ಊಟ ಮಾಡುವಾಗ ಅನ್ನದಲ್ಲಿ ಕೂದಲು ಬಿದ್ದಿದ್ದರೂ ಮನೆ ಮಂದಿಯ ಮೇಲೆ ಜುಟ್ಟು ಕೆದರಿಕೊಂಡು ಕಾದಾಟಕ್ಕಿಳಿಯುವವರಿದ್ದಾರೆ. ಈ ಕೂದಲು ಸಿಗುವ ಸಿಲ್ಲಿ ಕಾರಣಕ್ಕೇ ಅದೆಷ್ಟೋ ಸಾಂಸಾರಿಕ ಬದುಕಿನಲ್ಲಿ ಅಶಾಂತಿ ನೆಲೆಯೂರಿ ಬಿಡುತ್ತದೆಂದರೆ ನಿಮಗೆ ಅಚ್ಚರಿಯಾದೀತೇನೋ… ಹಾಗೆ ಸಣ್ಣ ಕೂದಲು ಹಿಡಿದುಕೊಂಡು ಜಗ್ಗಾಡುವ ಮಂದಿ, ಹೊಟೇಲುಗಳಿಗೆ ಹೋಗಿ ತೃಪ್ತಿಯಿಂದ ತಿಂದು ಬರುತ್ತಾರೆ. ಆದರೆ, ಹಾಗೆ ನಾವು ಚಪ್ಪರಿಸಿ ತಿನ್ನೋ ತಿನಿಸಿನ ಮೇಕಿಂಗ್ ಸ್ಟೈಲನ್ನು ಕಣ್ಣಾರೆ ಕಂಡರೆ ಜನುಮ ಪೂರ್ತಿ ವಾಂತಿ ಕಂಟ್ರೋಲಿಗೆ ಬರುವುದು ಕಷ್ಟವಿದೆ. ಇದಕ್ಕೆ ಅಪವಾದವೆಂಬಂತೆ ಒಂದಷ್ಟು ಹೊಟೇಲುಗಳಿರಬಹುದಾದರೂ, ಬಹುತೇಕವುಗಳದ್ದು ಅದೇ ಕಥೆ. ತಮಿಳುನಾಡಿನಲ್ಲಾಗಿರುವ ಒಂದು ಘಟನೆಯ ಕಥೆ ಕೇಳಿದರೆ, ಖಂಡಿತಾ ಹೊಟೇಲಿನ ಬಗ್ಗೆ ಭಯ ಆವರಿಸಿಕೊಂಡು ಬಿಡುತ್ತೆ!
ದೊಡ್ಡ ಹೊಟೇಲು, ರೆಸ್ಟೋರೆಂಟ್ಗಳಲ್ಲಿ ಭಯಂಕರ ಸ್ವಚ್ಛತೆ ಕಾಪಾಡುತ್ತಾರೆ ಅಂತೊಂದು ಭ್ರಮೆ ಜನಸಾಮಾನ್ಯರಲ್ಲಿದೆ. ತಮಿಳುನಾಡಿನ ಗಾಂಧಿನಗರದ ನಿವಾಸಿ ಮುರಳಿ ಎಂಬಾತ ಬಾಲಾಜಿ ಭವನದಲ್ಲಿ ಖಾಸಗಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಒಂದಷ್ಟು ಜನರಿದ್ದ ಆ ಕಾರ್ಯಕ್ರಮಕ್ಕೆ ತಿರುವಣ್ಣಾಮಲೈ ರೆಸ್ಟೋರೆಂಟಿನಿಂದ ಊಟ ತರಿಸಲಾಗಿತ್ತು. ಅದು ಹೇಳಿಕೇಳಿ ಬಲು ಪ್ರಸಿದ್ಧಿ ಪಡೆದಿದ್ದ ರೆಸ್ಟೋರೆಂಟಾಗಿದ್ದದ್ದರಿಂದ ಒಂದಷ್ಟು ಮಂದಿ ಊಟವನ್ನು ಚಪ್ಪರಿಸಿ ತಿಂದಿದ್ದರು. ಕಡೇಯ ಪಂಕ್ತಿಗೆ ಹೊಟ್ಟೆ ಹಸಿದುಕೊಂಡು ಕೂತಿದ್ದವರಿಗೆ ಮಾತ್ರ ತಿಂದಿದ್ದೆಲ್ಲವೂ ವಾಪಾಸ್ ಆಗುವಂಥಾ ಆಘಾತ ಕಾದಿತ್ತು.
ಯಾಕೆಂದರೆ, ರುಕಟ್ಟಾಗಿದ್ದ ಬೀಟ್ರೂಟ್ ಪಲ್ಯದಲ್ಲಿ ಇಲಿಯ ತಲೆ ಸಿಕ್ಕಿಬಿಟ್ಟಿತ್ತು. ಹಾಗೆ ಸಿಗುವ ಹೊತ್ತಿಗೆಲ್ಲ ಇಲಿಯ ತಲೆಯ ಮೂಳೆ ಭಾಗ ಮಾತ್ರವೇ ಉಳಿದುಕೊಂಡಿತ್ತು. ಬಹುಶಃ ಇಡೀ ಇಲಿಯೇ ಬಾಣಲೆಗೆ ಬಿದ್ದು, ಅದು ಬೀಟ್ರೂಟಿನೊಂದಿಗೆ ಹದವಾಗಿ ಬೆಂದು ಜೀರ್ಣವಾಗಿ, ತಲೆ ಮಾತ್ರವೇ ಉಳಿದಿತ್ತೆನ್ನಿಸುತ್ತೆ. ಈ ವಿಚಾರ ಅದಾಗಲೇ ಊಟ ಮಾಡಿದ್ದವರಿಗೂ ತಿಳಿದು ಒಂದಷ್ಟು ಮಂದಿ ವಾಂತಿ ಮಾಡಿಕೊಂಡಿದ್ದರಂತೆ. ಇದರಿಂದ ರೊಚ್ಚಿಗೆದ್ದ ಮುರುಳಿ ಸೀದಾ ತಿರುವಣ್ಣಾಮಲೈ ರೆಸ್ಟೋರೆಂಟಿಗೆ ತೆರಳಿ ಬೈದು ಬಂದಿದ್ದಾರೆ. ಈ ಘಟನೆಯೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಬಿಟ್ಟಿದೆ. ಈ ಮೂಲಕ ಪ್ರಸಿದ್ಧ ರೆಸ್ಟೋರೆಂಟಿನ ಮಾನ ಬೀದಿಗೆ ಬಂದುಬಿಟ್ಟಿದೆ.