ರಾಜಮೌಳಿ ನಿರ್ದೇಶನದ ಬಾಹುಬಲಿ ಸರಣಿ ಸಿನಿಮಾಗಳ ಮೂಲಕ ವಿಶ್ವ ಮಟ್ಟದಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವಾತ ಪ್ರಭಾಸ್. ಆದರೆ, ಅದೆಕೋ ಬಾಹುಬಲಿಯ ಪ್ರಭೆಯಾಚೆಗೊಂದು ಪುಷ್ಕಳ ಗೆಲುವು ದಕ್ಕಿಸಿಕೊಳ್ಳುವಲ್ಲಿ ಅವರಿಗೆ ಕೊಂಚ ಹಿನ್ನಡೆಯಾಗಿದೆ. ಅದೆಲ್ಲವನ್ನೂ ನೀಗಿಕೊಂಡು, ಹೊಸಾ ದಾಖಲೆ ಬರೆಯುವ ಉತ್ಸಾಹವೀಗ ಪ್ರಭಾಸ್ ಕಣ್ಣುಗಳಲ್ಲಿ ಸ್ಪಷ್ಟವಾಗಿಯೇ ಕಾಣಿಸುತ್ತಿದೆ. ಅಂಥಾದ್ದೊಂದು ಆವೇಗಕ್ಕೆ ಕಾರಣವಾಗಿರೋದು ದೇಶಾದ್ಯಂತ ನಿರೀಕ್ಷೆ ಮೂಡಿಸಿರುವ ‘ಆದಿಪುರುಷ’ ಚಿತ್ರ. ಇದರಲ್ಲಿ ಪ್ರಭಾಸ್ ಶ್ರೀರಾಮಚಂದ್ರನಾಗಿ ಅವತಾರವೆತ್ತಿದ್ದಾರೆ. ಈಗಾಗಲೇ ಆ ಸಿನಿಮಾದಲ್ಲಿನ ಪ್ರಭಾಸ್ ಲುಕ್ಕಿಗೆ ಪ್ರೇಕ್ಷಕರೆಲ್ಲ ಸಾರಾಸಗಟಾಗಿ ಫಿದಾ ಆಗಿದ್ದಾರೆ.
ಹೀಗೆ ಆದಿಪುರುಷನಾಗಿ ಅಬ್ಬರಿಸಲು ಅಣಿಗೊಂಡಿರುವ ಪ್ರಭಾಸ್, ಇದೀಗ ನಿಜವಾಗಿಯೂ ರಾವಣನ ದಹನಕ್ಕೆ ಮುಂದಾಗಿದ್ದಾರೆ. ಪ್ರತೀ ವರ್ಷವೂ ದೆಹಲಿಯ ಲವ ಕುಶ ರಾಮಲೀಲಾ ಮೈದಾನದಲ್ಲಿ ದಸರಾ ಹಬ್ಬದ ಸಂದರ್ಭದಲ್ಲಿ ರಾವಣನ ಪ್ರತಿಕೃತಿ ದಹಿಸುವ ಸಂಪ್ರದಾಯವೊಂದಿದೆ. ಕಳೆದೆರಡು ವರ್ಷಗಳಲ್ಲಿ ಕೊರೋನಾ ಕಾರಣದಿಂದ ಆ ಆಚರಣೆಗೆ ಒಂದಷ್ಟು ಹಿನ್ನಡೆಯಾಗಿತ್ತು. ಈ ಬಾರಿ ಹಿಂದೆಂದಿಗಿಂತಲೂ ಅದ್ದೂರಿಯಾಗಿ ಈ ಕಾರ್ಯಕ್ರಮವನ್ನು ನಡೆಸಲು ರಾಮ್ಲೀಲಾ ಸಮಿತಿ ಯೋಜನೆ ಹಾಕಿಕೊಂಡಿದೆ. ಈ ಬಾರಿ ರಾವಣನ ದುಷ್ಟತನಕ್ಕೆ ಬೆಂಕಿ ಹಚ್ಚಲು ಪ್ರಭಾಸ್ ಅವರೇ ಸೂಕ್ತ ವ್ಯಕ್ತಿ ಎಂದು ಸಮಿತಿ ತೀರ್ಮಾನಿಸಿದೆಯಂತೆ.
ಆದಿಪುರುಷ ಚಿತ್ರದಲ್ಲಿ ಸಾಕ್ಷಾತ್ತು ಶ್ರೀರಾಮಚಂದ್ರನಾಗಿ ನಟಿಸಿರುವ ಪ್ರಭಾಸ್ ರಾವಣನ ಪ್ರತಿಕೃತಿ ದಹಿಸೋದಕ್ಕೆ ಸೂಕ್ತ ಎಂಬ ಅಭಿಪ್ರಾಯ ಎಲ್ಲೆಡೆಯಿಂದಲೂ ಕೇಳಿ ಬಂದಿದೆಯಂತೆ. ಅದಕ್ಕೆ ಖುದ್ದು ಪ್ರಭಾಸ್ ಖುಷಿಯಿಂದಲೇ ಒಪ್ಪಿಗೆ ಸೂಚಿಸಿದ್ದಾರೆ. ಅದರನ್ವಯ ಅವರು ಇದೇ ತಿಂಗಳ ಇಪ್ಪತ್ತಾರರಂದು ರಾವಣನ ದುಷ್ಟತನಕ್ಕೆ ಬೆಂಕಿ ಹಚ್ಚಲಿದ್ದಾರಂತೆ. ಅಂದಹಾಗೆ ಆದಿಪುರುಷ ಇಡೀ ಭಾರತವೇ ತದೇಕಚಿತ್ತದಿಂದ ಕಾಯುತ್ತಿರುವ ಚಿತ್ರ. ರಾಮಾಯಣಾಧಾರಿತವಾದ ಈ ಚಿತ್ರವನ್ನು ಓಂ ರಾವುತ್ ನಿರ್ದೇಶನ ಮಾಡಿದ್ದಾರೆ. ಇದು ಐನೂರು ಕೋಟಿಗಳ ಬಿಗ್ಬಜೆಟ್ಟಿನಲ್ಲಿ ತಯಾರಾಗಿದೆ. ಇದೀಗ ಚಿತ್ರೀಕರಣವನ್ನು ಮುಗಿಸಿಕೊಂಡು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಆದಿಪುರುಷ ಮುಂದಿನ ವರ್ಷಾರಂಭದಲ್ಲಿ ತೆರೆಗಾಣಲಿದೆ.