ಒಂದ್ಯಾವುದೋ ಅಪರೂಪದ ಪರಿಮಳ ಅಚಾನಕ್ಕಾಗಿ ಮೂಗಿಗೆ ಬಡಿದಂತಾಗುತ್ತೆ. ಅದೊಂದು ಪರಿಮಳ ನಮ್ಮನ್ನು ಬದುಕಿನ ಯಾವುದೋ ಇರುಕ್ಕು ಗಲ್ಲಿಗಳಲ್ಲಿ ಸುತ್ತಾಡಿಸುವಷ್ಟು ಶಕ್ತವಾಗಿರುತ್ತೆ. ಮೆದುಳೆಂಬುದು ಸೀದಾ ನಮ್ಮನ್ನು ಬಾಲ್ಯಕ್ಕೋ, ಶಾಲಾ ದಿನಗಳಿಗೋ ಕೊಂಡೊಯ್ದು ನಿಲ್ಲಿಸಿ ಬಿಡುತ್ತೆ. ಅಂಥಾ ಅಗೋಚರ ಪರಿಮಳಗಳೇ ಎಳೇ ಮಕ್ಕಳನ್ನಾಗಿಸಿ ಅಜ್ಜಿಯ ಸೆರಗಿನ ಚುಂಗು ಹಿಡಿದು ಅಲೆದಾಡಿಸುತ್ತೆ. ಅಜ್ಜಿಯ ಸುಕ್ಕುಗಟ್ಟಿದ ಕೈಯ ಸ್ಪರ್ಶದ ತಾಜಾ ಅನುಭೂತಿಯನ್ನೂ ಎದೆಗೆ ನಾಟಿಸಿ ಬಿಡುತ್ತೆ. ಜೀವನದ ಒಂದಲ್ಲ ಒಂದು ಹಂತದಲ್ಲಿ ಪ್ರತಿಯೊಬ್ಬರನ್ನೂ ಇಂಥಾ ಅನೂಹ್ಯ ಪರಿಮಳಗಳು ಅಚ್ಚರಿಗೀಡು ಮಾಡುತ್ತವೆ.
ಅರೇ… ಈ ಪರಿಮಳಕ್ಕೆ ನೆನಪಿನ ಗರ್ಭಕ್ಕೇ ಕೊಂಡೊಯ್ದು ಬಿಡೋ ತಾಕತ್ತಿದೆಯಾ? ಇದು ನಮ್ಮ ಭ್ರಮೆಯಾ ಅಥವಾ ಅದಕ್ಕೆ ವಾಸ್ತವದ ಭೂಮಿಕೆಯೇನಾದರೂ ಇದೆಯಾ ಅನ್ನೋ ಪ್ರಶ್ನೆ ಸೂಕ್ಷ್ಮ ಮನಸ್ಥಿತಿಯ ಮಂದಿಯನ್ನು ಒಂದಲ್ಲ ಒಂದು ಹಂತದಲ್ಲಿ ಕಾಡಿಯೇ ಕಾಡುತ್ತೆ. ಇಂಥಾ ಪರಿಮಳಗಳ ಮ್ಯಾಜಿಕ್ಕಿಗೆ ವಿಜ್ಞಾನ ನಿಖರವಾದ ಸಾಕ್ಷ್ಯಗಳನ್ನೇ ಕೊಡುತ್ತೆ. ಅಂದಹಾಗೆ ಅದರ ಮೂಲವಿರೋದು ನಮ್ಮ ಮೂಗಿನಲ್ಲಿ ಮತ್ತು ನಮ್ಮದೇ ಮೆದುಳಿಗಿರೋ ಅಗಾಧವಾದ ಶಕ್ತಿಯಲ್ಲಿ!
ಮನುಷ್ಯರ ಮೂಗಿಗಿಗಿರೋ ಆಗ್ರಾಣಿಸುವ ಶಕ್ತಿಯೇ ಅದ್ಭುತ. ನಮ್ಮ ಮೂಗು ಬರೋಬ್ಬರಿ ಐವತ್ತು ಸಾವಿರ ಬಗೆಯ ಪರಿಮಳಗಳನ್ನು ಸಲೀಸಾಗಿ ನೆನಪಿಟ್ಟುಕೊಳ್ಳುವ ತಾಕತ್ತು ಹೊಂದಿದೆ. ಯಾವುದೇ ವಾಸನೆಗಳು ಮೂಗಿಗೆ ಅಡರಿದಾಗ ಅದು ಒಂದಷ್ಟು ಸಂದೇಶಗಳನ್ನ ಮೆದುಳಿಗೆ ರವಾನಿಸುತ್ತೆ. ಆ ಸಂದೇಶಗಳು ಮೆದುಳಿನ ಕೋಶಗಳನ್ನು ತಲುಪಿದಾಗ ಆ ವಾಸನೆಗೆ ಸಂಬಂಧಿಸಿದ ನೆನಪುಗಳು ಗರಿಬಿಚ್ಚಿಕೊಳ್ಳುತ್ತವೆ. ಅಂಥಾ ವಾಸನೆಗಳು ಎಳೇ ವಯಸ್ಸಿನಲ್ಲಿ ನಿಮ್ಮ ಅಪ್ಪ ಬಳಸುತ್ತಿದ್ದ ಶೇವಿಂಗ್ ಕ್ರೀಮಿನ ಸುತ್ತಾ ಗಿರಕಿ ಹೊಡೆಯಬಹುದು. ಅಲ್ಲಿಂದ ಬಾಲ್ಯದ ಒಂದಷ್ಟು ಚಿತ್ರಗಳು ಕಣ್ಣ ಮುಂದೆ ಹಾದು ಹೋಗಬಹುದು. ಒಬ್ಬೊಬ್ಬರ ನೆನಪುಗಳನ್ನು ಆಧರಿಸಿ ವಾಸನೆಗಳು ಏನಕ್ಕೆ ಬೇಕಾದರೂ ಕನೆಕ್ಟಾಗೋ ಶಕ್ತಿ ಹೊಂದಿವೆಯಂತೆ. ನಿಖರವಾಗಿ ಹೇಳಬೇಕಂದ್ರೆ ನಮ್ಮ ನರನಾಡಿಗಳಲ್ಲಿಯೂ ನೆನಪುಗಳ ಪರಿಮಳ ಅಡಗಿದೆ!