ಒಂದು ವಯಸ್ಸಿನಲ್ಲಿ ಪ್ರೀತಿ ಅನ್ನೋ ಮಾಯೆ ಯಾರನ್ನೇ ಆದರೂ ಆವರಿಸಿಕೊಳ್ಳುತ್ತೆ. ಅದೇನೇ ಮುಚ್ಚಿಟ್ಟರೂ, ಬಚ್ಚಿಟ್ಟರೂ ಇಂಥಾ ಪ್ರೀತಿಯ ಪರಿಣಾಮ ಹೊರಜಗತ್ತಿಗೆ ಸ್ಪಷ್ಟವಾಗಿ ಗೊತ್ತಾಗುವಂತಿರುತ್ತೆ. ಯಾಕಂದ್ರೆ, ಪ್ರೀತಿಯಲ್ಲಿ ಬಿದ್ದವರ ವರ್ತನೆಗಳೇ ವಿಚಿತ್ರವಾಗಿರುತ್ತವೆ. ಕಾಲಡಿಯಲ್ಲಿ ಸದಾ ಚಿಮ್ಮು ಹಲಗೆಯನ್ನಿಟ್ಟುಕೊಂಡವರಂತೆ ಸದಾ ಕಾಲವೂ ಪುಟಿದೇಳುತ್ತಿರುತ್ತಾರೆ. ತೀರಾ ಮಂಕುದಿಣ್ಣೆಗಳಂತಿರುವವರೂ ಕೂಡಾ ಪಕ್ಕಾ ಆಕ್ಟೀವ್ ಆಗಿ ಬಿಡುತ್ತಾರೆ.
ಹಾಗಾದ್ರೆ ಪ್ರೀತಿಗೆ ಆ ಥರದ ಅಗಾಧ ಶಕ್ತಿ ಇದೆಯಾ? ಯಾಕೆ ಪ್ರೀತಿ ಅನ್ನೋ ಮಾಯೆ ಥರ ಥರದಲ್ಲಿ ಕಾಡಿಸುತ್ತೆ ಎಂಬ ಪ್ರಶ್ನೆಗಳಿಗೆಲ್ಲ ಮನೋ ವಿಜ್ಞಾನ ಮಜವಾದ ಉತ್ತರವನ್ನೇ ಆವಿಷ್ಕರಿಸಿದೆ. ಆ ವಿವರಗಳು ನಿಜಕ್ಕೂ ಗಾಬರಿ ಬೀಳುವಂತಿದೆ. ಅದು ಪ್ರೀತಿಯನ್ನು ಡ್ರಗ್ಸ್ನೊಂದಿಗೆ ಸಮೀಕರಿಸುವಂತೆಯೂ ಇದೆ. ಯಾಕಂದ್ರೆ, ಪ್ರೀತಿಯ ಭಾವಗಳು ಕೊಕೇನ್ನಷ್ಟೇ ಪ್ರಮಾಣದಲ್ಲಿ ಉತ್ಸಾಹವನ್ನ ಪುಟಿದೆಬ್ಬಿಸಿ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆಯಂತೆ. ಕೊಕೇನ್ ಮೆದುಳಿನ ಮೇಲೆ ಯಾವ ಥರದಲ್ಲಿ ಪರಿಣಾಮ ಬೀರುತ್ತದೆಂಬುದು ಗೊತ್ತಿರೋದೇ. ಪ್ರೀತಿಯೂ ಕೂಡಾ ಅದರೊಂದಿಗೆ ಪೈಪೋಟಿಗೆ ಬೀಳುವಂತಿದೆ.
ಪ್ರೀತಿ ಕೂಡಾ ನಮ್ಮ ದೇಹದಲ್ಲಿ ಹಲವಾರು ರಾಸಾಯನಿಕಗಳನ್ನು ಉತ್ಪತ್ತಿ ಮಾಡುತ್ತವೆಯಂತೆ. ಅದು ಮೆದುಳಿನಿಂದ ಸೀದಾ ನರಮಂಡಲಕ್ಕೂ ಕನೆಕ್ಷನ್ನು ಕಲ್ಪಿಸುತ್ತೆ. ಪ್ರೀತಿಯಲ್ಲಿ ಬಿದ್ದು ಅದು ಉತ್ತುಂಗದಲ್ಲಿರುವ ಕ್ಷಣಗಳಲ್ಲಿ ಅದರ ಪರಿಣಾಮ ಮೆದುಳಿನ ಮೇಲೆ ಅತಿಯಾಗಿರುತ್ತೆ. ಅದು ಮೆದುಳಿನ ಹನ್ನೆರಡು ಸೂಕ್ಷ್ಮ ಬಿಂದುಗಳನ್ನು ಪ್ರಚೋದಿಸುತ್ತದೆಯಂತೆ. ಪ್ರೀತಿಸಿದ ಜೀವ ಹೇಳಿದರೆ ಪ್ರಪಾತಕ್ಕೆ ಬೀಳಲೂ ರೆಡಿಯಾಗೋ ಮನಸ್ಥಿತಿಗಳಿವೆಯಲ್ಲಾ? ಅದೆಲ್ಲವೂ ಪ್ರೀತಿ ಪಡಿಮೂಡಿಸೋ ರಾಸಾಯನಿಕ ಛಾಯೆಗಳ ಚಮಾತ್ಕಾರವಲ್ಲದೆ ಬೇರೇನೂ ಅಲ್ಲ!