ನಾವೆಲ್ಲ ನಮ್ಮ ಕಣ್ಣ ಪರಿಧಿಗೆ, ಅರಿವಿನ ನಿಲುಕಿಗೆ ಸಿಕ್ಕಿದಷ್ಟನ್ನೇ ಬೆರಗೆಂದು ಸಂಭ್ರಮಿಸುತ್ತೇವೆ. ಆದರೆ ಅದರಾಚೆಗೆ ಅಡಕವಾಗಿರೋ ಅಂಶಗಳು ಮಾತ್ರವೇ ನಿಜವಾದ ನಿಗೂಢ. ಈ ವಿಶ್ವದಲ್ಲಿ ಅಂಥಾ ಅನೇಕಾನೇಕ ಅಂಶಗಳಿದ್ದಾವೆ. ನಮಗೆ ಗೊತ್ತೇ ಇಲ್ಲದ ಜನ ಜೀವನ ಸಂಪ್ರದಾಯಗಳಿವೆ. ನೈಸರ್ಗಿಕ ನಿಗೂಢಗಳಿದ್ದಾವೆ. ಈಗ ನಿಮ್ಮೆದುರು ಇಡುತ್ತಿರೋದು ಅಂಥಾದ್ದೇ ಒಂದು ವಿಶೇಷ ಸಂಗತಿಯನ್ನು!
ಹೆಣ್ಣು ಮಕ್ಕಳ ಪಾಲಿಗೆ ಉದ್ದ ತಲೆಗೂದಲು ಸೌಂದರ್ಯವನ್ನ ಇಮ್ಮಡಿಗೊಳಿಸುತ್ತೆ ಎಂಬಂಥಾ ನಂಬಿಕೆಗಳಿವೆ. ಭಾರತೀಯ ಸಂಸ್ಕೃತಿಯಲ್ಲಂತೂ ಈ ಉದ್ದ ಜಡೆಗೆ ತನ್ನದೇ ಆದೊಂದು ಪರಂಪರೆ ಖಂಡಿತಾ ಇದೆ. ಆದರೀಗ ಆಧುನಿಕತೆ ಎಂಬುದು ಹಂತ ಹಂತವಾಗಿ ಉದ್ದ ಜಡೆಗಳಿಗೆ ಕತ್ತರಿ ಹಾಕುತ್ತಿದೆ. ಇನ್ನುಳಿದಂತೆ ಒಟ್ಟಾರೆ ನೈಸರ್ಗಿಕ ಕೊಳಕುಗಳು ಉದ್ದ ಜಡೆಗಳನ್ನು ಉದುರಿಸುತ್ತಲೂ ಇದ್ದಾವೆ. ಹೀಗಿರೋದರಿಂದಲೇ ಕೂದಲು ಸೊಂಪಾಗಿ ಬೆಳೆಯೋ ತೈಲಗಳು, ಫೇಕು ಜಾಹೀರಾತುಗಳು ಎಗ್ಗಿಲ್ಲದೆ ಮೇಳೈಸುತ್ತಿವೆ.
ಅಂಥಾ ಜಾಹೀರಾತುಗಳ ಪ್ರಧಾನ ಆಕರ್ಷಣೆ ನೆಲಕ್ಕೆ ಮುಟ್ಟುವಂಥ ಉದ್ದ ಜಡೆ. ಅದು ನಿಜಕ್ಕೂ ಸಾಧ್ಯಾನಾ. ಈವಾಗಲೂ ಅಂಥಾ ಉದ್ದ ಜಡೆಗಳನ್ನು ಸಂಭಾಳಿಸಲಾಗುತ್ತಾ ಅನ್ನೋ ಸಂಶಯ ಇದ್ದೇ ಇದೆ. ಆದ್ರೆ ಚೀನಾದ ಹುವಾಂಗ್ಲೋ ಅನ್ನೋ ಊರೊಂದರಲ್ಲಿ ಅಷ್ಟೂ ಹೆಂಗಸರು, ಹೆಣ್ಮಕ್ಕಳು ಉದ್ದ ಜಡೆ ಇಳಿಬಿಟ್ಟುಕೊಂಡು ಓಡಾಡ್ತಾರಂತೆ. ಅದೇನೇ ಆಧುನಿಕತೆ ಬಂದ್ರೂ ಆ ಊರಿನಲ್ಲಿ ಈ ಉದ್ದ ಜಡೆಯ ಟ್ರೆಂಡ್ ಮಾತ್ರ ಮರೆಯಾಗಿಲ್ಲ. ಹೆಣ್ಣು ಮಕ್ಕಳು ಜಡೆ ಉದ್ದ ಇದ್ದಷ್ಟೂ ಸುಂದರವಾಗಿ ಕಾಣ್ತಾರೆಂಬ ನಂಬಿಕೆ ಅಲ್ಲಿದೆಯಂತೆ.