ವಿಜಯ ಪ್ರಸಾದ್ ನಿರ್ದೇಶನದ ತೋತಾಪುರಿ ಚಿತ್ರವೀಗ ನಾನಾ ದಿಕ್ಕುಗಳಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ. ಒಂದು ಗಹನವಾದ ವಿಚಾರವನ್ನು, ಡೈಲಾಗುಗಳ ಜೀಕಾಟದಲ್ಲಿ ಮೆಲುವಾಗಿ ಹೇಳುವ ರೀತಿ ವಿಜಯ ಪ್ರಸಾದ್ರ ಸ್ಪೆಷಾಲಿಟಿಯೂ ಹೌದು. ಈವತ್ತಿನ ಘಳಿಗೆಯಲ್ಲಿ ಧರ್ಮಾಧಾರಿತ ರಾಜಕಾರಣವೆಂಬುದು ನಾನಾ ಥರದಲ್ಲಿ ಅಸಹನೆಗಳನ್ನು ಹುಟ್ಟು ಹಾಕುತ್ತಿದೆ. ಎಲ್ಲಕ್ಕಿಂತಲೂ ಧರ್ಮವೇ ಮುಖ್ಯ ಎಂಬಂಥಾ ಮನೋಭೂಮಿಕೆಯಲ್ಲಿ ಮನಸುಗಳನ್ನು ಕಟ್ಟಿಹಾಕಿ, ಆ ಮೂಲಕ ರಾಜಕೀಯವಾಗಿ ಫಸಲು ತೆಗೆಯುವ ಹುನ್ನಾರದ ರಾಜಕಾರಣ ರಣ ಕೇಕೆ ಹಾಕುತ್ತಿದೆ. ಇಂಥಾ ಹೊತ್ತಿನಲ್ಲಿ ಸಾಮರಸ್ಯ, ಭಾವೈಕ್ಯತೆಯ ಬಗ್ಗೆ ಮಾತಾಡುವುದೇ ದೇಶದ್ರೋಹ, ಧರ್ಮದ್ರೋಹದಂತೆ ಬಿಂಬಿಸಲ್ಪಡುವ ಅಪಾಯವೂ ಇದೆ. ಆದರೆ ವಿಜಯ ಪ್ರಸಾದ್ ಯಾವ ಆತಂಕವೂ ಇಲ್ಲದೆ ಪೋಲಿ ಡೈಲಾಗುಗಳ ಪರದೆಯಾಚೆಗೆ ವಾಸ್ತವಕ್ಕೆ ಕನ್ನಡಿ ಹಿಡಿಯುವಂಥಾ, ಸತ್ಯವನ್ನು ಒರೆಗೆ ಹಚ್ಚುವಂಥಾ ಭಿನ್ನವಾದ ಪ್ರಯತ್ನ ಮಾಡಿದ್ದಾರೆ.
ಒಂದು ವೇಳೆ ಈ ಚಿತ್ರದಲ್ಲಿ ಜಗ್ಗೇಶ್ ಬದಲಿಗೆ ಬೇರ್ಯಾರೇ ನಾಯಕನಾಗಿ ನಟಿಸಿದ್ದರೂ ತೋತಾಪುರಿಯೊಳಗಿನ ಅಸಲೀ ಸ್ವಾದ ಇಷ್ಟೊಂದು ದಿಕ್ಕಿನಲ್ಲಿ ಚರ್ಚೆಗೆ ಗ್ರಾಸವಾಗುತ್ತಿರಲಿಲ್ಲವೇನೋ. ಇದೀಗ ಬಿಜೆಪಿ ಪಕ್ಷದ ಮುಖಂಡರಾಗಿದ್ದುಕೊಂಡು, ವರ್ಷಾಂತರಗಳ ಕಾಲ ತಿಣುಕಾಡಿರುವ ಜಗ್ಗಣ್ಣ ಎಂಎಲ್ಸಿ ಆಗಿದ್ದಾರೆ. ಒಂದು ಕಾಲದಲ್ಲಿ ನವರಸಗಳನ್ನೂ ಆವಾಹಿಸಿಕೊಂಡಂತೆ ನಗಿಸುತ್ತಾ, ಜಾತಿ ಧರ್ಮಗಳ ಎಲ್ಲೆ ಮೀರಿ ನಗೆ ಹಂಚುತ್ತಿದ್ದ ಜಗ್ಗೇಶ್ ಇದೀಗ ಬೇರೆಯದ್ದೇ ಅವತಾರವೆತ್ತಿದ್ದಾರೆ. ಅದು ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿರುವ ಅನಿವಾರ್ಯತೆಯೋ, ಅಂಥವಾ ಅವರ ಆಳದಲ್ಲಿ ಬಹುದಿನಗಳಿಂದ ಇದ್ದದ್ದೇ ಅಂಥಾ ಕಿಸುರೋ ರಾಘವೇಂದ್ರ ಸ್ವಾಮಿಗಷ್ಟೇ ಗೊತ್ತು. ಆದರೆ ಜಗ್ಗಣ್ಣ ಇತ್ತೀಚೆಗೆ ಕಟ್ಟರ್ ಬಲಪಂಥೀಯ ವಿಚಾರ ಧಾರೆಯ ವ್ಯಕ್ತಿಯಂತೆ ಕಾಣಿಸುತ್ತಿರೋದರಲ್ಲಿ ಯಾವ ಸಂದೇಹವೂ ಇಲ್ಲ!
ಇಂಥಾ ಜಗ್ಗಣ್ಣನ ಬಾಯಲ್ಲಿ ಬಿಜೆಪಿಯ ಅಸಲೀ ಆತ್ಮವೇ ಅದುರುವಂಥಾ ಡೈಲಾಗುಗಳು ತೂರಿ ಬಂದರೆ ಭಕ್ತಗಣದ ಆತ್ಮ ಅದೆಷ್ಟು ನರಳಬೇಡ? ಇದೀಗ ತೋತಾಪುರಿ ಒಂದು ಮಟ್ಟಿಗೆ ಪ್ರದರ್ಶನ ಕಾಣುತ್ತಿದೆ. ಜನ ಅದನ್ನು ಒಂದೊಳ್ಳೆ ಮನೋರಂಜನಾತ್ಮಕ ಚಿತ್ರವೆಂದು ಪರಿಗಣಿಸಿ ಮೆಚ್ಚಿಕೊಂಡಿದ್ದಾರೆ. ಹಾಗೆ ತೋತಾಪುರಿ ನೋಡಿ ಬಂದ ಒಂದಷ್ಟು ಮಂದಿ ಅದರ ಸ್ವಾದವನ್ನು ಕೊಂಡಾಡುತ್ತಿದ್ದರೆ, ಮತ್ತೆ ಕೆಲ ಮಂದಿಗೆ ಅದೆಂಥಾದ್ದೋ ಅಸಹನೆ ಕಾರಣವಾಗಿ ಬಿಟ್ಟಿದೆ. ಈ ಹಿನ್ನೆಲೆಯಲ್ಲಿ, ಜಗ್ಗೇಶ್ ಮತ್ತು ಅದಿತಿ ಪ್ರಭುದೇವ ನಟಿಸಿರುವ ಕೆಲವೊಂದಷ್ಟು ದೃಷ್ಯಗಳನ್ನಿಟ್ಟುಕೊಂಡು ಓತಾಪ್ರೋತವಾಗಿ ಟ್ರೋಲ್ ಮಾಡಲಾಗುತ್ತಿದೆ. ಇಲ್ಲೇನೋ ಪ್ರಭು ಶ್ರೀರಾಮ ಚಂದ್ರನಿಗೆ ಅವಮಾನವಾಗಿಬಿಟ್ಟಿದೆ, ದೈವ ನಿಂದನೆಯಾಗಿಬಿಟ್ಟಿದೆ ಎಂಬಂಥದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹುಯಿಲೆದ್ದಿದೆ. ಈ ವಿಚಾರ ಕೂಡಾ ತೋತಾಪುರಿಗೆ ಪ್ಲಸ್ ಆಗಿದೆಯಾದರೂ, ನಿಜಕ್ಕೂ ಈ ಚಿತ್ರದೊಳಗೆ ಅಂಥಾದ್ದೇನಿದೆ ಅಂತ ನೋಡಹೋದರೆ ಮಹತ್ವದ ಒಂದಷ್ಟು ಅಂಶಗಳು ಜಾಹೀರಾಗುತ್ತವೆ.
ಈ ಚಿತ್ರದಲ್ಲಿ ಜಗ್ಗೇಶ್ ಈರೇಗೌಡ ಎಂಬ ಪಾತ್ರವನ್ನು ನಿಭಾಯಿಸಿದ್ದರೆ, ಅದಿತಿ ಪ್ರಭುದೇವ ಶಕೀಲಾ ಭಾನು ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಒಂದು ಸನ್ನಿವೇಶದಲ್ಲಿ ಈರೇಗೌಡ ಜಗ್ಗೇಶ್ ಶಕೀಲಾ ಭಾನುಗೆ ‘ಶ್ರೀರಾಮಚಂದ್ರನಿಗೆ ಮಂದಿರ ಇಷ್ಟಾನೋ ಮಳೆ ಇಷ್ಟಾನೋ’ ಅಂತೊಂದು ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಶಕೀರಾ ಭಾನು ‘ಮಳೆ… ಸಾಮ್ರಾಜ್ಯಾನೇ ಬಿಟ್ಟು ದೊಡ್ಡೋನಾದೋನು ಮಂದಿರ ಕೇಳಿ ಸಣ್ಣೋನಾಗ್ತಾನಾ? ಮನುಷ್ಯನಿಗೆ ಮಂದಿರ ಮಸೀದಿಗಿಂತ ಮಳೆ ಮತ್ತು ಮಣ್ಣು ಮುಖ್ಯ ಅಂತ ರಾಮನಿಗೆ ಗೊತ್ತಿದ್ದಿದ್ದರಿಂದಾನೇ ರಾಮ ನಮ್ಮೊಳಗೆ ಇನ್ನೂ ಜೀವಂತವಾಗಿರೋದು. ಶ್ರೀರಾಮನ್ನ ಮಂದಿರದಲ್ಲಿಟ್ರೆ ಅವನು ಒಂಟಿಯಾಗಿರ್ತಾನೆ. ಮನಸಿನಲ್ಲಿಟ್ರೊಂಡ್ರೆ ಜೊತೆಯಾಗಿರ್ತಾನೆ’ ಅಂತಾಳೆ. ಇದಕ್ಕೆ ಜಗ್ಗಣ್ಣ ‘ನಾವು ಜಾತಿ ಧರ್ಮವನ್ನ ದಾಟಿಕೊಳ್ಳೋಕೆ ಇಷ್ಟು ಸಾಕು’ ಅಂತ ಧನ್ಯತಾ ಭಾವದಿಂದ ಉತ್ತರಿಸುತ್ತಾರೆ.
ಇದರಲ್ಲಿ ವಿರೋಧಿಸೋದೇನಿದೆಯೋ ಶ್ರೀರಾಮನೇ ಬಲ್ಲ. ಅಷ್ಟಕ್ಕೂ ಈಗೆದ್ದಿರುವ ತಕರಾರೆಂದರೆ, ಓರ್ವ ಮುಸ್ಲಿಂ ಪಾತ್ರದ ಬಾಯಲ್ಲಿ ಶ್ರೀರಾಮನ ಬಗ್ಗೆ ಮಾತು ಹೊರಟಿದ್ದಷ್ಟೇ. ನಿಜವಾಗಿಯಾದರೆ, ವಿಜಯ ಪ್ರಸಾದ್ ಆ ಪಾತ್ರದ ಬಾಯಿಂದ ಮೌಲಿಕವಾದ ಮಾತುಗಳನ್ನೇ ಆಡಿಸಿದ್ದಾರೆ. ಅಂಥಾದ್ದೊಂದು ತಿಳುವಳಿಕೆ ಈ ದಿನಮಾನದ ತುರ್ತೂ ಹೌದು.ಸಾಮಾನ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಸಾಮಾಜಿಕ ಕದಲಿಕೆಗಳನ್ನು ಒಳಗೊಂಡು ಸಾಗುವ ಮನಃಸ್ಥಿತಿಗಳೇ ಇಲ್ಲ. ಅಂಥಾದ್ದರ ನಡುವೆ ವಿಜಯ ಪ್ರಸಾದ್ ಬಹುಮುಖ್ಯ ನಿರ್ದೇಶಕರಾಗಿ ಕಾಣಿಸುತ್ತಾರೆ. ಪೋಲಿ ಡೈಲಾಗುಗಳ ವರಸೆಯ ನಡುವೆ ಒಮ್ಮೊಮ್ಮೆ ರೇಜಿಗೆ ಹುಟ್ಟಿಸುತ್ತಲೇ, ಇಂಥಾ ವಾಸ್ತವಿಕ ನೆಲೆಯ ಪ್ರಯೋಗಗಳ ಮೂಲಕ ಹತ್ತಿರಾಗುತ್ತಾರೆ. ಅಂತೂ ಪಕ್ಷದ ಮಂದಿಯನ್ನು ಓಲೈಸಿಕೊಳ್ಳಲು ಅದಕ್ಕೆ ತಕ್ಕುದಾದಂಥಾ ಆಟ ಕಟ್ಟುತ್ತಿರುವ ಜಗ್ಗಣ್ಣ, ಈರೇಗೌಡನಾಗಿ ಬೇರೆಯದ್ದೇ ವರಸೆ ಪ್ರದರ್ಶಿಸಿದ್ದಾರೆ. ಅದನ್ನು ಕೇಳಿ ಭಕ್ತ ಗಣ ಬೆಚ್ಚಿಬಿದ್ದು ಟ್ರೋಲು ಮಾಡಿ ಸಮಾಧಾನಿಸಿಕೊಳ್ಳುತ್ತಿದೆ. ಆದರೆ, ಇಂಥಾ ವಿಚಾರಗಳ ದೃಷ್ಟಿಯಿಂದಲಾದರೂ ತೋತಾಪುರಿ ಮಹತ್ವದ ಚಿತ್ರ ಅನ್ನೋದರಲ್ಲಿ ಎರಡು ಮಾತಿಲ್ಲ!