ನಮ್ಮ ಸುತ್ತಲಿರೋ ಪ್ರಾಣಿ, ಪಕ್ಷಿಗಳು, ಕೀಟಗಳು ಸದಾ ಕಾಲವೂ ನಮ್ಮ ಗಮ ನ ಸೆಳೆಯುತ್ತವೆ. ಅವುಗಳಲ್ಲಿ ಒಂದಷ್ಟನ್ನು ನಾವು ಅಪಾಯಕಾರಿ ಎಂಬ ಲಿಸ್ಟಿಗೆ ಸೇರಿಸಿ ಅವು ಹತ್ತಿರ ಸುಳಿಯದಂತೆ ಎಚ್ಚರ ವಹಿಸುತ್ತೇವೆ. ಮತ್ತೆ ಕೆಲವನ್ನು ಅವುಗಳ ಸೌಂದರ್ಯಕ್ಕೆ ಮಾರು ಹೋಗಿ ಅವುಗಳತ್ತ ಒಂದು ಮೋಹ ಬೆಳೆಸಿಕೊಳ್ಳುತ್ತೇವೆ. ಇಡೀ ಜಗತ್ತಿನಲ್ಲಿ ಬೇಷರತ್ತಾಗಿ ಅಂಥಾದ್ದೊಂದು ಮೋಹವನ್ನು ತನ್ನೆಡೆಗೆ ಕೇಂದ್ರೀಕರಿಸಿಕೊಂಡಿರೋದು ಚಿಟ್ಟೆಗಳು. ಅವುಗಳ ಅಪರಿಮಿತವಾದ ಸೌಂದರ್ಯವೇ ಆ ಮ್ಯಾಜಿಕ್ಕಿನ ಮೂಲ ಎಂದರೂ ತಪ್ಪೇನಿಲ್ಲ.
ಒಂದು ಕಾಲದಲ್ಲಿ ಕಂಬಳಿ ಹುಳವಾಗಿದ್ದ ಚಿಟ್ಟೆ ಆ ಕುರುಹೇ ಇಲ್ಲದಂಥಾ ಸೌಂದರ್ಯವನ್ನು ತನ್ನದಾಗಿಸಿಕೊಂಡಿರುತ್ತೆ. ಇದು ಮನುಷ್ಯನ ರೂಪಾಂತರಕ್ಕೂ ಸ್ಫೂರ್ತಿಯಾಗಿ ಬಳಕೆಯಾಗುತ್ತೆ. ಪೂರ್ವಾಶ್ರಮದಲ್ಲಿ ಕಂಬಳಿ ಹುಳುವಾಗಿದ್ದ ಸಂದರ್ಭದಲ್ಲಿ ಅದೊಂದು ಸುಂದರ ಚಿಟ್ಟೆ ಆಗುತ್ತೆ ಅಂದ್ರೆ ಯಾರಿಗೂ ನಂಬಿಕೆ ಹುಟ್ಟೋದಿಲ್ಲ. ಮೈ ತುಂಬಾ ವಿಷಯುಕ್ತ ಮುಳ್ಳುಗಳನ್ನು ತುಂಬಿಕೊಂಡಿರೋ ಕಂಬಳಿಹುಳು ಭಯ ಮತ್ತು ಅಸಹ್ಯ ಮೂಡಿಸುತ್ತೆ. ಆದರೆ ಅದು ಚಿಟ್ಟೆಯಾದ ನಂತರ ಸಾಧು ಸ್ವರೂಪ ಪಡೆದುಕೊಳ್ಳುತ್ತೆ. ಅದು ಈಗ ಫ್ರೆಂಡ್ಲಿ ಸ್ವರೂಪವೆತ್ತಿದೆ ಎಂದೇ ನಂಬುತ್ತೇವೆ.
ಆದರೆ ಚಿಟ್ಟೆ ನಾವಂದುಕೊಂಡಷ್ಟು ನಿರುಪದ್ರವಿಯಲ್ಲ. ನಾವು ಆಗಾಗ ಅದನ್ನ ಹಿಡಿದುಕೊಂಡರೆ ಅಂಗೈನಿಂದ ದೇಹದ ಅಲ್ಲಲ್ಲಿ ಕೂರುತ್ತೆ. ಅತ್ತಿತ್ತ ಸುಳಿದಾಡಿ ಮತ್ತೆ ನಮ್ಮ ದೇಹಕ್ಕೇ ಅಂಟಲೂ ಬಹುದು. ಅದನ್ನೂ ಕೂಡಾ ಮುದ್ದಿನಿಂದ ನೋಡುತ್ತೇವೆ. ಅಸಲೀ ವಿಚಾರ ಅಂದ್ರೆ ಅದು ನಿಮ್ಮ ದೇಹದಲ್ಲಿರೋ ರಕ್ತ ಕುಡಿಯೋದಕ್ಕೆ ಅವಕಾಶ ಸಿಗುತ್ತಾ ಅಂತ ಹೊಂಚು ಹಾಕುತ್ತಿರುತ್ತದೆಯಂತೆ. ಈ ವಿಚಾರವನ್ನು ಅಧ್ಯಯನವೊಂದು ಸ್ಪಷ್ಟಪಡಿಸಿದೆ. ಮನುಷ್ಯನ ರಕ್ತಕ್ಕೆ ಚಿಟ್ಟೆಗಳು ನಾಲಿಗೆ ಚಾಚಿ ಚಪ್ಪರಿಸಿವೆ. ಕಾಡೊಳಗೂ ಬೇರೆ ಪ್ರಾಣಿಗಳು ತಿಂದು ಬಿಟ್ಟಿರೋ ಮಾಂಸಕ್ಕೆ ಮುತ್ತಿಕೊಂಡು ರಕ್ತ ಹೀರುವ ಚಿಟ್ಟೆಗಳ ಭೀಕರ ಸ್ವರೂಪವೂ ಬಯಲಾಗಿ ಬಿಟ್ಟಿದೆ!