ದೇಶದ ತುಂಬೆಲ್ಲ ಇದೀಗ ಮುರುಘಾ ಮಠದ ಶಿವಮೂರ್ತಿ ಶರಣನ ಕಾಮಪುರಾಣದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಮೂಲಕ ಮಠ ಮಾನ್ಯಗಳು, ಶಾಲಾ ಹಾಸ್ಟೆಲ್ಲುಗಳು ಸೇರಿದಂತೆ ಯಾವುದೂ ಸೇಫ್ ಅಲ್ಲವೆಂಬಂಥಾ ವಾತಾವರಣ ಹಬ್ಬಿಕೊಂಡಿದೆ. ಇದರ ಬೆನ್ನಲ್ಲಿಯೇ ದೇಶದ ನಾನಾ ಹಾಸ್ಟೆಲ್ಲುಗಳಲ್ಲಿ ನಡೆಯುತ್ತಿರುವಂಥಾ ಒಂದಷ್ಟು ಅಮಾನುಷ ಘಟನಾವಳಿಗಳೂ ಕೂಡಾ ಆಗಾಗ ಜಾಹೀರಾಗುತ್ತಿವೆ. ಸಾಮಾನಮ್ಯವಾಗಿ ಎಲ್ಲೆಡೆ ತುಂಬಿಕೊಂಡಿರುವ ಕಾಮಪಿಪಾಸುಗಳಿಂದ ಹೆಣ್ಣುಮಕ್ಕಳು ಮಾತ್ರವೇ ನಲುಗುತ್ತಿದ್ದಾರೆಂಬ ಭಾವನೆಯಿದೆ. ಆದರೆ ಈ ಕಾಮುಕರ ಜಗತ್ತಿನಲ್ಲಿ ಗಂಡುಮಕ್ಕಳೂ ಸೇಫ್ ಅಲ್ಲ!
ಈ ಸಮಾಜದ ಕೆಲ ವಿಕೃತಿಗಳ ನಡುವೆ ಗಂಡುಮಕ್ಕಳೂ ಸೇಫ್ ಅಲ್ಲ ಎಂಬಂಥಾ ವಿಚಾರ ಈಗಾಗಲೇ ನಾನಾ ರೀತಿಯಲ್ಲಿ ಬಯಲಾಗಿವೆ. ಇದೀಗ ಹೈದ್ರಾಬಾದ್ನ ಹಾಸ್ಟೆಲ್ ಒಂದರಲ್ಲಿ ನಡೆದಿರೋ ಘಟನೆಯೊಂದು ಆ ವಿಚಾರವನ್ನು ಮತ್ತಷ್ಟು ಸ್ಪಷ್ಟವಾಗಿಸಿದೆ. ಇಂಥಾದ್ದೊಂದು ವಿಕೃತ ಕೃತ್ಯ ನಡೆದಿರೋದು ಹೈದ್ರಾಬಾದಿನ ಹಾಸ್ಟೆಲ್ ಒಂದರಲ್ಲಿ. ಏಳು ಮಂದಿ ಬಾಲಕರಿಗೆ ಕೊಡಬಾರದ ಕಾಟ ಕೊಟ್ಟಿದ್ದ ಆ ಹಾಸ್ಟೆಲ್ ವಾರ್ಡನ್ನನ್ನೀಗ ಪೊಲೀಸರು ಬಂಧಿಸಿದ್ದಾರೆ. ಪೋಷಕರ ಸ್ಥಾನದಲ್ಲಿ ನಿಂತು ಆ ಮಕ್ಕಳನ್ನು ಪೊರೆಯಬೇಕಿದ್ದ ಆ ವಾರ್ಡನ್ ಓರ್ವ ಸಲಿಂಗಕಾಮಿ. ಆತ ಪೊಲೀಸರ ಮುಂದೆ ಬಿಚ್ಚಿಟ್ಟ ವಿಕೃತಿಗಳು ಎಲ್ಲರನ್ನೂ ಬೆಚ್ಚಿಬೀಳಿಸುವಂತಿದೆ.
ಹಾಸ್ಟೆಲ್ಲಿ ನ ದೇಖಾರೇಖಿ ನೋಡಿಕೊಳ್ಳುವ ನೆಪದಲ್ಲಿ ಈ ವಾರ್ಡನ್ ತೆವಲು ಪ್ರದರ್ಶನ ಮಾಡುತ್ತಿದ್ದ. ಎಳೇ ಬಾಲಕರಿಗೆ ಮೊಬೈಲಿನಲ್ಲಿ ಅಶ್ಲೀಲ ವೀಡಿಯೋಗಳನ್ನು ತೋರಿಸುತ್ತಾ ವಿಕೃತ ಬುದ್ಧಿ ಪ್ರದರ್ಶನ ಮಾಡುತ್ತಿದ್ದ. ಬಾಲಕರು ಕೊಸರಾಡಿದರೂ ಬಿಡದೆ, ದೇಹವನ್ನು ಸ್ಪರ್ಶಿಸುತ್ತಾ ಹಿಂಸೆ ನೀಡುತ್ತಿದ್ದ. ಕೆಲವೊಮ್ಮೆ ಮಧ್ಯ ರಾತ್ರಿ ಗಾಢ ನಿದ್ದೆಯಲ್ಲಿರುವಾಗ ಹಾಸ್ಟೆಲ್ ರೂಮಿಗೆ ನುಗ್ಗಿ ಬಾಲಕರ ಮಧ್ಯೆಯೇ ಮಲಗಿ ಬಿಡುತ್ತಿದ್ದ. ಹೀಗೆ ನಾನಾ ರೀತಿಯಲ್ಲಿ ವಿಕೃತಿ ಮೆರೆಯುತ್ತಿದ್ದ ಈತನ ವಿರುದ್ಧ ದೂರು ಹೇಳಲು ಬಾಲಕರು ಭಯ ಪಟ್ಟುಕೊಂಡಿದ್ದರು. ಅದಕ್ಕೆ ಮುಜುಗರವೂ ಸಾಥ್ ಕೊಟ್ಟಿರಬಹುದು. ಆದರೆ, ಈತನ ಕಾಟ ಅತಿಯಾಗುತ್ತಲೇ ಏಳು ಮಂದಿ ವಿದ್ಯಾರ್ಥಿಗಳು ಧೈರ್ಯವಾಗಿ ಪೊಷಕರ ಬಳಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಿದಾಗ ಎಲ್ಲ ಪ್ರವರಗಳೂ ಜಾಹೀರಾಗಿವೆ.