ಸಿನಿಮಾ ನಟನಟಿಯರೆಂದರೇನೇ ಅವರದ್ದು ಹೈಫೈ ಬದುಕೆಂಬ ಸಿದ್ಧಸೂತ್ರದ ಚಿತ್ರ ಎಲ್ಲರ ಮನಸುಗಳಲ್ಲಿಯೂ ಮೂಡಿಕೊಳ್ಳುತ್ತೆ. ಸಾಮಾನ್ಯವಾಗಿ ಬಹುತೇಕ ನಟ ನಟಿಯರು ಸಾಕಷ್ಟು ಕಷ್ಟಪಟ್ಟುಕೊಂಡೇ ಮೇಲೆದ್ದು ನಿಂತಿರುತ್ತಾರೆ. ಹಾಗೆ ಸಾಗಿ ಬಂದವರನ್ನು ಯಾವುದೋ ಹಾದಿಯಲ್ಲಿ ಗೆಲುವೆಂಬುದು ತಬ್ಬಿಕೊಳ್ಳುತ್ತೆ. ಆ ಬಿಸಿಯಲ್ಲಿ ಮೈ ಮರೆಯೋ ಮಂದಿ ಬಂದ ಹಾದಿಯತ್ತ ಹಿಂತಿರುಗಿ ನೋಡೋದು, ನಡೆದ ಹಾದಿಯಲ್ಲಿ ಮತ್ತೆ ಹೆಜ್ಜೆಯಿಡುವ ಮನಸು ಮಾಡೋದೆಲ್ಲ ಅತೀ ವಿರಳ. ಬಣ್ಣದ ಲೋಕದ ತುಂಬಾ ಹಬ್ಬಿಕೊಂಡಿರುವ ಇಂಥಾ ವಾತಾವರಣದ ನಡುವೆಯೂ ಕೆಲ ಮಂದಿ ನೆನಪುಗಳ ಪಸೆಯನ್ನು ಮನಸಲ್ಲಿಟ್ಟುಕೊಂಡು, ಹಳೇ ದಿನಗಳನ್ನು ಮೆಲುಕು ಹಾಕುತ್ತಾ, ಮತ್ತೆ ಮತ್ತೆ ಅಲ್ಲಿಗೆ ಮರಳುತ್ತಾ ಮುದಗೊಳ್ಳುತ್ತಾರೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ರಕುಲ್ ಪ್ರೀತ್ ಸಿಂಗ್ ಕೂಡಾ ಆ ಸಾಲಿಗೆ ಸೇರಿಕೊಳ್ಳುತ್ತಾಳೆ!
ಇದೀಗ ಅವಕಾಶಗಳಿಗೆ ಕೊಂಚ ಹಿನ್ನಡೆ ಉಂಟಾಗಿದ್ದರೂ ಕೂಡಾ, ರಕುಲ್ ಪ್ರೀತ್ ಸಿಂಗ ಭಾರತೀಯ ಚಿತ್ರರಂಗದ ಪ್ರಮುಖ ನಟಿ. ಮಾಡೆಲಿಂಗ್ ಕ್ಷೇತ್ರದಲ್ಲಿ ಈಗಲೂ ಮಿಂಚುತ್ತಿರುವ ಆಕೆಯದ್ದು ಹೈಫೈ ಬದುಕೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಹಣಕಾಸು ಸೇರಿದಂತೆ ಬಹುಶಃ ಯಾವ ಅಡೆತಡೆಗಳೂ ಆಕೆಗಿರಲಿಕ್ಕಿಲ್ಲ. ಆದರೂ ಕೂಡಾ ರಕುಲ್ ಆಗಾಗ ಹಳೇ ದಿನಗಳಿಗೆ ಮರಳಿಕೊಳ್ಳಲು ಹಂಬಲಿಸುತ್ತಾಳಂತೆ. ಆ ದಿನಗಳನ್ನು ಧ್ಯಾನಿಸುತ್ತಾ, ಒಂದು ರೌಡು ಶಾಪಿಂಗ್ಗೆ ತೆರಳಿ ಅತ್ಯಂತ ಕಡಿಮೆ ಬೆಲೆಯ ಬಟ್ಟೆಗಳನ್ನು ಕೊಂಡು ಸಂಭ್ರಮಿಸುತ್ತಾಳಂತೆ.
ಹಾಗೆ ಕಡಿಮೆ ರೇಟಿನ ಬಟ್ಟೆಗಳನ್ನು ಕೊಂಡಾಗೆಲ್ಲ ಕಷ್ಟದ ದಿನಗಳನ್ನು ಮತ್ತೆ ನೆನಪಿಸಿಕೊಂಡ, ಆ ಕಾಲಮಾನದಲ್ಲಿ ಓಡಾಡಿದ ಫೀಲ್ ರುಕುಲ್ ಪ್ರೀತ್ ಸಿಂಗ್ಳನ್ನು ಆವರಿಸಿಕೊಳ್ಳುತ್ತದೆಯಂತೆ. ಆಕೆಯೇ ಹೇಳಿಕೊಂಡಿರುವ ಪ್ರಕಾರವಾಗಿ ನೋಡೋದಾದರೆ, ನಟಿಯಾಗಿ ಅದೆಷ್ಟೇ ಉತ್ತುಂಗಕ್ಕೇರಿದ್ದರೂ ಕೂಡಾ ಈ ಕ್ಷಣಕ್ಕೂ ಮಧ್ಯಮ ವರ್ಗದ ಗಾಢ ಛಾಯೆ ಆಕೆಯ ಬದುಕಿನ ಮೇಲಿದೆಯಂತೆ. ಸಾಮಾನ್ಯವಾಗಿ ನಟಿಯರು ಹೀಗೆ ಭಾವುಕವಾಗಿ, ಸಂವೇದನಾಶೀಲರಾಗಿ ಆಲೋಚಿಸೋದೇ ವಿರಳ. ಆ ಝಗಮಗದ ಬದುಕು ಅವರ ಜೀವನದ ನಿನ್ನೆಗಳನ್ನು ಮಸುಕಾಗಿಸಿರುತ್ತವೆ. ನಾಳೆಗಳ ಬಗ್ಗೆ ಆಲೋಚಿಸದಂತೆ ಮಾಡಿ, ಈ ಕ್ಷಣವನ್ನು ಕೆನೆಯುತ್ತಾ ಕಳೆಯೋದೇ ಬದುಕೆಂಬ ಸೂತ್ರಕ್ಕೆ ಕಟ್ಟುಬಿದ್ದಿರುತ್ತಾರೆ. ಇಂಥವರ ಸಂತೆಯಲ್ಲಿ ಹಳತಿನ ಗುಂಗಿಗೆ ಜಾರುವ ರಾಕುಲ್ ಪ್ರೀತ್ ಸಿಂಗ್ಳಂಥ ನಟಿಯರು ನಿಜಕ್ಕೂ ವಿಶೇಷವಾಗಿ ಕಾಣಿಸುತ್ತಾರೆ.