ಶೋಧ ನ್ಯೂಸ್ ಡೆಸ್ಕ್: ಅಭಿವೃದ್ಧಿ ಶೀಲ ದೇಶವಾಗಿ ಗುರುತಿಸಿಕೊಂಡಿರುವ ಭಾರತದ ಮೈತುಂಬಾ ನಾನಾ ಸಮಸ್ಯೆಗಳ ಗಾಯಗಳಿದ್ದಾವೆ. ಸದ್ಯ ನಾನಾ ಭ್ರಮೆ ಬಿತ್ತಿ ಭಾರತ ಬದಲಾಗಿದೆ ಅಂತೆಲ್ಲ ಪೋಸು ಕೊಟ್ಟರೂ ಕೂಡಾ ಈವತ್ತಿಗೂ ಭಾರತ ಬಡ ದೇಶವೇ. ತೀರಾ ಸವಲತ್ತು, ಸೌಕರ್ಯಗಳು ಬೇಡ; ಕನಿಷ್ಠ ಮೂಲಭೂತ ಸೌಕರ್ಯಗಳಿಗೂ ತತ್ವಾರ ಬಂದು, ಅದೆಷ್ಟೋ ಜನರು ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ದುರಂತವೆಂದರೆ ಸ್ವತಂತ್ರ ಭಾರತವಾಗಿ ಇಷ್ಟು ವರ್ಷ ಕಳೆದರೂ ಕೂಡಾ ಅಪಘಾತವಾದಾಗ ಸೂಕ್ತವಾದೊಂದು ಆಂಬುಲೆನ್ಸ್ ಸೇವೆ ಸಿಗೋ ವ್ಯವಸ್ಥೆ ಇನ್ನೂ ಇಂಡಿಯಾದ ಮೂಲೆ ಮೂಲೆಗಳಿಲ್ಲ.
ಇಂಥಾದ್ದೊಂದು ಅವ್ಯವಸ್ಥೆಗೆ ಕನ್ನಡಿ ಹಿಡಿಯುವಂಥಾ ವೀಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಪಘಾತದಲ್ಲಿ ತೀವ್ರಥರವಾಗಿ ಗಾಯಗೊಂಡಿರುವ ರೋಗಿಯೋರ್ವನನ್ನು ಜಿಸಿಬಿಬಿಯಲ್ಲಿ ಕೊಂಡೊಯ್ಯುತ್ತಿರುವ ಆ ವೀಡಿಯೋವನ್ನು ವ್ಯಕ್ತಿಯೋರ್ವರು ಹಂಚಿಕೊಂಡಿದ್ದಾರೆ. ಅದು ಮಧ್ಯಪ್ರದೇಶದ ಕಟ್ನಿ ಎಂಬಲ್ಲಿಯದ್ದೆಂದು ಹೇಳಲಾಗುತ್ತಿದೆ. ಅದರ ಅಸಲೀಯತ್ತೇನು? ಅದರ ಹಿಂದಿರೋ ವಸ್ತುಸ್ಥಿತಿಯೇನೆಂಬ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.
ಸದರಿ ವೀಡಿಯೋದ ಹಿಂದೆ ಅದೇನೇನಿದೆಯೋ ಗೊತ್ತಿಲ್ಲ. ಆದರೆ ಅಂಥಾ ಪರಿಸ್ಥಿತಿ ಈವತ್ತಿಗೂ ಭಾರತದ ನಾನಾ ಕಡೆಗಳಲ್ಲಿ ಇರುವುದು ಸುಳ್ಳೇನಲ್ಲ. ಅದೆಷ್ಟೋ ಕಡೆಗಳಲ್ಲಿ ಭೀಕರ ಅಪಘಾತಗಳಾದಾಗ ತಕ್ಷಣವೇ ಚಿಕಿತ್ಸೆ ಸಿಕ್ಕರೆ ಬದುಕುಳಿಯುವ ಸಾಧ್ಯತೆಗಳಿರುತ್ತವೆ. ಆದರೆ ಪ್ರಾಣ ಹೋದರೂ ಆಂಬುಲೆನ್ಸ್ ಮಾತ್ರ ಬಂದಿರುವುದಿಲ್ಲ. ಸರಿಯಾದ ರಸ್ತೆ ವ್ಯವಸ್ಥೆ, ವಾಹನ, ಆಂಬುಲೆನ್ಸ್ ಇಲ್ಲದೆಯೇ ಅನೇಕರು ಅನ್ಯಾಯವಾಗಿ ಜೀವ ಬಿಡುತ್ತಿದ್ದಾರೆ. ಇದಕ್ಕೆಲ್ಲ ಕೊನೆ ಎಂದು ಎಂಬ ಪ್ರಜ್ಞಾವಂತರ ಆಕ್ರೋಶಕ್ಕೆ ಉತ್ತರಿಸೋರ್ಯಾರು?