ಕನ್ನಡ ಚಿತ್ರರಂಗದಲ್ಲೀಗ ಹೊಸಾ ಸಂಚಲನ ಸೃಷ್ಟಿಯಾಗಿದೆ. ಕೊರೋನಾ ಕಾಲದಲ್ಲುಂಟಾಗಿದ್ದ ಬಹಳಷ್ಟು ಸವಾಲುಗಳು, ಹಿನ್ನಡೆಗಳನ್ನು ದಾಟಿಕೊಂಡಿರುವ ಸಿನಿಮಾ ಮಂದಿ, ನವೋತ್ಸಾಹದೊಂದಿಗೆ ಮುಂದಡಿ ಇಡಲಾರಂಭಿಸಿದ್ದಾರೆ. ಅಷ್ಟಕ್ಕೂ ಸಿನಿಮಾವನ್ನು ಧ್ಯಾನದಂತೆ, ಆತ್ಮಕ್ಕಂಟಿಸಿಕೊಂಡ ಮನಸುಗಳು ಕೊರೋನಾವೂ ಸೇರಿದಂತೆ ಯಾವ ವಾಲುಗಳಿಗೂ ಬೆನ್ನು ಹಾಕಲು ಸಾಧ್ಯವಿಲ್ಲ. ಈ ಮಾತಿಗೆ ತಕ್ಕುದಾಗಿ, ಅತ್ಯಂತ ಕಡಿಮೆ ಅವಧಿಯಲ್ಲಿ ಚಿತ್ರರಂಗ ಚೇತರಿಸಿಕೊಂಡಿದೆ. ಅತ್ತ ಕಾಂತಾರ ಚಿತ್ರದ ನಾಗಾಲೋಟ ಚಾಲ್ತಿಯಲ್ಲಿರುವಾಗಲೇ, ಇತ್ತ ಅಂಥಾದ್ದೇ ಭರವಸೆ ಮೂಡಿಸಿರುವ ಒಂದಷ್ಟು ಸಿನಿಮಾಗಳು ಸರತಿಯಲ್ಲಿವೆ. ಪ್ರಚಾರ ಅಂತೆಲ್ಲ ಹೈಪು ಸೃಷ್ಟಿಸದೆಯೇ ಕೆಲವಾರು ಸಿನಿಮಾಗಳು ಈಗಾಗಲೇ ಜನಮನ ಸೆಳೆದುಕೊಂಡಿವೆ. ಆ ಸಾಲಿನಲ್ಲಿ ಪ್ರಧಾನವಾಗಿ ಗುರುತಿಸಿಕೊಳ್ಳುವ ಚಿತ್ರ ರವೀಂದ್ರ ಪರಮೇಶ್ವರಪ್ಪ ನಿರ್ದೇಶನದ ಯೆಲ್ಲೋ ಗ್ಯಾಂಗ್ಸ್!
ಸದ್ದೇ ಇಲ್ಲದಂತೆ ಚಿತ್ರೀಕರಣ ಮುಗಿಸಿಕೊಂಡಿದ್ದ ಈ ಚಿತ್ರ, ಇದೀಗ ತಾನೇತಾನಾಗಿ ಮುನ್ನೆಲೆಗೆ ಬಂದಿದೆ. ಯೋಗರಾಜ್ ಭಟ್ ಗರಡಿಯಲ್ಲಿ ಬಹುಕಾಲದಿಂದ ಪಳಗಿಕೊಂಡಿದ್ದ, ಸಿನಿಮಾ ರೂಪಿಸುವ ಎಲ್ಲ ಪಟ್ಟುಗಳನ್ನೂ ಕರಗತ ಮಾಡಿಕೊಂಡಿದ್ದ ರವೀಂದ್ರ ಪರಮೇಶ್ವರಪ್ಪ ಯೆಲ್ಲೋ ಗ್ಯಾಂಗ್ಸ್ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಡ್ರಗ್ಸ್ ಮತ್ತು ಕಾಸುಗಳ ಕೇಂದ್ರಿತವಾಗಿ ಬಿಚ್ಚಿಕೊಳ್ಳುವ ಯೆಲ್ಲೋ ಗ್ಯಾಂಗ್ಸ್ ಕಥೆ, ನಂತರದಲ್ಲಿ ಸಂಬಂಧವಿಲ್ಲದವರನ್ನೂ ಬಳಸಿಕೊಂಡು ಸಾಗುತ್ತದೆ. ಆ ಯಾನದಲ್ಲಿ ಯಾರೂ ಊಹಿಸಿಕೊಳ್ಳಲಾಗದ ತಿರುವುಗಳೂ ಎದುರಾಗುತ್ತವೆ. ಪ್ರೇಕ್ಷಕರು ಒಂದು ದಿಕ್ಕಿನಲ್ಲಿ ಅಂದಾಜಿಸಿದರೆ, ಮತ್ಯಾವುದೋ ದಿಕ್ಕಿನಿಂದ ತೂರಿ ಬರುವ ಸಸ್ಪೆನ್ಸುಗಳು ನೋಡುಗರನ್ನೆಲ್ಲ ಥ್ರಿಲ್ ಆಗಿಸುವಂತಿವೆ ಎಂಬ ಭರವಸೆ ನಿರ್ದೇಶಕ ರವೀಂದ್ರ ಪರಮೇಶ್ವರಪ್ಪ ಅವರಲ್ಲಿದೆ. ಈ ಚಿತ್ರ ಕ್ರೈಂ ಥ್ರಿಲ್ಲರ್ ಮಾದರಿಯದ್ದೆಂದು ಹೇಳಬಹುದಾದರೂ, ಆ ಜಾನರಿನ ಸಿದ್ಧಸೂತ್ರಗಳ ಸೋಂಕಿಲ್ಲದಂತೆ ತಯಾರುಗೊಂಡಿದೆ. ಪ್ರೇಕ್ಷಕರನ್ನು ಪ್ರತೀ ಹಂತದಲ್ಲಿಯೂ ಕುತೂಹಲದ ಉತ್ತುಂಗಕ್ಕೇರಿಸುವಂತೆ ಒಟ್ಟಾರೆ ಚಿತ್ರ ಮೂಡಿ ಬಂದಿದೆಯಂತೆ.
ಇದೊಂದು ರಾ ಕಥಾನಕವಾದ್ದರಿಂದ ಒಂದಿಡೀ ಚಿತ್ರವನ್ನು ಆ ಫೀಲ್ಗೆ ತಕ್ಕುದಾಗಿಯೇ ಚಿತ್ರೀಕರಣ ನಡೆಸಲಾಗಿದೆ. ಅದರೊಳಗಿನ ಪಾತ್ರಗಳು ನಮ್ಮ ನಡುವಿಂದಲೇ ಕದಲುತ್ತಿವೆಯೇನೋ ಎಂಬಂಥಾ ಭಾವ ಮೂಡಿಸುವಷ್ಟು ಶಕ್ತವಾಗಿ ಇಲ್ಲಿನ ದೃಷ್ಯಾವಳಿಗಳು ಮೂಡಿ ಬಂದಿವೆಯಂತೆ. ಈ ತಾಜಾತನ ಉಳಿಸಿಕೊಳ್ಳಲೆಂದೇ ಹ್ಯಾಂಡ್ ಹೆಲ್ಡ್ ತಂತ್ರಜ್ಞಾನದಲ್ಲಿ, ಸಾಕಷ್ಟು ಸವಾಲುಗಳನ್ನೆದುರಿಸಿ ಯೆಲ್ಲೋ ಗ್ಯಾಂಗ್ಸ್ ಅನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ದೇವ್ ದೇವಯ್ಯ, ಅರ್ಚನಾ ಕೊಟ್ಟಿಗೆ, ಬಲ ರಾಜ್ವಾಡಿ, ಪ್ರದೀಪ್ ಪೂಜಾರಿ, ಅರುಣ್, ಸತ್ಯ, ನಾಟ್ಯ ರಂಗ ಮುಂತಾದವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈಗ ನಿರ್ದೇಶಕರು ಬಿಟ್ಟುಕೊಟ್ಟಿರುವ ಒಂದಷ್ಟು ವಿಚಾರಗಳೇ ಇದೊಂದು ಭಿನ್ನ ಬಗೆಯ ಚಿತ್ರವೆಂಬ ಷರಾ ಬರೆದಿವೆ. ಪ್ರೇಕ್ಷಕರನ್ನು ಚಕಿತಗೊಳಿಸುವಂಥಾ ಭರಪೂರ ಕಂಟೆಂಟ್ ಹೊಂದಿರೋ ಯೆಲ್ಲೋ ಗ್ಯಾಂಗ್ಸ್ ನವೆಂಬರ್ ಹನ್ನೊಂದರಂದು ಚಿತ್ರಮಂದಿರಗಳಿಗೆ ದಾಂಗುಡಿ ಇಡಲಿದೆ. ರವೀಂದ್ರ ಪರಮೇಶ್ವರಪ್ಪ ಮತ್ತು ಪ್ರವೀಣ್ ಕುಮಾರ್ ಜಿ ಈ ಸಿನಿಮಾಕ್ಕೆ ಸಂಭಾಷಣೆ ಬರೆದಿದ್ದಾರೆ.