ರೇವ್ ಪಾರ್ಟಿಗಳ ಸರದಾರ ಶ್ರೀನಿ ಪಕ್ಕಾ ಪಿಂಪ್!
ಕೊರೋನಾ ಕಾಲಘಟ್ಟದಲ್ಲಿ ಸ್ಯಾಂಡಲ್ವುಡ್ಡಿನ್ನ ಡ್ರಗ್ಸ್ ವ್ಯಸನದ ಕುರಿತಾದ ಸುದ್ದಿಗಳು ಬಹುದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದವು. ಸಿಸಿಬಿ ಪೊಲೀಸರು ಕನ್ನಡ ಚಿತ್ರರಂಗವನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಿ, ರಾಗಿಣಿ ಮತ್ತು ಸಂಜಾನಾರನ್ನು ಬಂಧಿಸಿದ್ದರು. ಹಾಗೆ ತಿಂಗಳುಗಟ್ಟಲೆ ಜೈಲಿನಲ್ಲಿ ಬಂಧಿಯಾಗಿದ್ದಾಕೆ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ. ಜೈಲೊಳಗೇ ನಾನಾ ರೀತಿಯ ಡ್ರಾಮಾ ನಡೆಸಿ ಕಡೆಗೂ ಬೇಲ್ ಪಡೆದು ಹೊರ ಬಂದಿರುವ ರಾಗಿಣಿಗೆ, ಈ ಕ್ಷಣಕ್ಕೂ ಕಂಟಕದ ಕತ್ತಿಯ ಮೊನೆ ನೆತ್ತಿಯ ಮೇಲೆ ತೂಗುತ್ತಲೇ ಇದೆ. ಅತ್ತ ಸಿಸಿಬಿ ಪೊಲೀಸರ ಗಮನ ಬೇರೆಡೆಯತ್ತ ಹೊರಳಿಕೊಂಡಿರುವಂತಿರೋದರಿಂದ, ಹೇಗೋ ಬಚಾವಾದೆ ಅಂತಿದ್ದ ರಾಗಿಣಿಗೀಗ ಅನಿರೀಕ್ಷಿತ ಶಾಕ್ ಒಂದು ಎದುರಾಗಿದೆ; ಖುದ್ದು ಸಿಸಿಬಿ ಪೊಲೀಸರೇ ತನ್ನ ಖಾಸಾ ಗೆಣೆಕಾರ, ಕುಖ್ಯಾತ ಡ್ರಗ್ ಪೆಡ್ಲರ್ ಶಿನೀವಾಸ್ ಸುಬ್ರಮಣ್ಯ ಅಲಿಯಾಸ್ ಶ್ರೀನಿಯನ್ನು ಬಂಧಿಸುವ ಮೂಲಕ!
ವೀರಮದಕರಿ ಚಿತ್ರದ ಮೂಲಕ ಸುದೀಪ್ಗೆ ನಾಯಕಿಯಾಗಿ ಕನ್ನ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದವಳು ರಾಗಿಣಿ. ಆ ನಂತರದಲ್ಲಿ ಕನ್ನಡದ ನೆಲದಲ್ಲಿಯೇ ಭರಪೂರ ಗೆಲುವಿನ ಪರ್ವ ಆಯಾಚಿತವಾಗಿ ಆಕೆಯ ಮುಂದೆ ತೆರೆದುಕೊಂಡಿತ್ತು. ಹೀಗೆ ದಕ್ಕಿದ ಗೆಲುವನ್ನು ಸಂಭಾಳಿಸೋದಿದೆಯಲ್ಲಾ? ಅದು ಎಳಸು ಮನಸುಗಳಿಗೆ ಒಲಿಯುವ ಕಲೆಯಲ್ಲ. ಹಾಗೆ ಸಿಕ್ಕ ಗೆಲುವನ್ನು ಪಳಗಿಸಿಕೊಳ್ಳೋ ಕಲೆ ಗೊತ್ತಿಲ್ಲದೇ ಹೋದರೆ ಬದುಕು ಅಕ್ಷರಶಃ ಹಳಿ ತಪ್ಪುತ್ತೆ. ಇಂಥಾ ದುರಂತಗಾಥೆಗಳಿಗೆ ಕನ್ನಡದಲ್ಲಿಯೇ ಅನೇಕಾನೇಕ ಉದಾಹರಣೆಗಳಿದ್ದಾವೆ. ಅದಕ್ಕೆ ಇತ್ತೀಚಿನ ಸೇರ್ಪಡೆಯಂತಿರುವಾಕೆ ಲಂಬೂ ರಾಗಿಣಿ. ಯಾವಾಗ ನಂಬರ್ ಒನ್ ನಾಯಕಿ ಎಂಬಂತೆ ಮೆರೆದಾಡಲಾರಂಭಿಸಿದ್ದಳೋ, ಆ ಕ್ಷಣದಿಂದಲೇ ನಾನಾ ಖಯಾಲಿಗಳು ಆರಂಭವಾಗಿ ಡ್ರಗ್ಸ್ ಖಯಾಲಿಗೆ ಬಿದ್ದಿರಲೂ ಬಹುದು. ಕಡೆ ಕಡೆಗೆ ರಾಗಿಣಿ ಆ ಚಟದ ಉಚ್ಛ್ರಾಯ ಸ್ಥಿತಿ ತಲುಪಿಕೊಂಡಿದ್ದಳು ಅನ್ನುವವರೂ ಇದ್ದಾರೆ. ಸಿಸಿಬಿ ಪೊಲೀಸರು ಈ ಹಿಂದೆ ತನಿಖೆಯ ಮೂಲಕ ಕಲೆಹಾಕಿರುವ ಮಾಹಿತಿಗಳೆಲ್ಲವೂ ಆ ಮಾತಿಗೆ ಪಕ್ಕಾ ಪೂರಕವಾಗಿವೆ. ಈಗ ಅದೇ ಸಿಸಿಬಿ ಪೊಲೀಸರ ಕೈಗೆ ತಗುಲಿಕೊಂಡಿರುವ ಶ್ರೀನಿಯ ಪೂರ್ವಾಪರಗಳು ಮತ್ತು ಆ ಪ್ರಳಯಾಂತನೊಂದಿಗೆ ರಾಗಿಣಿಗಿರುವ ನಂಟಿನ ಪ್ರವರಗಳು ಎಲ್ಲವನ್ನೂ ಖುಲ್ಲಂಖುಲ್ಲ ಜಾಹೀರು ಮಾಡುವಂತಿದ್ದಾವೆ.
ಹೊರಜಗತ್ತಿಗೆ ಎಲ್ಲವೂ ತಣ್ಣಗಾಗಿದೆ ಎಂಬ ವಾತಾವರಣ ಹಬ್ಬಿಸಿ, ಒಳಗಿಂದೊಳಗೇ ಕೆಂಡದಂತೆ ಕಾರ್ಯಾಚರಣೆ ನಡೆಸೋದು ಸಿಸಿಬಿ ಪೊಲೀಸರ್ ಸ್ಪೆಷಾಲಿಟಿ. ಒಂದು ಹಂತದಲ್ಲಿ ಚಾಲಾಕಿ ಶ್ರೀನಿವಾಸ್ ಸುಬ್ರಮಣ್ಯ ಅಲಿಯಾಸ್ ಶ್ರೀನಿ ಕೂಡಾ ಪೊಲೀಸರ ಈ ನಡೆಯಿಂದ ಯಾಮಾರಿದಂತಿದೆ. ಅಷ್ಟಕ್ಕೂ ರಾಗಿಣಿ ಕೇಸಿನಲ್ಲಿ ಆರೋಪಿ ನಂಬರ್ ಹದಿನೆಂಟು ಅಂತ ಇದೇ ಶ್ರೀನಿ ಫಿಕ್ಸಾಗಿದ್ದ. ಅಲ್ಲೆಲ್ಲೋ ನಶೆಯೇರಿಸಿಕೊಂಡು ಅಡಗಿ ಕೂತಿದ್ದವನನ್ನು ಪೊಲೀಸರು ಹೆಡೆಮುರಿ ಕಟ್ಟಿ ತಂದು ಜೈಲಿಗಟ್ಟಿದ್ದರು. ಶ್ರೀನಿ ಎಂಥಾ ಚಾಣಾಕ್ಷನೆಂದರೆ, ಆತನಿಗೆ ಹಳ್ಳಿಯಿಂದ ದಿಲ್ಲಿಯವರೆಗೂ ಕಾಂಟ್ಯಾಕ್ಟುಗಳಿವೆ. ರಾಜಕಾರಣಿಒಗಳ ಕೊಬ್ಬಿದ ಮಕ್ಕಳಿಗೆ ಗಾಂಜಾ ಮತ್ತು ಹುಡುಗೀರನ್ನು ಸಪ್ಲೈ ಮಾಡುತ್ತಲೇ ದೊಡ್ಡ ಮಟ್ಟದಲ್ಲಿ ಪ್ರಭಾವ ಹೊಂದಿದ್ದ. ಅದರ ಬಲದಿಂದಲೇ ಬಹುಬೇಗನೆ ಬೇಲ್ ಪಡೆದು ಜೈಲಿಂದ ಹೊರ ಬಂದು ಬಿಟ್ಟಿದ್ದ.
ಆದರೆ, ಹಾಗೆ ಹೊರ ಬಂದು ಮತ್ತದೇ ದಂಧೆಗಿಳಿದಿದ್ದ ಶ್ರೀನಿಗೆ ಮತ್ತೆ ತಾನು ಬಂಧಿತನಾಗೋ ಅಪಾಯ ಸದಾ ಕಾಲವೂ ಕಾಡುತ್ತಿತ್ತು. ಆದ್ದರಿಂದಲೇ ಡ್ರಗ್ಸ್ ಪಾರ್ಟಿಯನ್ನು ಹುಷಾರಾಗಿ ಆಯೋಜಿಸುತ್ತಾ, ಸಾರ್ವಜನಿಕವಾಗಿ ಕಾಣಿಸಿಕೊಳ್ಳದಂತೆ ಬದುಕುತ್ತಿದ್ದ. ಶ್ರೀನಿ ಮತ್ತೆ ರೇವ್ ಪಾರ್ಟಿಗಳನ್ನು ಆಯೋಜಿಸುತ್ತಾ, ಡ್ರಗ್ಸ್ ದಂಧೆ, ಪಿಂಪ್ಗಿರಿ ನಡೆಸುತ್ತಿದ್ದಾನೆಂಬ ಬಗ್ಗೆ ಬಹಳಷ್ಟು ದಿನಗಳ ಹಿಂದಿನಿಂದಲೇ ಸಿಸಿಬಿ ಪೊಲೀಸರಿಗೆ ಮಾಹಿತಿಯಿತ್ತು. ಅದರನ್ವಯ ತನಿಖೆಗಿಳಿದಿದ್ದ ಪೊಲೀಸರಿಗೆ, ಇತ್ತೀಚೆಗೊಂದು ದಿನ ಬೆಂಗಳೂರಿನ ವಿಲ್ಲಾ ಒಂದರಲ್ಲಿ ಶ್ರೀನಿ ರೇವ್ ಪಾರ್ಟಿ ಆಯೋಜಿಸಿರುವ ಖಚಿತ ಮಾಹಿತಿ ಸಿಕ್ಕಿ ಹೋಗಿತ್ತು. ಹಾಗೆ ಸರಿರಾತ್ರಿ ದಾಳಿ ನಡೆಸಿಒದಾಗ ಆ ವಿಲ್ಲಾದೊಳಗೆ ಡ್ರಗ್ಸ್ ನಶೆಯೇರಿಸಿಕೊಂಡಿದ್ದವರೆಲ್ಲ ಸ್ವೇಚ್ಛೆಯಿಂದ ಕೆನ ಎದಾಡುತ್ತಿದ್ದರು. ಅದು ನಡುವಲ್ಲಿ ಖದೀಮ ಶ್ರೀನಿಯೂ ಇದ್ದ. ಅಲ್ಲಿಯೇ ಮಿಸುಕಾಡಲೂ ಸಾಧ್ಯವಾಗದಂತೆ ಶ್ರೀನಿಯನ್ನು ಅರೆಸ್ಟ್ ಮಾಡಿದ್ದ ಪೊಲೀಸರು ಜೈಲಿಗಟ್ಟಿದ್ದಾರೆ.
ಅಲ್ಲಿಗೆ ರಾಗಿಣಿಗೆ ಮತ್ತೊಂದು ಸುತ್ತಿನ ಕಂಟಕದ ಪರ್ವ ಆರಂಭವಾದಂತಿದೆ. ಹಾಗಾದರೆ, ಈ ಶ್ರೀನಿವಾಸ್ ಸುಬ್ರಮಣ್ಯ ಅಲಿಯಾಸ್ ಶ್ರೀನಿ ಯಾರು? ಆತನ ನಟೀರಿಟಿ ಎಂಥಾದ್ದು? ಅವನಿಗೂ ರಾಗಿಣಿಗೂ ಇರುವ ನಂಟಿನ ಕಥೆಯೇನೆಂಬ ಬಗ್ಗೆ ಕೆದಕಲು ನಿಂತರೆ ಒಂದಷ್ಟು ಭಯಾನಕ ಅಂಶಗಳು ಜಾಹೀರಾಗುತ್ತವೆ. ಶ್ರೀನಿ ಬೇರ್ಯಾವುದೋ ರಾಜ್ಯದಿಂದ ಬಂದು ಡ್ರಗ್ಸ್ ಸಾಮ್ರಾಜ್ಯ ಕಟ್ಟಿದವನಲ್ಲ. ಆತನದ್ದು ನಮ್ಮದೇ ಹಾಸನದ ಹಳ್ಳಿಯೊಂದರ ಮೂಲ. ಸಾಮಾನ್ಯರಲ್ಲಿ ಸಾಮಾನ್ಯರಂತಿದ್ದವನು, ದಶಕಗಳ ಹಿಂದೆಯೇ ಬೆಂಗಳೂರಿಗೆ ಬಂದು ಅಕ್ಷರಶಃ ತಲೆಹಿಡುಕ ಕೆಲಸ ಶುರುವಿಟ್ಟುಕೊಂಡಿದ್ದ. ಒಂದಷ್ಟು ರಾಜಕಾರಣಿಗಳನ್ನು, ಸೆಲೆಬ್ರಿಟಿಗಳನ್ನು ಪರಿಚಯ ಮಾಡಿಕೊಂಡು, ಅವರಿಗೆ ಹುಡುಗೀರನ್ನು ಸರಬರಾಜು ಮಾಡುತ್ತಲೇ ಈತ ಒಂದಷ್ಟು ಹಡಬೇ ಕಾಸು ಸಂಪಾದಿಸಿದ್ದ. ಹಾಗೆ ಕಾಸು ಪೇರಿಸಿಕೊಂಡ ಶ್ರೀನಿ, ನೇರವಾಗಿ ಹೊರಳಿಕೊಂಡಿದ್ದು ಡ್ರಗ್ಸ್ ದಂಧೆಯತ್ತ!
ಸಾಮಾನ್ಯವಾಗಿ, ಸಿನಿಮಾ ನಟ ನಟಿಯರಿಗೆ, ರಾಜಕಾರಣಿಗಳ ಮಕ್ಕಳಿಗೆ ಪಾರ್ಟಿ ಮಾಡಿ, ಅಹೋರಾತ್ರಿ ಡ್ರಗ್ಸ್ ನಶೆಯಲ್ಲಿ ಮಿಂದೇಳುವ ಖಯಾಲಿ ಇರುತ್ತೆ. ಆದರೆ ಒಂದು ರೇವ್ ಪಾರ್ಟಿಯನ್ನು ಸಮಗ್ರವಾಗಿ ಆಯೋಜಿಸುವುದೇ ಅವರ ಪಾಲಿಗೆ ರಿಸ್ಕಿನ ಕೆಲಸ. ಒಂದು ರೇವ್ ಪಾರ್ಟಿ ಎಂದರೆ ಅದರಲ್ಲಿ ವೆರೈಟಿ ವೆರೈಟಿಯ ಡ್ರಗ್ಸ್ಗಳ ಹಾಜರಿ ಇರುತ್ತೆ. ಕಾಮದ ಉತ್ತುಂಗಕ್ಕೇರಸಿ, ಅಹೋರಾತ್ರಿ ಪ್ರಾಣಿಗಳಿಗಿಂತ ಕಡೆಯಾಗಿ ಮಂಚ ಅದುರಿಸುವಂಥಾ ಒಂದಷ್ಟು ಡ್ರಗ್ಸುಗಳಿದ್ದಾವೆ. ಅದೆಲ್ಲವನ್ನೂ ಸರಬರಾಜು ಮಾಡಿ, ಮದವೇರಿಸಿಕೊಂಡವರಿಗೆ ಮಂಚ ಮತ್ತು ಸಂಗಾತಿಗಳ ವ್ಯವಸ್ಥೆಯನ್ನೂ ಶ್ರೀನಿಯೇ ಮಾಡುತ್ತಾನೆ. ಈತ ಕೇವಲ ಡ್ರಗ್ಸ್ ದಂಧೆಕೋರ ಮಾತ್ರವಲ್ಲ; ಪಿಂಪ್ ಕೂಡಾ ಹೌದು. ಈವತ್ತಿಗೆ ಹಣವಂತ ತೆವಲಿಗರ ಪಾಲಿಗೆ ಈತ ಆತ್ಮೀಯ ಡಾರ್ಲಿಂಗ್ ಅನ್ನಿಸಿಕೊಂಡಿದ್ದಾನೆಂದರೆ, ಅದಕ್ಕೆ ಇಂಥಾ ‘ವ್ಯವಸ್ಥೆ’ಗಳೇ ಮೂಲ ಕಾರಣ. ಒಂದು ರೇವ್ ಪಾರ್ಟಿ ಆಯೋಜಿಸಿದನೆಂದರೆ, ಯಾವುದೆಂದರೆ ಯಾವ ಯಡವಟ್ಟೂ ಸಂಭವಿಸದಂತೆ ಎಚ್ಚರದಿಂದ ಹ್ಯಾಂಡಲ್ ಮಾಡೋ ಮೂಲಕ ಶ್ರೀನಿ ಎಲ್ಲರ ನಂಬಿಕೆ ಗಳಿಸಿಕೊಂಡಿದ್ದ.
ನಟಿ ರಾಗಿಣಿಗೆ ರೇವ್ ಪಾರ್ಟಿಗಳ ಮೂಲಕ ನಾನಾ ಬಗೆಯ ಡ್ರಗ್ಸುಗಳ ರುಚಿ ಹತ್ತಿಸಿದ್ದವನು ಇದೇ ಶ್ರೀನಿ. ಸದ್ಯ ಸಹಕಾರ ನಗರದ ಐಶಾರಾಮಿ ಪ್ಲಾಟಿನಲ್ಲಿ ವಾಸವಿದ್ದ ಶ್ರೀನಿ, ರಾಗಿಣಿಗೆ ತುಂಬಾನೇ ಕ್ಲೋಸ್ ಆಗಿದ್ದ. ಈತನ ಮನೆಗೆ ನಟ ನಟಿಯರು, ರಾಜಕಾರಣಿಗಳ ಪುತ್ರರು ಎಡತಾಕೋದು ಮಾಮೂಲು. ಯಾಕೆಂದರೆ, ಅದು ಹೊರಗೆಲ್ಲೂ ಕಾಣಸಿಗದ ಅಪರೂಪದ ಡ್ರಗ್ಸ್ಗಳ ಶೋರೂಂ ಇದ್ದಂತೆ. ರಾಗಿಣಿ ಡ್ರಗ್ಸ್ ಕೇಸಲ್ಲಿ ತಗುಲಿಕೊಂಡಿದ್ದಳಲ್ಲಾ? ಅದಕ್ಕೂ ಮುಂಚಿತವಾಗಿ ಒಂದು ತಿಂಗಳ ಅವಧಿಯಲ್ಲಿಯೇ ಆರು ಬಾರಿ ಆಕೆ ಶ್ರೀನಿ ಮನೆಗೆ ಭೇಟಿ ಕೊಟ್ಟಿದ್ದಳಂತೆ. ಅಲ್ಲಿಂದಲೇ ಡ್ರಗ್ಸ್ ಖರೀದಿಸಿ ತಂದು ನಶೆಯಲ್ಲಿ ತೇಲಾಡಿದ್ದಳೆಂಬ ಮಾಹಿತಿಯನ್ನೂ ಪೊಲೀಸರು ಕಲೆಹಾಕಿದ್ದಾರೆ.
ಹೀಗೆ ನಟ ನಟಿಯರನ್ನು, ರಾಜಕಾರಣಿಗಳನ್ನು ಕಲೆ ಹಾಕಿಕೊಂಡಿರುವ ಶ್ರೀನಿ ಇದೀಗ ಕೋಟಿಗೆ ತೂಗುತ್ತಾನೆ. ಬೆಂಗಳೂರಿನ ಪ್ರತಿಷ್ಠಿತ ಪ್ರದೇಶಗಳಲ್ಲಿ ಆತನಿಗೆ ಸೇರಿದ ಸ್ವಂತದ ಐಶಾರಾಮಿ ವಿಲ್ಲಾಗಳಿದ್ದಾವೆ. ಅದರಲ್ಲೆಲ್ಲ ನಿಯಮಿತವಾಗಿ ರೇವ್ ಪಾರ್ಟಿಗಳನ್ನು ಆಯೋಜಿಸುವ ಮೂಲಕ ಅಕ್ಷರಶಃ ಡ್ರಗ್ಸ್ ಪರಿಷೆ ನಡೆಸುತ್ತಾನೆ. ಅಂಥಾ ಕಡೆಗಳಲ್ಲಿ ಹೈಟೆಕ್ ವೇಶ್ಯಾವಾಟಿಕೆಯೂ ಗರಿಗೆದರುತ್ತೆ. ಒಂದು ಮೂಲದ ಪ್ರಕಾರ ಡ್ರಗ್ಸ್ ಚಟಕ್ಕೆ ಬಿದ್ದ ನಟೀಮಣಿಯರನ್ನೂ ಕೂಡಾ ಈತ ವೇಶ್ಯಾ ದಂಧೆಗೆ ಬಳಸಿಕೊಳ್ಳುತ್ತಾನೆಂಬುದು ಭಯಾನಕ ಸತ್ಯ. ಸದ್ಯ ಏರ್ಪೋರ್ಟ್ ರಸ್ತೆಯಲ್ಲಿರು ಜೆಡಿ ಗಾರ್ಡನ್ ರೆಸಾರ್ಟಿನಲ್ಲಿ ರೇವ್ ಪಾರ್ಟಿ ಆಯೋಜಿಸುವ ಮೂಲಕ ಪಿಂಪ್ ಕಂ ಡ್ರಗ್ ಪೆಡ್ಲರ್ ಶ್ರೀನಿ ತಗುಲಿಕೊಂಡಿದ್ದಾನೆ. ಆ ಪಾರ್ಟಿಯಲ್ಲಿ ಗಣಿನಾಡಿನ ಪ್ರಭಾವಿ ರಾಜಕಾರಣಿಯ ಪುತ್ರನೂ ಸಇಕ್ಕಿಬಿದ್ದಿದ್ದಾನೆ. ಆದರೆ ಪ್ರಭಾವ ಬಳಸಿ ಆತ ಗಾಯಬ್ ಆಗಿದ್ದಾನೆಂಬ ಮಾತೂ ಕೇಳಿ ಬರುತ್ತಿದೆ.
ಸದ್ಯಕ್ಕೆ ಶ್ರೀನಿಯನ್ನು ಸಿಸಿಬಿ ಪೊಲೀಸರು ವಿಸ್ತೃತವಾದ ತನಿಖೆಗೀಡು ಮಾಡುತ್ತಿದ್ದಾರೆ. ಯಾವುದೇ ಪ್ರಭಾವಕ್ಕೆ ಜಗ್ಗದೆ ತನಿಖೆ ಮುಂದುವರೆದಿದ್ದೇ ಆದರೆ, ತುಪ್ಪದ ಹುಡುಗಿ ರಾಗಿಣಿಗೆ ಖಂಡಿತವಾಗಿಯೂ ಕಂಟಕ ತಪ್ಪಿದ್ದಲ್ಲ. ಹಾಗಂತ, ಕಂಟಕ ಇರೋದು ಕೇವಲ ರಾಗಿಣಿಗೆ ಮಾತ್ರವೇ ಅಂದುಕೊಳ್ಳುವಂತಿಲ್ಲ. ಇನ್ನೊಂದಷ್ಟು ನಟ ನಟಿಯರೂ ಶ್ರೀನಿಯ ಗ್ರಾಹಕರಾಗಿದ್ದಾರೆ. ಆ ಸಾಲಿನಲ್ಲಿ ಹಾದಿಬಿಟ್ಟ ರಾಜಕಾರಣಿಗಳ ಪುತ್ರರತ್ನರೂ ಸೇರಿಕೊಂಡಿದ್ದಾರೆ. ಅವರೆಲ್ಲರೊಳಗೂ ಈಗ ಭಯ ಮೇರೆ ಮೀರಿಕೊಂಡಿದೆ. ಒಂದು ವೇಳೆ ಸಿಸಿಬಿ ಪೊಲೀಸರು ಡ್ರಗ್ಸ್ ಮಾಫಿಯಾದ ಹೆಡೆಮೆಟ್ಟುವ ನಿರ್ಧಾರಕ್ಕೆ ಬಂದರೆ, ಇಷ್ಟರಲ್ಲಿಯೇ ಪರಪ್ಪನ ಅಗ್ರಹಾರ ಹೌಸ್ಫುಲ್ ಆಗೋದರಲ್ಲಿ ಯಾವ ಸಂದೇಹವೂ ಇಲ್ಲ!