ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಭೌತಿಕವಾಗಿ ಮರೆಯಾಗಿ ವರ್ಷವೊಂದು ಉರುಳಿ ಹೋಗಿದೆ. ಕಳೆದ ವರ್ಷ ಸರಿಯಾಗಿ ಈ ಸಮಯಕ್ಕೆ ಹಬ್ಬಿಕೊಂಡಿದ್ದ ಸೂತಕ, ದಿಕ್ಕುದೆಸೆಗಳಿಲ್ಲದೆ ಹರಿದಿದ್ದ ಕಣ್ಣೀರ ಕೋಡಿ ಮತ್ತು ಪ್ರೀತಿಯ ಅಪ್ಪುವನ್ನು ಮರಳಿ ಪಡೆಯುವ ಕೋರಿಕೆಗಳೆಲ್ಲವೂ ಇನ್ನೂ ಹಸಿಯಾಗಿವೆ. ಈ ಕ್ಷಣಕ್ಕೂ ಇಲ್ಲೇ ಎಲ್ಲೋ ಹೋಗಿರೋ ಅಪ್ಪು ಮರಳಿ ಬರಬಹುದೆಂಬಂಥಾ ಭಾವುಕತೆಯ ಪಸೆ ಕೋಟಿ ಮನಸುಗಳಲ್ಲಿ ಹಾಗೆಯೇ ಉಳಿದುಕೊಂಡಿದೆ. ಈ ಹಂತದಲ್ಲಿ ಪುನೀತ್ರನ್ನು ನಾನಾ ರೀತಿಯಲ್ಲಿ ಸ್ಮರಿಸಿಕೊಳ್ಳುತ್ತಾ, ಅವರ ಪ್ರಾಂಜಲ ನಗುವನ್ನು ಧ್ಯಾನಿಸುತ್ತಾ ಅಭಿಮಾನಿ ಬಳಗವೂ ಸಮಾಧಾನಿಸಿಕೊಳ್ಳುತ್ತಿದೆ. ಇದೆಲ್ಲದರ ನಡುವಲ್ಲಿಯೇ ಮಗು ಮನಸಿನ ಅಪ್ಪವನ್ನು ಅಷ್ಟು ಬೇಗನೆ ಕಸಿದುಕೊಂಡ ವಿಧಿಯೆಡೆಗಿನ ಕೋಪವೂ ಕೂಡಾ ಕೆಂಡಗಟ್ಟಿಕೊಂಡು ಸುಡಲಾರಂಭಿಸಿದೆ.
ಪಾದರಸದಂಥಾ ವ್ಯಕ್ತಿತ್ವ ಹೊಂದಿದ್ದ ಪುನೀತ್ ಯಾನ ಅರ್ಧ ಹಾದಿಯಲ್ಲಿಯೇ ಕೊನೆಗೊಂಡಿದೆ. ಅವೊಳಗಿದ್ದ ಅದೆಷ್ಟೋ ಕನಸುಗಳೂ ಕೂಡಾ ಅವರೊಂದಿಗೇ ಮಣ್ಣಲ್ಲಿ ಮಣ್ಣಾಗಿ ಹೋಗಿವೆ. ಅಪ್ಪು ಅದೆಂಥಾ ಜೀವನಪ್ರೀತಿ ಹೊಂದಿದ್ದರು, ಆಸು ಪಾಸಿನಲ್ಲಿ ಸುಳಿಯುವ ಜೀವಗಳನ್ನು ಅದೆಷ್ಟು ತೀವ್ರವಾಗಿ ಪ್ರೀತಿಸುತ್ತಿದ್ದರೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ಪುನೀತ್ ತಮ್ಮ ಕನಸುಗಳನ್ನೂ ಕೂಡಾ ಅಷ್ಟೇ ತೀವ್ರವಾಗಿ ಪ್ರೀತಿಸುತ್ತಿದ್ದರು. ಅವರು ತೀರಾ ಹತ್ತಿರದವರ ಬಳಿಯೇ ತಮ್ಮ ಕನಸುಗಳ ಬಗ್ಗೆ, ಮುಂದಿನ ಹೆಜ್ಜೆಗಳ ಬಗ್ಗೆ ಹೇಳಿಕೊಳ್ಳುತ್ತಿದ್ದದ್ದು ಅಪರೂಪ. ಯಾಕೆಂದರೆ, ಪುನೀತ್ ಪ್ರತೀ ಕ್ಷಣವೂ ತಮ್ಮ ಕನಸುಗಳ ಸಾಕಾರಕ್ಕಾಗಿ ಕಾರ್ಯಪ್ರವೃತ್ತರಾಗಿರುತ್ತಿದ್ದರು.
ಹಾಗಾದರೆ, ಅಪ್ಪು ಎದೆಯಲ್ಲಿಯೇ ಉಳಿದು ಹೋದ, ಅವರೊಂದಿಗೇ ಮಣ್ಣಾಗಿ ಹೋದ ಕನಸುಗಳ್ಯಾವುವು ಅಂತ ನೋಡ ಹೋದರೆ ಆರಂಭದಲ್ಲಿಯೇ ಅಂತ್ಯ ಕಂಡ ಒಂದಷ್ಟು ಸಿನಿಮಾಗಳು ನೆನಪಾಗುತ್ತವೆ. ಸಿನಿಪ್ರೇಮಿಗಳಲ್ಲೊಂದು ಬೆರಗು ಮೂಡಿಸಿದ್ದ ಪವನ್ ಕುಮಾರ್ ನಿರ್ದೇಶನದ ದ್ವಿತ್ವ ಚಿತ್ರ ನೆನಪಾಗುತ್ತೆ. ಸ್ಟಾರ್ಡಮ್, ಇಮೇಜು ಅಂತೆಲ್ಲ ನೋಡದೆ, ಪ್ರಯೋಗಾತ್ಮಕ ತುಡಿತ ಹೊಂದಿದ್ದವರು ಪುನೀತ್. ಅದಿಲ್ಲದೆ ಹೋಗಿದ್ದರೆ ಅವರು ಖಂಡಿತವಾಗಿಯೂ ದ್ವಿತ್ವದಂಥಾ ಭಿನ್ನ ಕಥಾನಕವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಬಹುಶಃ ಪುನೀತ್ ಇಂದು ನಮ್ಮೊಂದಿಗಿದ್ದಿದ್ದರೆ, ದ್ವಿತ್ವ ಕೂಡಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಾರಂಭಿಸುತ್ತಿತ್ತು. ಅದು ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ಹವಾ ಸೃಷ್ಟಿಸಿದ್ದರೂ ಅಚ್ಚರಿಯೇನಿಲ್ಲ.
ಕೇವಲ ದ್ವಿತ್ವ ಮಾತ್ರವಲ್ಲ; ಮತ್ತೊಂದಷ್ಟು ಸಿನಿಮಾಗಳೂ ಆರಂಭದಲ್ಲಿಯೇ ಅಂತ್ಯ ಕಂಡಿವೆ. ಪುನೀತ್ ಬದುಕಿದ್ದಿದ್ದರೆ, ಈ ವರ್ಷ ಒಂದರ ಹಿಂದೊಂದರಂತೆ ವಿಭಿನ್ನ ಬಗೆಯ ಸಿನಿಮಾಗಳು ಸಂಚಲನ ಸೃಷ್ಟಿಸುತ್ತಿದ್ದವು. ಹಾಗಂತ, ಪುನೀತ್ ಕನಸುಗಳು ಆ ಪರಿಧಿಗೆ ಮಾತ್ರವೇ ಸೀಮಿತವಾದವುಗಳಲ್ಲ. ಪಿಆರ್ಕೆ ಸಂಸ್ಥೆಯ ಮೂಲಕ ಇನ್ನೂ ಒಂದಷ್ಟು ಹೊಸಾ ಬಗೆಯ ಸಿನಿಮಾಗಳನ್ನು ಮಾಡಿ, ಹೊಸಬರ ಬೆನ್ತಟ್ಟುವ ನಿಟ್ಟಿನಲ್ಲಿ ಅಪ್ಪು ಕಾರ್ಯೋನ್ಮುಖರಾಗಿದ್ದರು. ಹೊಸ ಪ್ರತಿಭಾವಂತರ ಪಾಲಿಗೆ ಪುನೀತ್ ಸಾರಥ್ಯದ ಪಿಆರ್ಕೆ ಮಹಾ ಭರವಸೆಯಂತಿತ್ತು. ಅದನ್ನೀಗ ಅಶ್ವಿನಿ ಮುಂದುವರೆಸುತ್ತಿದ್ದಾರಾದರೂ, ಪುನೀತ್ ಆಲೋಚನೆಗಳನ್ನು ಗ್ರಹಿಸಿಕೊಂಡು ಅದಕ್ಕೆ ತಕ್ಕುದಾಗಿ ಮುಂದುವರೆಯೋದು ತುಸು ಸವಾಲಿನ ಸಂಗತಿಯಾಗಿಯೇ ಕಾಣಿಸುತ್ತದೆ.
ಇದೆಲ್ಲಕ್ಕಿಂತ ಮುಖ್ಯವಾಗಿ, ಪುನೀತ್ ರಾಜ್ಕುಮಾರ್ ವಿಚಾರದಲ್ಲಿ ಗಮನ ಸೆಳೆಯೋದು ಅವರೊಳಗೆ ಅತೀವವಾಗಿದ್ದ ಅಣ್ಣಂದಿರ ಮೇಲಿನ ಪ್ರೀತಿ. ರಾಘವೇಂದ್ರ ರಾಜ್ಕುಮಾರ್ ಮತ್ತು ಶಿವಣ್ಣನ ಪಾಲಿಗೆ ಅಪ್ಪು ಸದಾ ಮಗುವಾಗಿದ್ದವರು. ಶಿವಣ್ಣನನ್ನೂ ತೀವ್ರವಾಗಿ ಹಚ್ಚಿಕೊಳ್ಳುತ್ತಾ, ಅವರ ನಟನಾ ಬದುಕನ್ನು ಸ್ಫೂರ್ತಿಯಾಗೆ ತೆಗೆದುಕೊಂಡಿದ್ದವರು ಅಪ್ಪು. ಶಿವಣ್ಣನ ಎನರ್ಜಿ ಲೆವೆಲ್ಲಿನ ಬಗ್ಗೆ ಓರ್ವ ಅಭಿಮಾನಿಯಂತೆಯೇ ಅಚ್ಚರಿ ಮತ್ತು ಆರಾಧನೆ ಹೊಂದಿದ್ದ ಅಪ್ಪು, ಶಿವಣ್ಣನಿಗಾಗಿ ಸಿನಿಮಾವೊಂದನ್ನು ನಿರ್ದೇಶನ ಮಾಡೋ ಕನಸಿಟ್ಟುಕೊಂಡಿದ್ದರು. ಅದು ಪುನೀತ್ ಪಾಲಿಗೆ ಮಹಾ ಕನಸು. ಈ ಬಗ್ಗೆ ಆಪ್ತರ ಬಳಿ ಆಗಾಗ ಹೇಳಿಕೊಳ್ಳುತ್ತಲೂ ಇದ್ದರಂತೆ. ಹಾಗೆಯೇ ಬಾಯಿಂದ ಬಾಯಿಗೆ ದಾಟಿಕೊಂಡು ಅದು ಮಾಧ್ಯಮಗಳಲ್ಲಿಯೂ ಸುದ್ದಿಯಾಗಿತ್ತು. ಆದರೆ ಆ ಬಗ್ಗೆ ಹೆಚ್ಚೇನೂ ಅವರು ಹೇಳಿಕೊಂಡಿರಲಿಲ್ಲ. ಅದರ ಬಗ್ಗೆ ಅದೆಷ್ಟು ಆಕರ್ಷಿತರಾಗಿದ್ದರೆಂದರೆ, ತಮ್ಮ ಬ್ಯುಸಿ ಶೆಡ್ಯೂಲಿನ ನಡುವೆಯೇ ಪ್ರತೀ ದಿನ ಆ ಸಿನಿಮಾಕ್ಕಾಗಿ ತಯಾರಿ ನಡೆಸುತ್ತಿದ್ದರಂತೆ. ಆದರೆ ವಿಧಿಯಾಟವೇ ಬೇರೆಯದ್ದಿತ್ತು. ಅಂಥಾ ಹತ್ತಾರು ಕನಸುಗಳ ಸಮೇತ ಅದು ಎಲ್ಲರ ಪ್ರೀತಿಯ ಅಪ್ಪುವನ್ನು ಕಿತ್ತುಕೊಂಡಿದೆ.