ಹ್ಯಾಂಡ್ಸಮ್ ಹೀರೋ ಝೈದ್ ಖಾನ್ ನಾಯಕನಾಗಿ ಎಂಟ್ರಿಕೊಡುತ್ತಿರುವ ಬಹುನಿರೀಕ್ಷಿತ ಚಿತ್ರ ಬನಾರಸ್. ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಈ ಹೊತ್ತಿನಲ್ಲಿ ನಾನಾ ದಿಕ್ಕಿನಲ್ಲಿ ಈ ಚಿತ್ರದ ಬಗ್ಗೆ ಪ್ರೇಕ್ಷಕರ ವಲಯದಲ್ಲಿ ವ್ಯಾಪಕ ಚರ್ಚೆಗಳು ಹುಟ್ಟುಕೊಂಡಿವೆ. ಅದೆಲ್ಲದರ ಒಡ್ಡೋಲಗದಲ್ಲಿ ದಿನದಿಂದ ದಿನಕ್ಕೆ ಶೈನಪ್ ಆಗುತ್ತಾ ಸಾಗುತ್ತಿರುವ ಬನಾರಸ್ ಕಡೆಯಿಂದ ಒಂದರ ಹಿಂದೊಂದರಂತೆ ಖುಷಿಯ ಸಂಗತಿಗಳು ಜಾಹೀರಾಗುತ್ತಿವೆ. ಕೇರಳದ ಪ್ರಖ್ಯಾತ ಸಂಸ್ಥೆ ಬನಾರಸ್ ವಿತರಣಾ ಹಕ್ಕು ಖರೀದಿಸಿದ ಸುದ್ದಿ ಹೊರ ಬಿದ್ದ ಬೆನ್ನಲ್ಲಿಯೇ, ಕರ್ನಾಟಕದಲ್ಲಿ ವಿತರಣಾ ಹಕ್ಕುಗಳನ್ನು ಯಾವ ಸಂಸ್ಥೆ ಪಡೆದುಕೊಳ್ಳುತ್ತೆ ಅಂತೊಂದು ಪ್ರಶ್ನೆ ಮೂಡಿಕೊಂಡಿತ್ತು. ಅದಕ್ಕೀಗ ನಿಖರವಾದ ಉತ್ತರ ಸಿಕ್ಕಿದೆ!
ಶೈಲಜಾ ನಾಗ್ ಮತ್ತು ಬಿ ಸುರೇಶ್ ಒಡೆತನದ ಡಿ ಬೀಟ್ಸ್, ಬನಾರಸ್ ಚಿತ್ರದ ವಿತರಣಾ ಹಕ್ಕುಗಳನ್ನು ಖರೀದಿಸಿದೆ. ಈ ಸಂಸ್ಥೆಯ ಮೂಲಕವೇ ನವೆಂಬರ್ ನಾಲಕ್ಕರಂದು ಬನಾರಸ್ ಕರ್ನಾಟಕದ ಉದ್ದಗಲಕ್ಕೂ ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದೆ. ಡಿ ಬೀಟ್ಸ್ ಕರ್ನಾಟಕದ ಮಟ್ಟಿಗೆ ಪ್ರತಿಷ್ಠಿತ ಸಂಸ್ಥೆ. ಅದರ ಕಡೆಯಿಂದ ಈಗಾಗಲೇ ಒಂದಷ್ಟು ಹಿಟ್ ಸಿನಿಮಾಗಳು ವಿತರಣೆಯಾಗಿವೆ. ಅಷ್ಟಕ್ಕೂ ಈ ಸಂಸ್ಥೆ ಎಲ್ಲ ದಿಕ್ಕಿನಿಂದಲೂ ಪರಾಮಾರ್ಶಿಸದ ಹೊರತಾಗಿ ಯಾವುದೇ ಸಿನಿಮಾಗಳ ವಿತರಣಾ ಹಕ್ಕುಗಳನ್ನು ಖರೀದಿಸೋದಿಲ್ಲ. ಅಂಥಾದ್ದೊಂದು ಗುಣಮಟ್ಟವನ್ನು ಕಾಯ್ದುಕೊಂಡಿರೋದರಿಂದಲೇ ಆ ಸಂಸ್ಥೆಯ ಕಡೆಯಿಂದ ಬಿಡುಗಡೆಯಾಗೋ ಚಿತ್ರ ಹಿಟ್ ಆಗುತ್ತೆಂಬ ನಂಬಿಕೆ ಮೂಡಿಕೊಂಡಿದೆ. ಇದುವೇ ಬನಾರಸ್ ಬಗೆಗಿನ ನಿರೀಕ್ಷೆ ಮತ್ತಷ್ಟು ನಿಗಿನಿಗಿಸುವಂತೆ ಮಾಡಿರೋದು ಸತ್ಯ.
ಇದೀಗ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಬನಾರಸ್ ಬಿಡುಗಡೆಯ ಹಾದಿ ಸುಗಮನವಾಗಿದೆ. ಇನ್ನುಳಿದ ಭಾಷೆಗಳಲ್ಲಿಯೂ ಕೂಡಾ ವಿತರಣಾ ಹಕ್ಕುಗಳನ್ನು ಪಡೆದುಕೊಳ್ಳಲು ಖ್ಯಾತ ಸಂಸ್ಥೆಗಳು ರೇಸಿನಲ್ಲಿವೆ. ದಿನದೊಪ್ಪೊತ್ತಿನಲ್ಲಿಯೇ ಆ ಬಗೆಗಿನ ಒಂದಷ್ಟು ಮಾಹಿತಿಗಳು ಹೊರಬೀಳಲಿವೆ. ಸದ್ಯ ನಾಯಕ ಝೈದ್ ಖಾನ್ ಪರಭಾಷೆಗಳಲ್ಲಿ ಬನಾರಸ್ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸೋನಲ್ ಮೊಂತೇರೋ ಕೂಡಾ ಅವರಿಗೆ ಜೊತೆಯಾಗಿದ್ದಾರೆ. ಇದರೊಂದಿಗೆ ಟ್ರೈಲರ್ ಮತ್ತು ಹಾಡುಗಳು ಹಬ್ಬಿಸಿದ್ದ ಕ್ರೇಜ್ ಮತ್ತಷ್ಟು ತೀವ್ರಗೊಂಡಂತಾಗಿದೆ. ಇದೆಲ್ಲದರ ನಡುವೆ, ಬಿಡುಗಡೆಯ ಹೊಸ್ತಿಲಿನಲ್ಲಾಗುತ್ತಿರುವ ಸಕಾರಾತ್ಮಕ ಪಲ್ಲಟಗಳಿಂದ ನಿರ್ಮಾಪಕ ತಿಲಕ್ ಬಲ್ಲಾಳ್ ಸೇರಿದಂತೆ ಒಂದಿಡೀ ಚಿತ್ರತಂಡ ಖುಷಿಗೊಂಡಿದೆ.