ರಿಷಬ್ ಶೆಟ್ಟಿ ಪಾಲಿಗೀಗ ಒಂದಿಡೀ ನಸೀಬೇ ಪಥ ಬದಲಿಸಿ ಮಹಾ ಗೆಲುವಿನ ಗಮ್ಯ ಸೇರಿಸಿದೆ. ರಿಷಬ್ ಈ ಗೆಲುವಿನ ಅಲೆಯಲ್ಲಿ ನಡೆದುಕೊಂಡಿರೋ ಒಂದಷ್ಟು ರೀತಿಗಳು ಸೈದ್ಧಾಂತಿಕ ಸಂಘರ್ಷಕ್ಕೆ, ಒಂದಷ್ಟು ವಿರೋಧಗಳಿಗೆ ಕಾರಣವಾಗಿರೋದು ನಿಜ. ಆದರೆ, ಈ ಘಳಿಗೆಯಲ್ಲಿ ರಿಷಬ್ ಶೆಟ್ಟಿಯನ್ನು ಓರ್ವ ನಟ ಮತ್ತು ನಿರ್ದೇಶಕನಾಗಿ ಮತ್ತು ಕಾಂತಾರವನ್ನೊಂದು ಚಿತ್ರವನ್ನಾಗಿ ದಿಟ್ಟಿಸಿದರೆ ಅದು ಮೂಡಿಸಿರುವ ಸಂಚಲನ ರೋಮಾಂಚಕ. ನಟನಾಗಬೇಕೆಂಬ ಅತೀವ ತುಡಿತವನ್ನು ನಿರ್ದೇಶನದತ್ತ ಹೊರಳಿಸಿಕೊಂಡಿದ್ದ ರಿಷಬ್ ಈಗ ಎಲ್ಲ ದಿಕ್ಕಿನಲ್ಲಿಯೂ ಗೆದ್ದಿದ್ದಾರೆ. ಈ ಗೆಲುವನ್ನು ದೇಶಾದ್ಯಂತ ಅತಿರಥಮಹಾರಥರೇ ಸಂಭ್ರಮಿಸುತ್ತಿದ್ದಾರೆ. ಸೂಪರ್ ಸ್ಟಾರ್ ರಜನೀಕಾಂತ್ ಕೂಡಾ ಕಾಂತಾರ ಚಿತ್ರವನ್ನು ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದರು. ಇದೀಗ ರಿಷಬ್ ರಜನೀಕಾಂತ್ರ ಮನೆಗೆ ತೆರಳಿ ಮುಖತಃ ಭೇಟಿಯಾಗಿದ್ದಾರೆ.
ರಜನೀಕಾಂತ್ ಒಂದು ಸಿನಿಮಾವನ್ನು ನೋಡಿ ಪ್ರತಿಕ್ರಿಯಿಸೋದಿದೆಯಲ್ಲಾ? ಅದು ಸಿನಿಮಾ ರಂಗದ ಮಂದಿಯ ಪಾಲಿಗೆ ಮಹಾನ್ ಪುರಸ್ಕಾರವಿದ್ದಂತೆ. ಕಾಂತಾರ ಕ್ರೇಜ್ ಕರ್ನಾಟಕದ ಗಡಿದಾಟಿ, ದೇಶದ ಉದ್ದಗಲಕ್ಕೂ ಪಸರಿಸುತ್ತಲೇ ರಜನೀಕಾಂತ್ ಅದರತ್ತ ಆಕರ್ಷಿತರಾಗಿದ್ದರು. ಕಡೆಗೂ ಕಾಂತಾರವನ್ನು ನೋಡಿ ಥ್ರಿಲ್ ಆಗಿ ಅಭಿಪ್ರಾಯ ಹಂಚಿಕೊಂಡಿದ್ದರು. ಕಾಂತಾರ ಎಲ್ಲ ನಿಟ್ಟಿನಲ್ಲಿಯೂ ಚೆಂದದ ಸಿನಿಮಾ ಅನ್ನುತ್ತಲೇ ರಿಷಬ್ ಶೆಟ್ಟಿಯನ್ನು ಮೆಚ್ಚಿಕೊಂಡಿದ್ದ ರಜನಿ, ಒಂದಿಡೀ ಚಿತ್ರತಂಡಕ್ಕೆ ಶುಭ ಕೋರಿದ್ದರು. ರಜನೀಕಾಂತ್ ಚಿತ್ರಗಳನ್ನು ನೋಡಿಕೊಂಡು ಬೆಳೆದ, ಅವರು ನಡೆದು ಬಂದ ಕಡುಗಷ್ಟದ ಹಾದಿಯಿಂದ ಸ್ಫೂರ್ತಿ ಪಡೆದಿದ್ದ ರಿಷಬ್ಗೆ ಅವರನ್ನೊಮ್ಮೆ ಕಣ್ತುಂಬಿಕೊಳ್ಳಬೇಕೆಂಬ ಇರಾದೆ ಇತ್ತಂತೆ. ಅದೀಗ ಒಂದು ಅಮೋಘ ಕ್ಷಣಗಳ ಸಮೇತ ಸಾಧ್ಯವಾಗಿದೆ.
ಚೆನೈನಲ್ಲಿರುವ ಮನೆಗೆ ತೆರಳಿ ರಜನೀಕಾಂತ್ರನ್ನು ರಿಷಬ್ ಭೇಟಿಯಾಗಿದ್ದಾರೆ. ಸಾಮಾನ್ಯವಾಗಿ ರಜನೀ ಕರ್ನಾಟಕದಿಂದ ಯಾರೇ ಹೋದರೂ ತವರಿಂದ ಬಂದವರೆಂಬಂತೆ ಖುಷಿಗೊಳ್ಳುತ್ತಾರೆ. ಯಾವ ಹಮ್ಮುಬಿಮ್ಮೂ ಇಲ್ಲದೆ ಆದರಿಸುತ್ತಾರೆ. ಅಂಥಾದ್ದೊಂದು ಆತ್ಮೀಯ ಆತಿಥ್ಯ ರಜನೀಕಾಂತ್ ಕಡೆಯಿಂದ ರಿಷಬ್ಗೆ ಸಿಕ್ಕಿದೆ. ಈ ಬಗ್ಗೆ ಅವರು ಸಂತಸದಿಂದಲೇ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೀಗೆ ರಿಷಬ್ಗೀಗ ಅನಿರೀಕ್ಷಿತ ಖುಷಿಗಳು ಒಂದರ ಹಿಂದೊಂದರಂತೆ ದಕ್ಕುತ್ತಿವೆ. ಅದು ಅವರ ತಂದೆ ಹೇಳಿದಂತೆ ಗಜಕೇಸರಿ ಯೋಗದ ಫಲ ಅಂದುಕೊಳ್ಳೋದಕ್ಕಿಂತಲೂ, ಇದುವರೆಗೆ ರಿಷಬ್ ಸಾಗಿ ಬಂದ ಕಷ್ಟದ ಹಾದಿಯ ಯಾನದ ಪ್ರತಿಫಲ ಅಂದುಕೊಳ್ಳೋದೇ ಹೆಚ್ಚು ಸೂಕ್ತ!