ಆಟವೆಂದರೆ ಕ್ರಿಕೆಟ್ ಮಾತ್ರ ಎಂಬಂಥಾ ವಿಚಿತ್ರ ಮನಃಸ್ಥಿತಿ ಅವ್ಯಾಹತವಾಗಿ ಹಬ್ಬಿಕೊಂಡಿದೆ. ಆ ಆಟದ ಕಾಲ್ತುಳಿತಕ್ಕೆ ಸಿಕ್ಕು ಈಗಾಗಲೇ ಅನೇಕ ದೇಸೀ ಕ್ರೀಡೆಗಳು ಸಣ್ಣ ಕುರುಹೂ ಇಲ್ಲದಂತೆ ಮಾಯವಾಗಿಬಿಟ್ಟಿವೆ. ಇನ್ನೂ ಒಂದಷ್ಟು ದೇಸೀ ಕ್ರೀಡೆಗಳನ್ನು ಜೀವದಂತೆ ಹಚ್ಚಿಕೊಂಡು, ಮಹತ್ತರವಾದದ್ದೇನನ್ನೋ ಸಾಧಿಸುವ ಛಲ ಹೊತ್ತ ಜೀವಗಳ ನಮ್ಮ ದೇಶದಲ್ಲಿವೆ. ಆದರೆ ಅವರೆಲ್ಲರ ಕಣ್ಣ ಹೊಳಪು ಮಣ್ಣುಪಾಲಾಗೋದೇ ಹೆಚ್ಚು. ಇಂಥಾ ವಾತಾವರಣದ ನಡುವೆಯೂ ಇನ್ನೊಂದಷ್ಟು ಅಪ್ಪಟ ದೇಸೀ ಕ್ರೀಡೆಗಳು ಈ ಕ್ಷಣಕ್ಕೂ ತಟುಕು ಉಸಿರುಳಿಸಿಕೊಂಡಿವೆ. ಆ ಸಾಲಿನಲ್ಲಿ ಪ್ರಧಾನವಾಗಿ ಸೇರಿಕೊಳ್ಳುವ ಕ್ರೀಡೆ ಖೊ ಖೊ. ಆ ಕ್ರೀಡೆಯನ್ನೇ ಜೀವಾಳವಾಗಿಸಿಕೊಂಡಿರುವ, ಶರಣ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಗುರು ಶಿಷ್ಯರು’ ಚಿತ್ರ ಇದೀಗ ಬಿಡುಗಡೆಗೊಂಡಿದೆ. ನೋಡಿದ ಪ್ರತಿಯೊಬ್ಬರ ಕಣ್ಣುಗಳಲ್ಲಿಯೂ ಅಪರೂಪದ್ದೊಂದು ಚಿತ್ರ ನೋಡಿದ ತೃಪ್ತ ಭಾವ ಸ್ಫುರಿಸುವಲ್ಲಿ ಗುರು ಶಿಷ್ಯರು ಯಶ ಕಂಡಿದ್ದಾರೆ!
ಒಂದು ಸಿನಿಮಾ ಯಾವ ಅಂಶಗಳೊಂದಿಗೆ ಪರಿಪೂರ್ಣವೆನ್ನಿಸುತ್ತೆ? ಯಾವ ಬಗೆಯಲ್ಲಿ ಭಿನ್ನವಾಗಿ ನೆಲೆ ಕಂಡುಕೊಳ್ಳುತ್ತೆ? ಗಹನವಾದುದೇನನ್ನೋ ಮನೋರಂಜನೆಯ ಚೌಕಟ್ಟಿನಲ್ಲಿ ನಿರೂಪಿಸೋದು ಹೇಗೆ? ಇಂಥಾ ಪ್ರಶ್ನೆಗಳಿಗೆ ಸಿನಿಮಾ ಪರಿಭಾಷೆಯಲ್ಲಿ ನಾನಾ ಆಯಾಮದ ಉತ್ತರಗಳಿದ್ದಾವೆ. ಆದರೆ, ಅದೆಲ್ಲದಕ್ಕೂ ಉದಾಹರಣೆಯಾಗಿ ಬೆಟ್ಟು ಮಾಡಿ ತೋರಿಸಬಹುದಾದಂಥಾ ಒಂದಷ್ಟು ಚಿತ್ರಗಳೂ ಇದ್ದಾವೆ. ಕನ್ನಡದ ಮಟ್ಟಿಗೆ ಗುರು ಶಿಷ್ಯರು ಚಿತ್ರ ನಿಸ್ಸಂದೇಹವಾಗಿ ಆ ಸಾಲಿಗೆ ಸೇರಿಕೊಳ್ಳುತ್ತದೆ. ಈ ಮೂಲಕ ನಿರ್ದೇಶ ಜಡೇಶ್ ಹಂಪಿ ಒಂದಿಡೀ ಚಿತ್ರವನ್ನು, ಒಂದೆಳೆಯೂ ಆಚೀಚೆ ಕದಲದಂತೆ, ಯಾವುದಕ್ಕೂ ಕೊರತೆ ಕಾಡದಂತೆ ಕಟ್ಟಿಕೊಡುವ ರೀತಿಯ ಮೂಲಕ ಗಮನ ಸೆಳೆಯುತ್ತಾರೆ. ಇದರೊಂದಿಗೆ ಖೊ ಖೊ ಆಟವನ್ನೇ ಉಸಿರಾಗಿಸಿಕೊಂಡ ಗುರು ಶಿಷ್ಯರು ಪ್ರತೀ ಪ್ರೇಕ್ಷಕರೊಳಗೂ ಭಿನ್ನವಾದ ಫೀಲ್ ಮೂಡಿಸುತ್ತಾರೆ.
ಹಾಗೆ ನೋಡಿದರೆ, ಕನ್ನಡದಲ್ಲಿ ಕ್ರೀಡಾ ಕೇಂದ್ರಿತವಾದ ಕಥಾ ವಸ್ತುಗಳೇ ವಿರಳ. ಕನ್ನಡ ಮಾತ್ರವಲ್ಲ; ಭಾರತೀಯ ಚಿತ್ರರಂಗದಲ್ಲಿಯೂ ಆ ಸಂಖ್ತೆ ತೀರಾ ವಿರಳ. ಲಗಾನ್ನಂಥಾ ಬಿಗ್ ಹಿಟ್ ಮೂವಿಗಳು ಮಾತ್ರ ಕ್ರೀಡಾ ಕೇಂದ್ರಿತ ಕಥೆಯ ಕಸುವನ್ನು ಜಗತ್ತಿಗೆ ಪರಿಚಯಿಸಿದೆ. ಆ ಯಾದಿಯಲ್ಲಿ ನಿಲ್ಲಬಹುದಾದ ಎಲ್ಲ ಅರ್ಹತೆಗಳನ್ನೂ ಹೊಂದಿರುವ ಚಿತ್ರ ಗುರು ಶಿಷ್ಯರು. ಇಲ್ಲಿರೋದು ತೊಂಭತ್ತರ ದಶಕದ ಆಸುಪಾಸಿನಲ್ಲಿ, ಹಳ್ಳಿಗಾಡಿನಲ್ಲಿ ಘಟಿಸುವ ಕಥಾನಕ. ಖೊ ಖೋ ಆಟದ ಸುತ್ತಾ ಚಲಿಸುವ ಕಥೆ ಇನ್ನೂ ಒಂದಷ್ಟು ಅಂಶಗಳನ್ನು ಒಳಗೊಳ್ಳುತ್ತಾ ಸಾಗುತ್ತದೆ. ನೋಡ ನೋಡುತ್ತಲೇ ಊರುಳಿಸುವ ಮಹತ್ತರ ಜವಾಬ್ದಾರಿಯೂ ಗುರು ಶಿಷ್ಯರ ಹೆಗಲೇರಿಕೊಳ್ಳುತ್ತೆ. ಭರಪೂರವಾದ ನಗು, ಭರ್ಜರಿ ಮನೋರಂಜನೆ ಮತ್ತು ನೋಡುಗಳ ಕಣ್ಣಾಲಿಗಳಲ್ಲಿ ಕಣ್ಣೀರು ಜಿನುಗುವಂತೆ ಮಾಡುವಂಥಾ ಆರ್ದ್ರ ಸನ್ನಿವೇಶಗಳೊಂದಿಗೆ, ಗುರು ಶಿಷ್ಯರು ಅಪರೂಪದ ಛಾಯೆಯೊಂದನ್ನು ನೋಡುಗರ ಮನಸಲ್ಲಿ ಮೂಡಿಸಿ ಬಿಡುತ್ತಾರೆ. ಒಂದಿಡೀ ಸಿನಿಮಾದ ಸಾರ್ಥಕತೆ ಇರುವುದು ಆ ಗುಣದಲ್ಲಿಯೇ ಅಂದರೂ ಅತಿಶಯವೇನಲ್ಲ.
ಶರಣ್ ಇಲ್ಲಿ ಖೊ ಖೊ ಆಟದ ಕೋಚ್ ಆಗಿ ನಟಿಸಿದ್ದಾರೆ. ಸಾಮಾನ್ಯವಾಗಿ ಶರಣ್ ಚಿತ್ರವೆಂದ ಮೇಲೆ ನಿರೀಕ್ಷೆಯೆಂಬುದು ನಗುವಿನ ಸುತ್ತಲೇ ಗಿರಕಿ ಹೊಡೆಯುತ್ತೆ. ಅಷ್ಟಕ್ಕೂ ಕಾಮಿಡಿ ನಟನಾಗಿ, ಅದಕ್ಕೇ ಬ್ರ್ಯಾಂಡ್ ಆಗಿ, ಇತ್ತೀಚೆಗಷ್ಟೇ ನಾಯಕ ನಟನಾಗಿ ಮಿಂಚುತ್ತಿರುವವರು ಶರಣ್. ನಾಯಕನಾದ ಮೇಲೂ ನಗೆಯ ಚುಂಗು ಹಿಡಿದು ಗೆಲ್ಲುತ್ತಾ ಬಂದಿದ್ದ ಅವರಿಲ್ಲಿ, ಭಿನ್ನ ಬಗೆಯ ಶೇಡಿನೊಂದಿಗೆ ಇಷ್ಟವಾಗುತ್ತಾರೆ; ಅಚ್ಚರಿ ಮೂಡಿಸುತ್ತಾರೆ. ನಿಖರವಾಗಿ ಹೇಳಬೇಕೆಂದರೆ, ಈ ಚಿತ್ರದಲ್ಲಿ ಇದುವರೆಗೂ ಕಾಣಿಸದ ಶರಣ್ ಕಾಣುತ್ತಾರೆ. ಇದು ನಿಸ್ಸಂಶಯವಾಗಿ ಅವರ ವೈತ್ತಿ ಬದುಕಿನಲ್ಲಿ ಮಹತ್ತರ ಚಿತ್ರವಾಗಿಯೂ ದಾಖಲಾಗುತ್ತದೆ. ಪ್ರತೀ ಸೀನುಗಳಲ್ಲಿಯೂ ಅದಕ್ಕಾಗಿ ಮಾಡಿಕೊಂಡಿರುವ ಅದ್ಭುತ ತಯಾರಿ ಮನಮುಟ್ಟುತ್ತೆ. ಅದುವೇ ಗುರು ಶಿಷ್ಯರ ಯಾನವನ್ನು ಸಾರ್ಥಕಗೊಳಿಸುತ್ತೆ.
ಊರ ಗೌಡನಾಗಿ ನಟಿಸಿರುವ ಅಪೂರ್ವ ಕಾಸರವಳ್ಳಿ, ನಾಯಕಿ ನಿಶ್ವಿಕಾ ನಾಯ್ಡು ಮತ್ತು ಖೊ ಖೊ ಆಟಗಾರರಾಗಿ ಕಾಣಿಸಿಕೊಂಡಿರುವ ಹುಡುಗರೆಲ್ಲರೂ ಸಾರಾಸಗಟಾಗಿ ಇಷ್ಟವಾಗಿ ಬಿಡುತ್ತಾರೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತವಂತೂ ಇಡೀ ಚಿತ್ರದ ಪರಿಣಾಮಕಾರಿ ಗುಣವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಒಂದಷ್ಟು ಲಾಜಿಕ್ಕುಗಳನ್ನು ಗೌಣವಾಗಿಸಿಕೊಂಡು ನೋಡಿದರೆ, ಖಂಡಿತವಾಗಿಯೂ ಇದೊಂದು ಮಹತ್ತರ ಚಿತ್ರವಾಗಿಯೇ ಕಾಣಿಸುತ್ತೆ. ಇದೆಲ್ಲವನ್ನೂ ಸಾಧ್ಯವಾಗಿಸಿರೋದು ನಿರ್ದೇಶಕ ಜಡೇಶ್ ಹಂಪಿ ಅವರ ಕೈಚಳಕ. ಒಂಚೂರು ಎಚ್ಚರ ತಪ್ಪಿದ್ದರೂ ಕೂಡಾ ಕಥೆಯೆಂಬುದು ಸಿಕ್ಕು ಸಿಕ್ಕಾಗಿ ಬಿಡುವ ಅಪಾಯವಿತ್ತು. ಮತ್ತೊಂದು ಹಂತದಲ್ಲಿ ಮೈಮರೆತರೆ ಇದೊಂದು ಖೊ ಖೊ ಆಟದ ಕುರಿತ ಡಾಕ್ಯುಮೆಂಟರಿಯಾಗಿ ದಾಖಲಾಗುವ ಸಾಧ್ಯತೆಗಳೂ ಇದ್ದವು. ಆದರೆ, ಅದೆಲ್ಲವನ್ನೂ ಮೀರಿಕೊಂಡು, ಎಲ್ಲವನ್ನೂ ಸಹ್ಯವಾಗಿಸಿದ ಕೀರ್ತಿ ಜಡೇಶ್ಗೆ ಸಲ್ಲುತ್ತದೆ. ಒಟ್ಟಾರೆಯಾಗಿ, ಇದು ಎಲ್ಲ ಚೌಕಟ್ಟುಗಳನ್ನು ಮೀರಿಕೊಂಡು, ಎಲ್ಲರಿಗೂ ಇಷ್ಟವಾಗುವಂಥಾ, ನೀವೊಮ್ಮೆ ನೋಡಲೇಬೇಕಾದಂಥಾ ಚಿತ್ರ!