ಆಹಾರವನ್ನು ಪ್ರಸಾದವೆಂದೇ ಪರಿಗಣಿಸಿ ಕಣ್ಣಿಗೊತ್ತಿಕೊಂಡು ತಿನ್ನೋ ಪರಂಪರೆ ನಮ್ಮಲ್ಲಿ ಚಾಲ್ತಿಯಲ್ಲಿದೆ. ತಿನ್ನೋ ಆಹಾರದ ವಿಚಾರದಲ್ಲಿ ಸಣ್ಣಗೊಂದು ಅಹಮ್ಮಿಕೆ ತೋರಿಸೋದನ್ನೂ ಪಾಪವೆಂದೇ ಹೇಳಲಾಗುತ್ತೆ. ಅದರಲ್ಲಿ ಯಾವುದೇ ಥರದ ವಿಕೃತಿ ನಡೆಸೋದನ್ನು ನಾವ್ಯಾರೂ ಸಹಿಸಿಕೊಳ್ಳೋದಾಗಲಿ, ಅರಗಿಸಿಕೊಳ್ಳೋದಾಗಲಿ ಸಾಧ್ಯವೇ ಇಲ್ಲ. ಆದರೆ ಕೆಲ ದೇಶಗಳಲ್ಲಿ ಕೇಳಿದರೇನೇ ಅಸಹ್ಯವಾಗುವಂಥಾ ಆಹಾರ ಕ್ರಮಗಳು ಚಾಲ್ತಿಯಲ್ಲಿವೆ. ನಾವು ಚೀನಾದಲ್ಲಿ ರೂಢಿಗತವಾಗಿರೋ ಆಹಾರ ಕ್ರಮಗಳನ್ನು ಕಂಡೇ ವಾಕರಿಕೆ ಬರಿಸಿಕೊಳ್ಳುತ್ತೇವೆ. ಆದರೆ, ಅದನ್ನೇ ಮೀರಿಸುವಂಥಾ ಒಂದಷ್ಟು ಆಹಾರ ಪದ್ಧತಿಗಳೂ ರೂಢಿಯಲ್ಲಿದ್ದಾವೆ.
ನಮ್ಮಲ್ಲಿ ಬಾಯಲ್ಲಿ ನೀರೂರಿಸುವಂಥಾ ಆಹಾರ ಮೇಳಗಳು, ಪ್ರದರ್ಶನಗಳು ನಡೆಯೋದು ಮಾಮೂಲು. ಆದರೆ ಸ್ಪೀಡನ್ ದೇಶದ ಮಲ್ಮೋ ಎಂಬಲ್ಲಿ ನಡೆಯೋದು ಮಾತ್ರ ಅತ್ಯಂತ ಅಸಹ್ಯದ ಆಹಾರ ಪ್ರದರ್ಶನ. ಬಹುಶಃ ಅಲ್ಲಿನ ಫುಡ್ ಮ್ಯೂಸಿಯಂನಲ್ಲಿ ವರ್ಷಕ್ಕೊಮ್ಮೆ ಪ್ರದರ್ಶನಕ್ಕಿಡುವ ಚಿತ್ರವಿಚಿತ್ರ ಆಹಾರಗಳ ವಿವರ ಕೇಳಿದರೆ ಒಂದು ವಾರ ಊಟ ಸೇರೋದು ಡೌಟು. ಯಾಕೆಂದರೆ ಅಲ್ಲಿ ನಾವು ಕಲ್ಪಿಸಿಕೊಳ್ಳಲೂ ಆಗದ ಆಹಾರಗಳಿರುತ್ತವೆ. ಅದನ್ನು ಕಂಡು, ತಿಂದು ಕಿಕ್ಕೇರಿಸಿಕೊಳ್ಳಲು ಜನಜಂಗುಳಿಯೇ ನೆರೆಯುತ್ತೆ.
ಅಲ್ಲಿ ಇಡೀ ಆಮೆಯ ಸೂಪ್, ಕುರಿಯ ಅಂಗಾಂಗಗಳಿಂದ ತಯಾರಿಸಿದ ಸೂಪ್ಗಳು, ಕುರಿಯ ಕಣ್ಣು ಗುಡ್ಡೆಯಿಂದ ಮಾಡಿದ ರೆಸಿಪಿ, ಚೆನ್ನಾಗಿ ಹುರಿದ ಜೇಡ, ಬಾವಲಿ ಮತ್ತು ವಿವಿಧ ಹಣ್ಣುಗಳನ್ನ ಸೇರಿಸಿ ಮಾಡಿದ ಸೂಪ್ ಸೇರಿದಂತೆ ಅಸಹ್ಯ ಅನ್ನಿಸುವಂಥಾ ಎಂಬತ್ತು ವೆರೈಟಿಯ ಆಹಾರಗಳನ್ನಿಲ್ಲಿ ಪ್ರದರ್ಶನಕ್ಕಿಡಲಾಗುತ್ತೆ. ಅಂದಹಾಗೆ ಈ ಆಹಾರ ಮೇಳದಲ್ಲಿ ಇಲಿಯಿಂದ ಮಾಡಿದ ವೈನ್ ಭಲೇ ಪ್ಸಿದ್ಧಿ ಪಡೆದಿದೆಯಂತೆ. ಇಲ್ಲಿನ ಚಿತ್ರ ವಿಚಿತ್ರ ಆಹಾರಗಳನ್ನು ಇಲಿ ವೈನ್ನೊಂದಿಗೆ ಸವಿಯೋದಂದ್ರೆ ಅಲ್ಲಿನ ಜನರಿಗೆ ಎಲ್ಲಿಲ್ಲದ ಖುಷಿ.