ಬಹುಶಃ ಜಗತ್ತಿನ ಅಚ್ಚರಿಗಳೆಲ್ಲ ಅದ್ಯಾವ ಕ್ಷಣದಲ್ಲೋ ಒಮ್ಮೆಲೆ ಚಿಮ್ಮಿದಾಗ ಅದರಲ್ಲೊಂದು ಕಣಕ್ಕೆ ಜೀವ ಬಂದು ನೀನು ಸೃಷ್ಟಿಯಾದೆಯೇನೋ. ಕೆಲವೊಮ್ಮೆ ಅಂಥ ಬೆರಗುಗಳೆಲ್ಲವೂ ನಿನ್ನವೆರಡು ಪುಟ್ಪುಟ್ಟ ಕಣ್ಣುಗಳಲ್ಲಿಯೇ ಬಿಡಾರ ಹೂಡಿವೆಯೇನೋ ಅನ್ನಿಸುತ್ತೆ. ಇಂಥಾ ಅಪರೂಪದ ಜೀವವೊಂದು ಈ ಬದುಕಿನ ಹೊಸ್ತಿಲೊಳಗೆ ಅಡಿಯಿರಿಸಿದ ಕ್ಷಣದಿಂದಲೇ ಎಲ್ಲವೂ ಅದಲು ಬದಲಾಗಿದೆ. ತಮ್ಮ ಪಾಡಿಗೆ ಕದಲುವ ಋತುಮಾನಗಳಿಗೂ ಈಗ ಬೇರೆಯದ್ದೇ ಬಣ್ಣ. ಏನೇನೂ ಇಲ್ಲ ಅನ್ನಿಸುತ್ತಿದ್ದ ಬದುಕಲ್ಲೀಗ ಮೊಗೆದಷ್ಟೂ ಖುಷಿ. ಕುಣಿದಾಡುವಷ್ಟು ಉನ್ಮಾದ. ಇದೆಲ್ಲವನ್ನು ಒಂದೇ ಪ್ಯಾಕೇಜಿನಲ್ಲಿ ಕೊಟ್ಟುಬಿಟ್ಟ ನಿಂಗೆ ನನ್ನಿಡೀ ಜೀವಿತವನ್ನೇ ಅಡ ಇಟ್ಟಿದ್ದೇನೆ…
ಪ್ರೀತಿಯೆಂಬುದು ಸದ್ದಿಲ್ಲದೇ ಹರಿದು ಬಂದಾಗ ಇಂಥಾ ಪವಾಡಗಳು ಸೃಷ್ಟಿಯಾಗುತ್ತವೆ ಅಂತ ಖಂಡಿತವಾಗಿಯೂ ನಾನಂದುಕೊಂಡಿರಲಿಲ್ಲವೇ ಹುಡುಗಿ… ಈ ಜಗ್ಗತ್ತಲ್ಲಿ ತೀರಾ ಒಂದು ಜೀವ ಮಾತ್ರ ನನ್ನ ಸ್ವಂತದ್ದು, ಅದರ ಪ್ರತೀ ಉಸಿರು, ಕದಲಿಕೆಗಳೂ ನನ್ನವೆಂಬ ಭಾವನೆ ಮತ್ತು ಎಂಥಾದ್ದೇ ಸಂದರ್ಭ ಬಂದಾಗಲೂ ಹೆಗಲಿಗಾನಿಸಿಕೊಂಡು ಸಂತೈಸುವ ಜೀವವೊಂದು ಸದಾ ಜೊತೆಗಿರುತ್ತದೆ ಎಂಬ ಭರವೆಸೆ ಇದೆಯಲ್ಲಾ? ಅದನ್ನು ಪದಗಳಲ್ಲಿ ಹಿಡಿದಿಡೋದು ಕಷ್ಟ. ನೀನು ಉಸಿರು ಸೋಕುವಷ್ಟು ಹತ್ತಿರ ನಿಂತಿದ್ದಾಗಲೂ ಮಾತೇ ಆಡದೆ ಎಲ್ಲವನ್ನೂ ಆಲಿಸ ಬಲ್ಲ ತಾಕತ್ತು ಬಂದಿದ್ದು ಅದೆಲ್ಲಿಂದ ಅಂತೊಂದು ಅಚ್ಚರಿ ಈ ಕ್ಷಣಕ್ಕೂ ಉಳಿದೇ ಹೋಗಿದೆ.
ನಿನ್ನನ್ನು ಹೊರತಾಗಿಸಿ ಬೇರೆನನ್ನೂ ಕಲ್ಪಿಸಿಕೊಳ್ಳಲಾಗದ ಸ್ಥಿತಿಯೊಂದು ಇದೀಗ ನನ್ನನ್ನಾವರಿಸಿಕೊಂಡಿದೆ. ಮನಸು ಮಂಕಾದಾಗ, ಕಾರಣವೇ ಇಲ್ಲದೇ ಬೇಸರವಾದಾಗ ನಿನ್ನ ಕಣ್ಣುಗಳಲ್ಲಿನ್ನ ಬೆರಗನ್ನು ಬೊಗಸೆಯಷ್ಟು ಬಾಚಿಕೊಂಡು ಎದೆಗೆ ಚೆಲ್ಲಿಕೊಂಡರೆ ಮತ್ತಷ್ಟು ತೀವ್ರವಾಗಿ ಬದುಕುವಂತಾಗುತ್ತೆ. ಪ್ರತೀ ದಿನದ ಮುಂಜಾವ, ಸಂಜೆಯ ಆಹ್ಲಾದ, ಬೆಳದಿಂಗಳ ಮುದಗಳೆಲ್ಲವಕ್ಕೂ ಈಗತಾನೇ ಹುಟ್ಟಿದ ಮಗುವಿನಂತೆ ಪುಳಕಗೊಳ್ಳುತ್ತಲೇ ಯಾಕೋ ನನ್ನಾಯುಷ್ಯ ಒಂದಷ್ಟು ಹೆಚ್ಚಾದಂತಿದೆ. ಬಹುಶಃ ನೀನೊಬ್ಬಳು ಹೀಗೆಯೇ ಜೊತೆಗಿದ್ದೆಯಾದರೆ ಇನ್ನೆರಡು ಜನುಮಗಳನ್ನೂ ಬೋರು ಹೊಡೆಸದಂತೆ ಬದುಕಿ ಬಿಡಬಹುದೇನೋ!
ಈ ಪ್ರೀತಿ ಸೃಸ್ಟಿಸೋ ಬೆರಗುಗಳ ಮುಂದೆ ಜಗತ್ತಿನ ಅಷ್ಟೂ ಅದ್ಭುತಗಳೂ ಡಲ್ಲು ಹೊಡೆಯುತ್ತವೆ. ಇದರಲ್ಲಿನ ಪ್ರತೀ ಪಲ್ಲಟಗಳೂ ಆಹ್ಲಾದವೇ. ನೀ ಖಂಡಿತಾ ಸಿಗುತ್ತಿ ಅಂತ ಗೊತ್ತಿದ್ದರೂ ಬೇಕೆಂತಲೇ ಧಾವಂತ ತುಂಬಿಕೊಂಡು ಏರಿಯಾದ ತಿರುವಿನಲ್ಲಿ, ಗಲ್ಲಿಗಳಲ್ಲಿ ನಿಂತು ಕಾಯುವುದು, ನಿನ್ನ ಬಳಿ ಬೈಸಿಕೊಳ್ಳೋ ಸುಖಕ್ಕಾಗಿಯೇ ಅರ್ಜೆಂಟಿಗೊಂದು ಸೆಗರೇಟು ಸುಟ್ಟು ನಿನ್ನೆದುರು ಪ್ರತ್ಯಕ್ಷವಾಗೋದೆಲ್ಲವೂ ನನ್ನ ಪಾಲಿಗೆ ಸುಖಗಳೇ. ಹೀಗೆ ಕೆಲ ಬಾರಿ ನಿಂಗಿಷ್ಟವಾಗದ್ದನ್ನೇ ಮಾಡಿ ಯಾಕೆ ನಿನ್ನೆದುರು ನಿಲ್ಲುತ್ತೇನೆ ಗೊತ್ತಾ? ಇಂಥಾದ್ದರಿಂದ ನೀ ಮುನಿಸಿಕೊಂಡಾಗ, ತಲೆಗೆ ಮೊಟಕಿದಾಗ, ಮಾತು ನಿಲ್ಲಿಸಿದಂತೆ ನಟಿಸಿ ಮುಷ್ಕರ ಹೂಡಿದಾಗ ನೀನು ನನ್ನವಳೇ ಎಂಬ ಭಾವನೆ ಮತ್ತಷ್ಟು ಬಲವಾಗುತ್ತೆ. ನಿಂಗೆ ನನ್ನೆಡೆಗಿರೋ ಕಕ್ಕುಲಾತಿ ಕಂಡು ಒಳಗೊಳಗೇ ಉಬ್ಬಿ ಹೋಗುತ್ತೇನೆ.
ನಂಗೊತ್ತು, ಇಂಥಾ ಭಾವನೆಗಳನ್ನೆಲ್ಲ ಬಾಯಿ ಮಾತಲ್ಲೇ ಜಾಹೀರು ಮಾಡ ಬೇಕಂತ ನೀ ಪ್ರತೀ ಕ್ಷಣವೂ ಹಂಬಲಿಸುತ್ತಿ. ಆದರೆ ಆ ವಿದ್ಯೆಯಲ್ಲಿ ನಾ ಕೊಂಚ ವೀಕು. ಎಲ್ಲ ಮಾತುಗಳನ್ನೂ ಅದುಮಿಟ್ಟುಕೊಡು ಹೀಗೆ ಆಗಾಗ ಒಂದು ಪತ್ರ ಬರೆಯಬೇಕು. ಒಂದು ಅಚಾನಕ್ ಭೇಟಿಯ ದಿವ್ಯ ಕ್ಷಣವೊಂದರಲ್ಲಿ ಇನ್ನೇನು ಹೊರಡಬೇಕೆಂಬಾಗ ಆ ಪತ್ರವನ್ನು ನಿನ್ನ ಕೈಗಿಡಬೇಕು. ಬಹುಶಃ ಮನೆ ಸೇರಿಕೊಂಡು ರೂಮಿನ ಕದ ಮುಚ್ಚಿ ಸೈರಣೆಯಿಂದ ನೀನದನ್ನು ಓದುತ್ತಿ. ಪುಳಕಗೊಳ್ಳುತ್ತಿ. ಈ ಪ್ರೀತಿಯೆಂಬುದು ಹೀಗೆಯೇ ಹದಗೊಳ್ಳುತ್ತಾ ಮುದಗೊಳ್ಳಲಿ. ನಿನ್ನ ಕಣ್ಣುಗಳಲ್ಲಿ ಗೂಡು ಕಟ್ಟಿರೋ ಬೆರಗುಗಳು ನಿನ್ನ ಸಮೇತ ಶಾಶ್ವತವಾಗಿ ಜೊತೆಯಾಗುವ ಕ್ಷಣಗಳಿಗಾಗಿ ನಾನಿಲ್ಲಿ ಸೈರಣೆಯಿಂದ ಕಾಯುತ್ತಲೇ ಇರುತ್ತೇನೆ.
-ನಿನ್ನವನು