ಹಲವಾರು ಧಾರಾವಾಹಿಗಳಲ್ಲಿ ನಟಿಸುತ್ತಾ, ಕಿರುತೆರೆ ಜಗತ್ತಿನಲ್ಲಿ ಹೆಸರು ಮಾಡಿದ್ದ ನಟ ರವಿಪ್ರಸಾದ್ ಮಂಡ್ಯ ನಿಧನ ಹೊಂದಿದ್ದಾರೆ. ಜಾಂಡಿಸ್ ಖಾಯಿಲೆ ಉಲ್ಬಣಿಸಿ, ಅದು ತೀವ್ರವಾಗಿ ಬಹು ಅಂಗಾಂಗ ವೈಫಲ್ಯದಿಂದ ನರಳಾಡುತ್ತಿದ್ದ ರವಿ, ಈಗ್ಗೆ ಒಂದು ತಿಂಗಳಿಂದೀಚೆಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಂದೀಚೆಗೆ ಕುಟುಂಬ ವರ್ಗ ಅವರನ್ನು ಉಳಿಸಿಕೊಳ್ಳಲು ಹೆಣಗಾಡಿತ್ತು. ಆಸ್ಪತ್ರೆಯ ವೈದ್ಯರೂ ಕೂಡಾ ರವಿಯನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಿದ್ದರು. ಆದರೆ ದಿನದಿಂದ ದಿನಕ್ಕೆ ನಿತ್ರಾಣವಾಗುತ್ತಾ ಸಾಗಿದ್ದ ರವಿ ಉಳಿಯೋದು ಕಷ್ಟವೆಂದು ಇಂದು ಬೆಳಗ್ಗೆ ವೈದ್ಯರು ದೃಢಪಡಿಸಿದ್ದರು. ಇಂದೇ ಹುಟ್ಟೂರು ಮಂಡ್ಯಕ್ಕೆ ಅವರನ್ನು ಕರೆದೊಯ್ಯಲಾಗಿತ್ತು. ಕಡೆಗೂ ರವಿ ಎಲ್ಲ ಹರಕೆ ಹಾರೈಕೆಗಳನ್ನು ಮೀರಿ ಶಾಶ್ವತವಾಗಿ ಕಣ್ಮುಚ್ಚಿದ್ದಾರೆ.
ಈ ಮೂಲಕ ಕನ್ನಡ ಚಿತ್ರರಂಗ, ಕಿರುತೆರೆ ಜಗತ್ತು ಓರ್ವ ಪ್ರತಿಭಾನ್ವಿತ ಕಲಾವಿದನನ್ನು ಕಳೆದುಕೊಂಡಂತಾಗಿದೆ. ರವಿಪ್ರಸಾದ್ ಕಿರುತೆರೆ ಲೋಕದಲ್ಲಿ ರವಿ ಎಂದೇ ಪರಿಚಿತರಾಗಿದ್ದರು. ಖ್ಯಾತ ನಿರ್ದೇಶಕ ಟಿಎನ್ ಸೀತಾರಾಮ್ ನಿರ್ದೇಶನದ ಪ್ರಸಿದ್ಧ ಧಾರಾವಾಹಿಗಳಲ್ಲಿ, ಪ್ರಧಾನ ಪಾತ್ರಗಳನ್ನು ನಿರ್ವಹಿಸುವ ಮೂಲಕ ಹೆಸರು ಮಾಡಿದ್ದರು. ಚಿತ್ರಲೇಖ, ಮಿಂಚು, ಮುಕ್ತ ಮುಕ್ತ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದ ರವಿ ಅವರಿಗೆ ಕಿರುತೆರೆ ಲೋಕದಲ್ಲಿ ದೊಡ್ಡ ಅಭಿಮಾನಿ ಬಳಗವೇ ಇದೆ. ಯಾರನ್ನೂ ನಕಲು ಮಾಡದೆ, ತಮ್ಮದೇ ನಟನಾ ಶೈಲಿ ರೂಢಿಸಿಕೊಂಡಿದ್ದ ರವಿ, ಆ ಮೂಲಕವೇ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿದ್ದರು. ಓರ್ವ ನಟನಾಗಿ ಒಂದೊಂದೇ ಮೆಟ್ಟಿಲೇರುತ್ತಾ ಪ್ರಸಿದ್ಧಿ, ಬೇಡಿಕೆ ಗಳಿಸಿಕೊಂಡಿದ್ದರು.
ರವಿಪ್ರಸಾದ್ ತಮ್ಮ ಕಂಚಿನ ಕಂಠ ಮತ್ತು ಅದಕ್ಕೊಪ್ಪುವ ನಟನೆಯಿಂದಲೇ ಮನಸೆಳೆದವರು. ಯಾವ ಪಾತ್ರವೇ ಆದರೂ ಅದಕ್ಕೆ ಅವರೇ ಫಿಟ್ ಎಂಬಷ್ಟು ತನ್ಮಯರಾಗಿ ನಟಿಸುತ್ತಿದ್ದ ರವಿಯ ನಟನೆಯನ್ನು ಮೆಚ್ಚಿಕೊಳ್ಳದವರಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕೆಲ ಸಿನಿಮಾಗಳಲ್ಲಿಯೂ ನಟಿಸಿದ್ದ ರವಿ, ಬಹುವಾಗಿ ನೆಚ್ಚಿಕೊಂಡಿದ್ದದ್ದು ಕಿರುತೆರೆಯನ್ನೇ. ವರ್ಷದ ಹಿಂದೆ ಪ್ರಸಾರವಾಗುತ್ತಿದ್ದ ಸೀತಾರಾಮ್ ನಿರ್ದೇಶನದ ಮಗಳು ಜಾನಕಿ ಸೀರಿಯಲ್ಲಿನಲ್ಲಿ ರವಿ ನಿರ್ವಹಿಸಿದ್ದ ಚಂದು ಭಾರ್ಗಿ ಎಂಬ ರಾಜಕಾರಣಿಯ ಪಾತ್ರವನ್ನಂತೂ ಯಾರೂ ಮರೆಯಲು ಸಾಧ್ಯವಿಲ್ಲ. ಇನ್ನೂ ಒಂದಷ್ಟು ಧಾರಾವಾಹಿಗಳಲ್ಲಿ ಸಕ್ರಿಯರಾಗಿದ್ದ ರವಿ, ನಮ್ಮನೆ ಯುವರಾಣಿ ಸೀರಿಯಲ್ಲಿನ ಶಂಕರಮೂರ್ತಿಯಾಗಿಯೂ ಅಬ್ಬರಿಸಿದ್ದರು. ಹೀಗೆ ಆಕ್ಟೀವ್ ಆಗಿದ್ದ ಈ ಪ್ರತಿಭಾನ್ವಿತ ಕಲಾವಿದನಿಗೆ ಹಠಾತ್ ಅನಾರೋಗ್ಯ ಸಮಸ್ಯೆ ಕಾಡಿತ್ತು. ಅವರು ಈ ರೀತಿ ನಿರ್ಗಮಿಸುತ್ತಾರೆಂದು ಯಾರೆಂದರೆ ಯಾರೂ ಅಂದುಕೊಂಡಿರಲಿಕ್ಕಿಲ್ಲ. ಅಂತೂ ಅವರ ನಿರ್ಗಮನದಿಂದ ಕಿರುತೆರೆ ಜಗತ್ತು, ಅಪಾರ ಅಭಿಮಾನಿ ವರ್ಗ ದಿಗ್ಭ್ರಾಂತರಾಗಿದ್ದಾರೆ.