ಪತಂಜಲಿ ಅಂತೊಂದು ಪ್ರಾಡಕ್ಟ್ ಆರಂಭಿಸಿ, ಅದರಲ್ಲೇ ನಾನಾ ಗಿಮಿಕ್ಕುಗಳನ್ನು ನಡೆಸುತ್ತಾ ಕೈತುಂಬಾ ಕಾಸು ಮಾಡಿಕೊಂಡ ಪಕ್ಕಾ ವ್ಯಾಪಾರಿ ಬಾಬಾ ರಾಮ್ದೇವ್. ಯೋಗಗುರು ಅಂತಲೇ ಖ್ಯಾತರಾಗಿದ್ದುಕೊಂಡು, ಆಸನಗಳ ಜೊತೆಗೆ ರಾಜಕಾರಣದೊಂದಿಗೆ ಪದ್ಮಾಸನ ಹಾಕಿ ಕೂಡುವ ಕಲೆಯನ್ನೂ ಕೂಡಾ ರಾಮ್ದೇವ್ ಕರಗತ ಮಾಡಿಕೊಂಡಿದ್ದಾರೆ. ದೇಸೀ ಉತ್ಪನ್ನಗಳೆಂಬ ಭ್ರಮೆ ಬಿತ್ತುತ್ತಲೇ ಭರ್ಜರಿಯಾಗಿ ಬೆಳೆ ತೆಗೆದಿರೋ ಬಾಬಾ, ಆಗಾಗ ಒಂದಷ್ಟು ಹೇಳಿಕೆಗಳ ಮೂಲಕ ವಿವಾದಗಳಿಗೂ ಕಾರಣವಾಗೋದಿದೆ.
ಇದೀಗ ಸತ್ಯದ ಭೂಮಿಕೆಗೆ ಹತ್ತಿರವಾದ, ವಿವಾದವೊಂದು ತಣ್ಣಗೆ ಹೊತ್ತಿಕೊಳ್ಳುವ ಗುಣಲಕ್ಷಣವಿರುವ ಕೆಲ ಮಾತುಗಳು ಬಾಬಾ ಕಡೆಯಿಂದ ಹೊರಬಿದ್ದಿವೆ. ಉತ್ತರಪ್ರದೇಶದಲ್ಲಿ ಡ್ರಗ್ಸ್ ವಿರೋಧಿ ಅಭಿಯಾನವೊಂದು ನಡೆಯುತ್ತಿದೆ. ಅದಕ್ಕೆ ಬಾಬಾ ರಾಮ್ದೇವ್ ಚಾಲನೆ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿಯೇ ಡ್ರಗ್ಸ್ ಮಾಫಿಯಾದ ಬಗ್ಗೆ, ಅದು ದೇಶಾದ್ಯಂತ ಹಬ್ಬುತ್ತಿರುವ ಬಗ್ಗೆ ಮಾತಾಡಿರುವ ರಾಮ್ದೇವ್, ಕೆಲ ಬಾಲಿವುಡ್ ನಟರಿಗೂ ಡ್ರಗ್ಸ್ ಸೇವಿಸುವ ಚಟವಿದೆ ಅಂತ ನೇರಾನೇರ ಆರೋಪ ಮಾಡಿದ್ದಾರೆ.
ಬಾಲಿವುಡ್ ನಟ ನಟಿಯರಲ್ಲಿ ಬಹುತೇಕರು ಡ್ರಗ್ಸ್ ಚಟಕ್ಕೆ ದಾಸರಾಗಿದ್ದಾರೆ ಅಂದಿರುವ ಬಾಬಾ, ಸಲ್ಮಾನ್ ಖಾನ್ ಮೇಲೆ ನೇರವಾಗಿಯೇ ಆರೋಪ ಮಾಡಿದ್ದಾರೆ. ಬಾಲಿವುಡ್ ಪ್ರಸಿದ್ಧ ನಟ ಸಲ್ಮಾನ್ ಖಾನ್ ಸೇರಿದಂತೆ ಅನೇಕರು ಡ್ರಗ್ಸ್ ತೆಗೆದುಕೊಳ್ಳುತ್ತಾರೆಂದು ಆರೋಪಿಸಿದ್ದಾರೆ. ಅಮೀರ್ ಖಾನ್ ಡ್ರಗ್ಸ್ ಸೇವಿಸುತ್ತಾರೆಂಬ ಬಗ್ಗೆ ನಿಖರವಾಗಿ ಗೊತ್ತಿಲ್ಲ. ಅದು ಭಗವಂತನಿಗೆ ಮಾತ್ರ ಗೊತ್ತು ಅಂದಿರುವ ರಾಮ್ದೇವ್ ಡ್ರಗ್ಸ್ ಮಾಫಿಯಾ ಸುತ್ತುತ್ತಿರೋದೇ ಬಾಲಿವುಡ್ ಕೇಂದ್ರದಿಂದ ಎಂಬಂಥಾ ಮಾತುಗಳನ್ನಾಡಿದ್ದಾರೆ. ಇದು ಒಂದಷ್ಟು ವಿವಾದವೆಬ್ಬಿಸುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.