ರವಲ್ಲದೇ ಒಂದಿಡೀ ಪಟಾಲಮ್ಮಿನ ಮೇಲೆಯೇ ಮುನಿಸಿಟ್ಟುಕೊಂಡಿದ್ದಾಳೆಂದೂ ಹೇಳಲಾಗುತ್ತಿದೆ. ಅದೇ ಮುನಿಸು ಆಕೆಯನ್ನು ಕಾಂತಾರ ದರ್ಶನವಾಗದಂತೆ ತಡೆದಿದ್ದರೂ ಅಚ್ಚರಿಯೇನಿಲ್ಲ. ಇದೆಲ್ಲ ಏನೇ ಇದ್ದರೂ ಚಂದುಳ್ಳಿ ರಶ್ಮಿಕಾಳದ್ದು ಹತ್ತಿದ ಏಣಿ ಒದೆಯೋ ಚಾಳಿ ಎಂಬುದೀಗ ಬಟಾಬಯಲಾಗಿದೆ!