ಪ್ರತೀ ಸಿನಿಮಾ ಪ್ರೇಮಿಗಳ ಪಾಲಿಗೂ ಒಂದೊಂದು ನಿರ್ದಿಷ್ಟ ಜಾನರಿನ ಸಿನಿಮಾಗಳು ಪ್ರಿಯವಾಗಿರುತ್ತವೆ. ಆದರೆ ಈ ಹಾರರ್ ಸಿನಿಮಾಗಳ ಮೋಹ ಮಾತ್ರ ಬಹುತೇಕ ಎಲ್ಲ ವರ್ಗಗಳ ಪ್ರೇಕ್ಷಕರನ್ನೂ ಬಹುವಾಗಿ ಆವರಿಸಿಕೊಂಡಿದೆ. ಬೇರೆ ಭಾಷೆಗಳ ಕಥೆ ಹಾಗಿರಲಿ; ನಮ್ಮ ಕನ್ನಡ ಸಿನಿಮಾ ಪ್ರೇಮಿಗಳೂ ಕೂಡಾ ಹಾರರ್ ಮೂವಿಗಳನ್ನ ಮುಗಿಬಿದ್ದು ನೋಡ್ತಾರೆ. ಕಥೆ, ನಿರೂಪಣೆ ಕೊಂಚ ಚೆನ್ನಾಗಿದ್ದರೂ ಕೂಡಾ ಇಂಥಾ ಸಿನಿಮಾಗಳು ಭರ್ಜರಿ ಕಲೆಕ್ಷನ್ನಿನೊಂದಿಗೆ ಜಯ ಗಳಿಸಿ ಬಿಡುತ್ತವೆ. ಆದರೆ ಇಂಥ ಹಾರರ್ ಸಿನಿಮಾಗಳು ನಮ್ಮ ಮೇಲೆ ಮಾಡೋ ಪರಿಣಾಮಗಳ ಕಥೆ ಮಾತ್ರ ತುಂಬಾನೇ ಹಾರಿಬಲ್ ಆಗಿದೆ!
ಹಾರರ್ ಸಿನಿಮಾ ನೋಡಲು ಒಂದು ರೇಂಜಿಗೆ ಗುಂಡಿಗೆ ಇರಬೇಕಾಗುತ್ತೆ. ಅದರಲ್ಲಿನ ಕೆಲ ಸೀನುಗಳಂತೂ ರೋಮವೆಲ್ಲ ಸೆಟೆದು ನಿಂತು ಭಯವಾಗಿ ಬಾಯಿ ಬಡಿದುಕೊಳ್ಳುವಂತಿರುತ್ತವೆ. ಅಂಥಾ ಭಯದ ಉತ್ತುಂಗದಲ್ಲಿ ನಮ್ಮ ದೇಹದೊಳಗೆ ಎಂತೆಂಥಾ ಬದಲಾವಣೆಗಳಾಗಬಹುದು, ಯಾವ್ಯಾವ ಥರದ ರಾಸಾಯನಿಕಗಳು ಉತ್ಪತ್ತಿಯಾಗಬಹುದೆಂದು ಅರ್ಥವಾಗದಿರುವಂಥಾದ್ದೇನೂ ಅಲ್ಲ. ಆ ಭಯವೇ ನಸೀಬುಗೆಟ್ಟರೆ ಜೀವವನ್ನೇ ಕಿತ್ತುಕೊಳ್ಳುವಷ್ಟು ಅನಾಹುತಕಾರಿಯಾಗಿರುತ್ತದೆ.
ಈ ವಿಚಾರವನ್ನು ವೈದ್ಯಕೀಯ ಜಗತ್ತೇ ಸ್ಪಷ್ಟೀಕರಿಸಿದೆ. ಅಂದಹಾಗೆ, ಹಾರರ್ ಮೂವಿ ನೋಡಿದಾಗ ನಮ್ಮ ದೇಹದಲ್ಲಿ ರಕ್ತ ಹೆಪ್ಪುಗಟ್ಟಲು ಬೇಕಾಗುವಂಥ ಪ್ರೊಟೀನುಗಳು ಯಥೇಚ್ಛವಾಗಿ ಉತ್ಪತ್ತಿಯಾಗುತ್ತವೆಯಂತೆ. ಅದುವೇ ಹೃದಯಾಘಾತವೂ ಸೇರಿದಂತೆ ನಾನಾ ಮಾರಣಾಂತಿಕ ಸಮಸ್ಯೆಗೂ ಕಾರಣವಾಗಬಹುದು. ಆ ಸಂದರ್ಭದಲ್ಲಿ ಕೊಂಚ ಆಚೀಚೆ ಆದರೂ ಹೆಣವಾಗಿ ಸಿನಿಮಾ ಮಂದಿರದಿಂದ ಹೊರಬೀಳೋ ಪರಿಸ್ಥಿತಿಯೂ ಬಂದೊಗಬಹುದು.
ಆದರೆ ಕೆಲ ಮಂದಿ ಹಾರರ್ ಸಿನಿಮಾ ನೋಡೋದನ್ನು ನಶೆಯಂತೆಯೇ ಹಚ್ಚಿಕೊಂಡಿದ್ದಾರೆ. ಅದಕ್ಕೆ ಕಾರಣವಾಗಿರೋದೂ ಕೂಡಾ ಒಂದು ಮೇನಿಯಾ. ಅದಕ್ಕೆ ಪ್ಯಾರಾನಾರ್ಮಲ್ ಮೇನಿಯಾ ಅಂತ ಹೆಸರಿಡಲಾಗಿದೆ. ಹಾರರ್ ಸಿನಿಮಾ ನೋಡುತ್ತಿರುವಾಗ ನಮ್ಮ ಮೆದುಳಲ್ಲಿ ಆಡ್ರಿನಲೈನ್ ಎಂಬ ಹಾರ್ಮೋನು ಉತ್ಪತ್ತಿಯಾಗುತ್ತೆ. ಅದು ಭಯವನ್ನು ಉದ್ವೇಗದೊಂದಿಗೆ ಉದ್ದೀಪನಗೊಳಿಸುತ್ತೆ. ಅದುವೇ ನಶೆಯಂತೆ ಆಕಾಶದಲ್ಲಿ ತೇಲಾಡಿಸುತ್ತೆ. ಎಷ್ಟೋ ಮಂದಿ ಅದಕ್ಕೆ ವಶವಾಗಿಯೇ ಹಾರರ್ ಸಿನಿಮಾ ಪ್ರಿಯರಾಗಿರ್ತಾರೆ. ಆ ನಶೆ ಉತ್ತುಂಗಕ್ಕೇರಿದರೆ ಅದರಿಂದಲೇ ರಕ್ತ ಹೆಪ್ಪುಗಟ್ಟೋ ಸಾಧ್ಯತೆ ಹೆಚ್ಚಾಗಿದೆ!