ನಮ್ಮ ದೇಶದಲ್ಲಿ ಜಾತಿಗೊಂದು, ಧರ್ಮಕ್ಕೊಂದರಂತೆ ಒಂದಷ್ಟು ಸ್ಮಶಾನಗಳಿದ್ದಾವೆ. ತೀರಾ ಮಣ್ಣು ಮಾಡೋ ವಿಚಾರದಲ್ಲಿಯೂ ಥರ ಥರದ ಸಂಪ್ರದಾಯಗಳೂ ಇದ್ದಾವೆ. ಆದರೆ ಅದ್ಯಾವುದೇ ಜಾತಿ, ಧರ್ಮಗಳಾದರೂ ಸಾವಿನ ಬಗ್ಗೆ ಇರುವ ಭಯ ಮಾತ್ರ ಬದಲಾಗೋದಿಲ್ಲ. ಸತ್ತವರನ್ನು ಮಣ್ಣು ಮಾಡಿದ ಸ್ಮಾಶನಗಳ ಬಗೆಗಿರೋ ಹಾರರ್ ನಂಬಿಕೆಗಳೂ ಒಂದೇ ತೆರನಾದವುಗಳು. ಸತ್ತ ನಂತರ ದೆವ್ವ ಭೂತಗಳಾಗ್ತಾರೆಂಬ ನಂಬಿಕೆ ಜನರಲ್ಲಿ ಯಾವ ಪರಿ ಬೇರೂರಿದೆ ಅಂದರೆ, ಸ್ಮಶಾನದ ಸುತ್ತ ಯಾವುದೇ ಹೊತ್ತಲ್ಲಿ ಸುಳಿದಾಡಲೂ ಕೂಡಾ ಭಯ ಪಡುವಂಥಾ ವಾತಾವರಣವಿದೆ.
ನೀವು ಯಾವುದೇ ದೇಶದ ಯಾವುದೇ ಭಾಗದಲ್ಲಿ ತಡಕಾಡಿದರೂ ಅಲ್ಲೆಲ್ಲ ಇಂಥ ಅತೀವ ಭಯದ ಹಾಜರಿ ಇದ್ದೇ ಇರುತ್ತೆ. ಅಲ್ಲೆಲ್ಲ ಸ್ಮಶಾನಗಳೆಂದರೆ ಅಘೋಶಿತ ನಿಶೇಧಿತ ಪ್ರದೇಶಗಳಾಗಿಯೇ ಅಸ್ತಿತ್ವದಲ್ಲಿರುತ್ತವೆ. ಆದರೆ ಡೆನ್ಮಾರ್ಕ್ ದೇಶದಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧವಾದ ನಂಬಿಕೆಗಳು ಚಾಲ್ತಿಯಲ್ಲಿವೆ. ಅಲ್ಲಿನ ಜನ ಸಾವಿನ ನಂತರ ತಮ್ಮ ಸಮಾಧಿ ಸಾರ್ವಜನಿಕ ಸ್ಥಳವಾಗಬೇಕೆಂದೇ ಬಯಸುತ್ತಾರಂತೆ. ಆದ್ದರಿಂದಲೇ ಅಲ್ಲಿ ಸ್ಮಶಾನಗಳೂ ಕೂಡಾ ನಮ್ಮಲ್ಲಿಯ ಪಾರ್ಕುಗಳಂತೆ ಜನರಿಂದ ಗಿಜಿಗುಡುತ್ತವೆ.
ಅಲ್ಲಿಯೂ ಮತ್ತೊಂದು ಜನ್ಮದ ಬಗ್ಗೆ, ಸಾವಿನಾಚೆಗಿರೋ ಬದುಕಿನ ಬಗ್ಗೆ ಒಂದಷ್ಟು ಕಲ್ಪನೆಗಳಿವೆ. ಅದು ಅವರ ಸಂಪ್ರದಾಯಗಳಲ್ಲಿಯೂ ಅಡಕವಾಗಿವೆ. ಆದ್ದರಿಂದಲೇ ಅಲ್ಲಿನ ಜನ ತಮ್ಮ ಸಮಾಧಿಯ ಸುತ್ತ ಜನರ ಓಡಾಟ ಇರಬೇಕೆಂದು ಬಯಸ್ತಾರಂತೆ. ಈ ಕಾರಣದಿಂದಲೇ ಅಲ್ಲಿನ ಸ್ಮಶಾನಗಳೂ ಕೂಡಾ ಸಾರ್ವಜನಿಕ ಉದ್ಯಾನವನದಂತಿರುತ್ತವೆ. ನಮ್ಮ ದೇಶದಲ್ಲಿ ಸೆಲೆಬ್ರಿಟಿಗಳು ಸತ್ತಾಗ ಅವರ ಸಮಾಧಿ ಸಾರ್ವಜನಿಕ ದರ್ಶನಕ್ಕೆ ತೆರೆದಿರುತ್ತೆ. ಆದರೆ ಡೆನ್ಮಾರ್ಕ್ನಲ್ಲಿ ತೀರಾ ಸಾಮಾನ್ಯರ ಸಮಾಧಿಗೂ ಅಂಥಾ ಭಾಗ್ಯ ದೊರಕುತ್ತದೆಯಂತೆ.