ಶೋಧ ನ್ಯೂಸ್ ಡೆಸ್ಕ್: ಪದೇ ಪದೆ ಎದುರಾಗುವ ಪ್ರಾಕೃತಿಕ ವಿಪತ್ತುಗಳ ನಡುವೆಯೂ, ಅಡಿಗಡಿಗೆ ಫೀನಿಕ್ಸಿನಂತೆ ಎದ್ದು ನಿಲ್ಲುತ್ತಾ ಬಂದಿರುವ ವಿಶಿಷ್ಟ ದೇಶ ಜಪಾನ್. ಇದುವರೆಗೂ ಆ ದೇಶದ ಮಂದಿ ಅದೆಷ್ಟು ಪ್ರಾಕೃತಿಕ ಅವಘಡಗಳಿಗೀಡಾದರು, ಅದೆಷ್ಟು ತಲ್ಲಣಿಸಿದರೆಂದರೆ, ಜಗತ್ತಿನ ಬೇರ್ಯಾವುದೇ ದೇಶವಾದರೂ ಸರ್ವನಾಶವಾಗಿ ಬಿಡುತ್ತಿತ್ತೇನೋ. ಆದರೆ, ಇಂಥಾ ಸವಾಲುಗಳೆದುರಾದಾಗ ಅದಕ್ಕೆ ಎದೆಯೊಡ್ಡಿ ಜೈಸಿಕೊಳ್ಳುವ ಕಲೆಯನ್ನು ಪ್ರಕೃತಿಯೇ ಆ ಜನರಿಗೆ ಕೊಟ್ಟಂತಿದೆ. ಹೀಗೆ ಪ್ರಾಕೃತಿಕ ವಿಪತ್ತುಗಳಿಂದ ನಲುಗುತ್ತಿರುವ ಜಪಾನಿಗರಿಗೀಗ ಮತ್ತೊಂದು ಕಂಟಕ ಎದುರಾಗಿದೆ.
ಅದು ರಣಭೀಕರ ಚಂಡಮಾರುತದ ರೂಪದಲ್ಲಿ ಜಪಾನಿಗೆ ಲಗ್ಗೆಯಿಟ್ಟಿದೆ. ಗಂಟೆಗೆ ಇನ್ನೂರೈವತ್ತು ಕಿಲೋಮೀಟರ್ಗೂ ಅಧಿಕ ವೇಗದಲ್ಲಿ ಅಪ್ಪಳಿಸುತ್ತಿರುವ ಈ ಭೀಕರ ಚಂಡಮಾರುತ, ಜಪಾನಿನ ಕರಾವಳಿ ಸೇರಿದಂತೆ ಕೆಲ ಪ್ರದೇಶಗಳನ್ನು ಅಕ್ಷರಶಃ ಸ್ಮಶಾನವನ್ನಾಗಿಸಿದೆ. ಕಡಲ ತೀರದ ಮಂದಿತಯ ಬದುಕಂತೂ ಬೀದಿಗೆ ಬಂದುಬಿಟ್ಟಿದೆ. ಅದೆಷ್ಟೋ ಜನರು ಜೀವ ಕಳೆದುಕೊಂಡಿದ್ದಾರೆ. ಒಂದಷ್ಟು ಪ್ರದೇಶಗಳಿಗೆ ಅಲ್ಲಿನ ಆಡಳಿತ ರೆಡ್ ಅಲರ್ಟ್ ಘೋಶಿಸಿದೆ. ಆದರೆ ಅದೆಂಥಾದ್ದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರೂ ಕೂಡಾ ರಣ ವೇಗದ ಗಾಳಿ ಎಲ್ಲವನ್ನೂ ಛಿದ್ರವಾಗಿಸುತ್ತಿದೆ.
ವರ್ಷಾಂತರಗಳ ಹಿಂದೆ ಸುನಾಮಿಯಿಂದ ಜಪಾನ್ ತತ್ತರಿಸಿತ್ತು. ಆ ನಂತರದಲ್ಲಿ ಈಗೆದ್ದಿರುವ ಚಂಡಮಾರುತ ಮಾತ್ರ ಸುನಾಮಿಯ ಅನಾಹುತಗಳನ್ನೇ ಮೀರಿಸುವಂತೆ ರಣಕೇಕೆ ಹಾಕುತ್ತಿದೆ. ಇಲ್ಲಿನ ಕರಾವಳಿ ತೀರದ ಕೆಲ ಪ್ರದೇಶಗಳಂತೂ ಈ ಹಿಂದಿನ ಚಹರೆಗಳೇ ಕಾಣದಷ್ಟು ಹಾನಿಗೀಡಾಗಿವೆ. ಒಟ್ಟಾರೆಯಾಗಿ, ಈ ಚಂಡಮಾರುತ ಈ ದಶಕದ ಅತಿದೊಡ್ಡ ಪ್ರಾಕೃತಿಕ ವಿಪತ್ತಾಗಿ ದಾಖಲಾಗಿಬಿಟ್ಟಿದೆ. ಇದರಿಂದ ಆ ಭಾಗದ ಜನ ಚೇತರಿಸಿಕೊಳ್ಳುವುದಕ್ಕೆ ವರ್ಷಗಟ್ಟಲೆ ಬೇಕಾದೀತೇನೋ. ಈ ವರುಷ ನಾನಾ ದೇಶಗಳಲ್ಲಿ ಮಳೆಯ ಪ್ರಮಾಣ ಅಧಿಕವಾಗಿದೆ. ಅದಕ್ಕೆ ತಕ್ಕುದಾಗಿ ಒಂದಷ್ಟು ಅನಾಹುತಗಳೂ ನಡೆದಿವೆ. ಇಂಥಾದ್ದೇ ಹಾನಿ ಮುಂಬರುವ ದಿನಗಳಲ್ಲಿ ಜಗತ್ತಿನ ಇತರೇ ದೇಶಗಳಿಗೂ ಕಾದಿದೆಯೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.