ಸಿನಿಮಾ ಹಾಡೊಂದಕ್ಕಾಗಿ ಮೈ ತುಂಬಾ ಬೆರಗು ತುಂಬಿಕೊಂಡು ಕಾಯೋದಿದೆಯಲ್ಲಾ? ಕನ್ನಡ ಚಿತ್ರರಂಗದ ಇದುವರೆಗಿನ ಹಾದಿಯ ತುಂಬಾ ಅಂಥಾದ್ದೊಂದು ರೋಮಾಂಚಕ ಸನ್ನಿವೇಶಗಳ ಗಂಧ ಹರಡಿಕೊಂಡಿದೆ. ಸಿನಿಮಾ ರಂಗ ಒಂದಷ್ಟು ಮಜಲುಗಳನ್ನು ಸವರಿಕೊಂಡು ಬಂದು, ಈವತ್ತಿಗೆ ಯಶದ ಪರ್ವದತ್ತ ಹೊರಳಿಕೊಂಡಿದೆ. ಈ ಯಾನದಲ್ಲಿ ಹಾಡುಗಳಿಗಾಗಿ ಕಾಯುವ, ಎದೆಗೆ ತಾಕಿಸಿಕೊಂಡು ಸಂಭ್ರಮಿಸುವ ಖುಷಿ ಮಾತ್ರ ಸವಕಲಾಗದೆ ಹಾಗೇ ಉಳಿದುಕೊಂಡಿದೆ. ಅಂಥಾದ್ದೊಂದು ನವಿರು ಭಾವಗಳನ್ನು ಮತ್ತೊಮ್ಮೆ ತೀವ್ರವಾಗಿಸಿದ ಖ್ಯಾತಿ ನಿಸ್ಸಂದೇಹವಾಗಿಯೂ ಜಯತೀರ್ಥ ನಿರ್ದೇಶನದ ಬನಾರಸ್ ಚಿತ್ರಕ್ಕೆ ಸಲ್ಲುತ್ತದೆ. ಮಾಯಗಂಗೆ ಅಂತೊಂದು ಹಾಡಿನ ಮೂಲಕ ಮನಗೆದ್ದಿದ್ದ ಬನಾರಸ್ ಕಡೆಯಿಂದೀಗ, ಬೆಳಕಿನ ಕವಿತೆ ಎಂಬ ಮುದ್ದಾದ ಹಾಡು ಬಿಡುಗಡೆಗೊಂಡಿದೆ.
ಹಾಡಿಗಿರುವ ಶಕ್ತಿಯನ್ನು ಸಮರ್ಥವಾಗಿ ಬಳಿಸಿಕೊಳ್ಳೋದೂ ಒಂದು ಕಲೆ. ನಿರ್ದೇಶಕ ಜಯತೀರ್ಥ ಆರಂಭದಿಂದ ಇಲ್ಲಿಯ ವರೆಗೂ ಆ ನಿಟ್ಟಿನಲ್ಲಿ ಸೈ ಅನ್ನಿಸಿಕೊಂಡು ಬಂದಿದ್ದಾರೆ. ಬನಾರಸ್ ವಿಚಾರದಲ್ಲಿ ಅಜನೀಶ್ ಲೋಕನಾಥ್ ಸಾಥ್ ಸಿಕ್ಕಿರೋದರಿಂದ ಹಾಡುಗಳಿಗೆ ಮತ್ತಷ್ಟು ಆವೇಗ ಬಂದಂತಾಗಿದೆ. ಅದೇ ಹಾದಿಯಲ್ಲಿ ರೂಪುಗೊಂಡಿರುವ ಬೆಳಕಿನ ಕವಿತೆ ಹಾಡು, ಸಂಜಿತ್ ಹೆಗ್ಡೆ ಮತ್ತು ಸಂಗೀತಾ ರವೀಂದ್ರನಾಥ್ ಕಂಠದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ಒಂದೇ ಸಲಕ್ಕೆ ಎಂಥವರನ್ನಾದರೂ ವಶಪಡಿಸಿಕೊಳ್ಳ ಬಲ್ಲ ಮಾಂತ್ರಿಕತೆ ಹೊಂದಿರೋ ಈ ವೀಡಿಯೋ ಸಾಂಗ್ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಹೆಚ್ಚೆಚ್ಚು ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತಿದೆ. ಈ ವೀಡಿಯೋ ಸಾಂಗ್ ಇಷ್ಟು ಆಕರ್ಷಕವಾಗಿ ಮೂಡಿ ಬಂದಿರೋದರಲ್ಲಿ ನೃತ್ಯ ನಿರ್ದೇಶಕ ಎ ಹರ್ಷ ಅವರ ಪಾಲೂ ಇದೆ. ಕಲಾ ನಿರ್ದೇಶನ ಮಾಡಿರುವ ಅರುಣ್ ಸಾಗರ್ ಕೈಚಳಕವೂ ಗಮನ ಸೆಳೆಯುವಂತಿದೆ.
ಈವರೆಗೆ ಬಂದಿರುವ ಹಾಡುಗಳನ್ನು ಆಸ್ವಾದಿಸಿದ್ದವರೆಲ್ಲ ಬೆಳಕಿನ ಕವಿತೆಗಾಗಿ ತೀವ್ರವಾಗಿಯೇ ಹಂಬಲಿಸಿದ್ದರು. ಇದೀಗ ಅದೆಲ್ಲವನ್ನೂ ಸಾರ್ಥಕಗೊಳಿಸುವಂತೆ ‘ಬೆಳಕಿನ ಕವಿತೆ ಬೆರಗಿಗೆ ಸೋತೆ ಬೆಳದಿಂಗಳೇ ಮೆರವಣಿಗೆ’ ಎಂಬ ಈ ಹಾಡು ಮೂಡಿ ಬಂದಿದೆ. ಈ ಮೂಲಕ ಅಜನೀಶ್ ಲೋಕನಾಥ್ ನಿಜಕ್ಕೂ ಮತ್ತೊಮ್ಮೆ ತಮ್ಮ ಕೈಚಳಕ ತೋರಿಸಿದ್ದಾರೆ. ಜನರೆಲ್ಲ ಯಾವ ನಿರೀಕ್ಷೆಯಿಟ್ಟುಕೊಂಡು ಕಾದಿದ್ದರೋ, ಅದೆಲ್ಲವೂ ಬೆಳದಿಂಗಳೇ ಎದೆಗಿಳಿದಂಥಾ ಈ ಹಾಡಿನ ಮೂಲಕ ಸಾರ್ಥಕ್ಯ ಕಂಡಿದೆ. ಕೇವಲ ಸಾಹಿತ್ಯ, ಸಂಗೀತದ ವಿಚಾರದಲ್ಲಿ ಮಾತ್ರವಲ್ಲ; ದೃಶ್ಯ ವೈಭವದ ವಿಚಾರದಲ್ಲಿಯೂ ಈ ವೀಡಿಯೋ ಸಾಂಗ್ ಗಮನ ಸೆಳೆಯುವಂತಿದೆ. ತಾಜಾತನ ಮತ್ತು ರೋಮಾಂಚಕ ಸನ್ನಿವೇಶಗಳಲ್ಲಿ ಅದ್ದಿ ತೆಗೆದಂಥಾ ದೃಶ್ಯಗಳ ನಡುವೆ ಝೈ ಖಾನ್ ಮತ್ತು ಸೋನಲ್ ಮೊಂತೇರೋ ಅಕ್ಷರಶಃ ಮಿಂಚಿದ್ದಾರೆ.
ಈ ಬೆಳಕಿನ ಕವಿತೆಯೊಂದಿಗೆ ಚಿತ್ರ ಸಾಹಿತಿ ಡಾ. ವಿ ನಾಗೇಂದ್ರ ಪ್ರಸಾದ್ ಕೂಡಾ ಮಿಂಚಿದ್ದಾರೆಂಬುದು ಸತ್ಯ. ಕನ್ನಡ ಚಿತ್ರರಂಗದ ಮಟ್ಟಿಗೆ ನಾಗೇಂದ್ರ ಪ್ರಸಾದ್ ಭಿನ್ನ ನೆಲೆಯ ಗೀತ ಸಾಹಿತಿ. ಯಾವ ಪ್ರಾಕಾರದ ಹಾಡಿಗಾದರೂ ಸೈ ಎಂಬಂಥಾ ಮನೋಭಾವದ ಅವರು, ಅದೆಲ್ಲದರಲ್ಲಿಯೂ ಗೆಲುವು ಕಂಡಿದ್ದಾರೆ. ಈವತ್ತಿಗೆ ಬನಾರಸ್ನ ಮಾಯಗಂಗೆ ಈ ಪರಿಯಾಗಿ ಕ್ರೇಜ್ ಹುಟ್ಟು ಹಾಕಿರೋದರ ಹಿಂದೆ ನಾಗೇಂದ್ರ ಪ್ರಸಾದರ ಪಾತ್ರವೂ ಬಹಳಷ್ಟಿದೆ. ಅವರೇ ಸೃಷ್ಟಿಸಿರುವ ಬೆಳಕಿನ ಕವಿತೆ ಕೂಡಾ ಅಂಥಾದ್ದೇ ದಾಖಲೆ ಸೃಷ್ಟಿಸೋದರಲ್ಲಿ ಯಾವ ಸಂದೇಹವೂ ಇಲ್ಲ. ಒಟ್ಟಾರೆಯಾಗಿ, ಈ ಹಾಡು ಬನಾರಸ್ನ ಜೀವಾಳವನ್ನು ಸಂಗೀತದ ಸಾಂಗತ್ಯದಲ್ಲಿ ಸಮರ್ಥವಾಗಿಯೇ ಪ್ರೇಕ್ಷಕರತ್ತ ದಾಟಿಸಿದೆ. ಇನ್ನೇನು ಬಿಡುಗಡೆಗೆ ಕೆಲ ದಿನಗಳಷ್ಟೇ ಬಾಕಿ ಇರುವ ಈ ಹೊತ್ತಿನಲ್ಲಿ, ಬೆಳಕಿನ ಕವಿತೆಯ ಮೂಲಕ ಅವರ್ಣನೀಯ ಬೆರಗೊಂದು ಎಲ್ಲರ ಮನಸಿಗಂಟಿಕೊಂಡಿದೆ!