ಈಗಿನ ಮಕ್ಕಳು ಊಟ ತಿಂಡಿ ಬಿಟ್ಟರೂ ಮೊಬೈಲ್ ಬಿಡೋದಿಲ್ಲ ಅನ್ನೋದು ಸರ್ವವ್ಯಾಪಿಯಾಗಿರೋ ಅಪವಾದ. ಆದರೆ ಯುವ ಸಮುದಾಯ ಮಾತ್ರ ಈ ಅಪವಾದದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹಾಗೆ ಯಾರೇನು ಅಂದುಕೊಳ್ಳುತ್ತಾರೆ, ತಮ್ಮ ಬಗ್ಗೆ ಏನು ಮಾತಾಡಿಕೊಳ್ಳುತ್ತಾರೆ ಎಂಬ ಬಗ್ಗೆ ಆಲೋಚಿಸುವಷ್ಟು ಪುರಸೊತ್ತೂ ಅವರಿಗಿಲ್ಲ. ಯಾಕಂದ್ರೆ ವೆಬ್ ಸರಣಿಗಳನ್ನು ಬೇಗ ಬೇಗನೆ ನೋಡಿ ಮುಗಿಸುವ, ಥರ ಥರದ ಗೇಮುಗಳಲ್ಲಿ ಮುಳುಗೇಳುತ್ತಾ, ಆನ್ಲೈನ್ನಲ್ಲೇ ಚೆಂದದ ಹುಡುಗೀರಿಗೆ ಬಲೆ ಬೀಸೋ ತುರ್ತು ಅವರೆಲ್ಲರಿಗಿದೆ. ಆದರೆ ರಾತ್ರಿಯೆಲ್ಲ ನಿದ್ದೆಗೆಟ್ಟು ಎದ್ದು ಕೂರಿಸೋ ಮೊಬೈಲ್ ಮೋಹವೇ ಅದೆಷ್ಟೋ ಮಂದಿಯ ಜೀವ ಉಳಿಸಲೂ ಬಹುದೆಂಬುದಕ್ಕೆ ಉದಾಹರಣೆಯಂಥ ಘಟನೆಯೊಂದು ಮಹರಾಷ್ಟ್ರದಲ್ಲಿ ನಡೆದಿದೆ.
ಈಗ ಎಲ್ಲ ಗೇಮುಗಳನ್ನೂ ನುಂಗಿಕೊಂಡಂತೆ ವೆಬ್ ಸೀರೀಸ್ಗಳು ಜನರನ್ನ ಆವರಿಸಿಕೊಂಡಿವೆ. ಅಂಥಾದ್ದೇ ವೆಬ್ ಸೀರೀಸ್ ಹುಚ್ಚಿಗೆ ಬಿದ್ದಿದ್ದ ಹುಡುಗ ಕುನಾಲ್ ಮೊಹೈಟ್. ಆತನಿಗಿನ್ನೂ ಹದಿನೆಂಟು ವರ್ಷ ವಯಸ್ಸು. ಆತನಿಗೆ ವೆಬ್ ಸೀರೀಸ್ ಮೇಲೆ ಅದೆಂಥಾ ಮೋಹವಿತ್ತೆಂದರೆ ಅದಕ್ಕಾಗಿ ಹದಿನೆಂಟು ತಾಸು ಸಿಕ್ಕರೂ ಸಾಲುತ್ತಿರಲಿಲ್ಲ. ಆದ್ದರಿಂದಲೇ ಅಹೋರಾತ್ರಿ ಹೆಚ್ಚೂ ಕಮ್ಮಿ ಎಚ್ಚರವಾಗಿಯೇ ಇರುತ್ತಿದ್ದ. ದೊಂಬಿವಿಲಿಯಲ್ಲಿ ವಾಸಿಸುತ್ತಿದ್ದ ಈ ಹುಡುಗ ಇತ್ತೀಚೆಗೆ ಒಂದು ದಿನ ಯಥಾ ಪ್ರಕಾರ ವೆಬ್ ಸೀರೀಸ್ ನೋಡುತ್ತಿದ್ದ. ನಸುಕಿನ ವೇಳೆ ಸುಮಾರು ನಾಲಕ್ಕು ಘಂಟೆಗೆ ಹೊರಗಡೆಯಿಂದ ವಿಚಿತ್ರ ಶಬ್ದ ಕೇಳಿಸಿದೆ.
ತಕ್ಷಣವೇ ಆ ಹುಡುಗ ಏನೋ ಅನಾಹುತ ನಡೆದಿದೆ ಅಂದುಕೊಂಡು ಹೊರ ಬಂದು ನೋಡಿದರೆ ಎದುರಿನ ಎರಡಂತಸ್ತಿನ ಅಪಾರ್ಟ್ಮೆಂಟಿನ ಸೀಲಿಂಗ್ ಸಿಂಕ್ ಆಗಿ ಕೆಳಕ್ಕೆ ಬರಲಾರಂಭಿಸಿತ್ತು. ಆ ಅಪಾರ್ಟ್ಮೆಂಟಿನ ಮಂದಿಯೆಲ್ಲ ಗಾಢ ನಿದ್ದೆಯಲ್ಲಿದ್ದರು. ಆದರೂ ಹುಡುಗ ಆಸುಪಾಸಿನವರನ್ನು ಕರೆದೆಬ್ಬಿಸಿ ಬೊಬ್ಬೆ ಹೊಡೆದು ಎಚ್ಚರಿಕೆ ನೀಡಿದ್ದಾನೆ. ತಕ್ಷಣವೇ ಆ ಅಪಾರ್ಟ್ಮೆಂಟಿನಲ್ಲಿದ್ದ ಎಪ್ಪತೈದು ಮಂದಿ ಓಡೋಡಿ ಹೊರ ಬಂದಿದ್ದಾರೆ. ಅದಾಗಿ ಸ್ವಲ್ಪ ಹೊತ್ತಿನಲ್ಲಿಯೇ ಇಡೀ ಕಟ್ಟಡ ಹಂತ ಹಂತವಾಗಿ ನೆಲಕ್ಕುರುಳಿದೆ. ಆ ಹುಡುಗನಿಗೆ ವೆಬ್ ಸೀರೀಸ್ ಹುಚ್ಚಿಲ್ಲದೇ ಹೋಗಿದ್ದರೆ ಆ ಎಪ್ಪತೈದು ಮಂದಿ ಗಾಢ ನಿದ್ರೆಯಲ್ಲಿಯೇ ಚಿರನಿದ್ರೆಗೆ ಜಾರಿ ಬಿಡುತ್ತಿದ್ದರು. ಈ ಹುಡುಗನ ಸಮಯ ಪ್ರಜ್ಞೆ ಮತ್ತು ಸಾಹಸವನ್ನು ಆಸುಪಾಸಿನ ಜನರು, ಪೊಲೀಸರೆಲ್ಲ ಕೊಂಡಾಡಿದ್ದಾರೆ. ಕೆಲವೊಮ್ಮೆ ಚಟಗಳೂ ಕೆಲಸಕ್ಕೆ ಬರುತ್ತವೆಂಬುದಕ್ಕೆ ಇದಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲವೇನೋ…