ಯೋಗಿ ನಾಡೆಂದು ಕರೆಯಿಸಿಕೊಳ್ಳುತ್ತಿರುವ ಉತ್ತರಪ್ರದೇಶದ ತುಂಬೆಲ್ಲ ಇದೀಗ ನಾನಾ ಕ್ರೈಮುಗಳು ವಿಜೃಂಭಿಸಲಾರಂಭಿಸಿವೆ. ಈ ಹಿಂದೆಯೂ ಉತ್ತರ ಪ್ರದೇಶ ಇಂಥಾದ್ದಕ್ಕೆಲ್ಲ ಕುಖ್ಯಾತಿ ಪಡೆದುಕೊಂಡಿತ್ತು. ಆದರೆ ಯೋಗಿ ಆದಿತ್ಯನಾಥ್ ಸಿಎಂ ಆಗಿ ಎರಡು ಅವಧಿಯತ್ತ ಹೆಜ್ಜೆಯಿಟ್ಟಿದ್ದರೂ ಕೂಡಾ ಕ್ರೈಂ ರೇಟ್ ಏರುಗತಿ ಕಾಣುತ್ತಲೇ ಸಾಗುತ್ತಿದೆ. ಅದರಲ್ಲಿಯೂ ಮನೆಗಳವು, ಸರಗಳವಿನಂಥಾ ಪ್ರಕರಣಗಳಂತೂ ಅಲ್ಲಿನ ಒಂದಷ್ಟು ನಗರಗಳ ನಾಗರಿಕರ ನಿದ್ದೆಗೆಡಿಸಿಬಿಟ್ಟಿದೆ. ಆನಸಾಮಾನ್ಯರ ಕಥೆ ಹಾಗಿರಲಿ; ಖುದ್ದು ಆಡಳಿತಾರೂಢ ಬಿಜೆಪಿ ಪಕ್ಷದ ಶಾಸಕರ ಮನೆ ಮಂದಿಯೇ ಕಳ್ಳರ ಕಣ್ತಪ್ಪಿಸಿಕೊಂಡು ಓಡಾಡಲು ಸಾಧ್ಯವಿಲ್ಲ ಎಂಬಂಥಾ ಪರಿಸ್ಥಿತಿ ಅಲ್ಲಿದೆ. ಬೆಳಗ್ಗೆ ವಾಕಿಂಗ್ ಹೊರಟಿದ್ದ ಪ್ರಭಾವಿ ಶಾಸಕರೊಬ್ಬರ ತಾಯಿಯ ಕಿವಿ ಕೊಯ್ದು ಓಲೆ ದೋಚಲಾಗಿದೆಯೆಂದರೆ ಅಲ್ಲಿನ ಚಿತ್ರಣ ಸ್ಪಷ್ಟವಾಗಿಯೇ ಕಣ್ಮುಂದೆ ಕದಲುತ್ತದೆ!
ಇಂಥಾದ್ದೊಂದು ಘಟನೆ ನಡೆದಿರೋದು ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ. ಬುಲಂದ್ ಶಹರ್ ಸದರ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಪ್ರದೀಪ್ ಚೌಧರಿಯವರ ತಾಯಿ ಕಳ್ಳರ ಕೈಚಳಕದ ಮುಂದೆ ಕಂಗಾಲಾದವರು. ಎಂಬತ್ತು ವರ್ಷಗಳ ವೃದ್ಧೆ ಸಂತೋಷಿ ದೇವಿಯವರ ಓಲೆ ಒಂದು ಕಿವಿಯ ಸಮೇತ ಕಳ್ಳರ ಪಾಲಾಗಿಬಿಟ್ಟಿದೆ. ಈಕೆ ಪ್ರತೀ ನಿತ್ಯವೂ ಬೆಳಗ್ಗಿನ ಸುಮಾರಿಗೆ ವಾಕಿಂಗ್ ಹೋಗುತ್ತಿದ್ದರು. ನಿನ್ನೆ ಅವರು ಹಾಗೆ ವಾಕಿಂಗ್ ಹೊರಟು ಡಿಪಿಎಸ್ ವೃತ್ತದ ಬಳಿ ಹೋಗುತ್ತಿದ್ದ ವೇಳೆ ಮೋಟಾರ್ ಸೈಕಲ್ಲಿನಲ್ಲಿ ಸರಗಳ್ಳರು ದಾಂಗುಡಿಯಿಟ್ಟಿದ್ದಾರೆ. ಅವರ ಓಲೆಯನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ.
ಸಂತೋಷಿ ಪಾಲಿಗೆ ಆ ಓಲೆ ಮದುವೆಯ ಹೊತ್ತಿನಲ್ಲಿ ಹೆತ್ತವರು ಉಡುಗೊರೆಯಾಗಿ ಕೊಟ್ಟಿದ್ದಂತೆ. ಅದೆಷ್ಟೋ ದಶಕಗಳಿಂದ ತೆಗೆಯದಿದ್ದ ಓಲೆ ಕಳ್ಳರು ಎಳೆದಾಕ್ಷಣ ಬಂದಿಲ್ಲ. ಆಕೆ ವೃದ್ದೆ ಎಂಬ ಕನಿಕರವೂ ಇಲ್ಲದ ಕಳ್ಳರು, ಆಕೆ ಎಷ್ಟೇ ಕಿರುಚಿಕೊಂಡರೂ ಬಿಡದೆ ಎಳೆದಾಡಿದ್ದಾರೆ. ಕಡೆಗೂ ಕಟರ್ನಿಂದ ಆಕೆಯ ಕಿವಿಯನ್ನು ಭಾಗಶಃ ಕೊಯ್ದು ಪರಾರಿಯಾಗಿದ್ದಾರೆ. ಸಂತೋಷಿ ದೇವೆ ಶಾಸಕ ಅನಿಲ್ ಚೌಧರಿಯ ಸಹೋದರ ಜೀತ್ಪಾಲ್ ಚೌಧರಿ ಜೊತೆ ವಾಸವಿದ್ದರಂತೆ. ಈ ಘಟನೆಯಿಂದ ಆ ಭಾಗದ ನಾಗರಿಕರು ಭೀತರಾಗಿದ್ದಾರೆ. ಶಾಸಕನ ಅಮ್ಮನಿಗೇ ಇಂಥಾ ಸ್ಥಿತಿ ಬಂದಿರುವಾಗ ಜನಸಾಮಾನ್ಯರ ಗತಿಯೇನೆಂದು ಎಲ್ಲರೂ ಚಿಂತೆಗೀಡಾಗಿದ್ದಾರೆ. ಪೊಲೀಸರು ಸದ್ಯ ಸರಗಳ್ಳರ ಬೆಂಬಿದ್ದು ಹುಡುಕಲಾರಂಭಿಸಿದ್ದಾರೆ.