ಪ್ರತೀ ಜೀವ ಸಂಕುಲಗಳ ಮೇಲೂ ಪ್ರಹಾರ ನಡೆಸುತ್ತಾ ಸರ್ವನಾಶ ಮಾಡುವ ಮನುಷ್ಯರನ್ನೂ ಕೂಡಾ ಕೆಲ ಪ್ರಾಣಿಗಳು, ಹುಳ ಹುಪ್ಪಟೆಗಳು ಬೆಚ್ಚಿ ಬೀಳಿಸುತ್ತವೆ. ಗಾತ್ರದಲ್ಲಿ ತುಂಬಾನೇ ಪುಟ್ಟದಾದ ಜೀವಿಗಳೂ ಕೂಡಾ ನಮ್ಮನ್ನು ಕನಸಲ್ಲಿಯೂ ಕಾಡಿ ಕಂಗಾಲು ಮಾಡುತ್ತವೆ. ಯಾಕಂದ್ರೆ ಅವುಗಳ ಮೈ ತುಂಬಾ ಒಂದಷ್ಟು ಮಂದಿಯನ್ನು ಒಂದೇ ಸಲಕ್ಕೆ ಕೊಂದು ಬಿಡುವಷ್ಟು ವಿಷವಿರುತ್ತೆ. ಮತ್ತೆ ಕೆಲ ಜೀವಿಗಳು ಆತ್ಮ ರಕ್ಷಣೆಗಾಗಿ ಕಚ್ಚಿ, ಕುಟುಕಿದರೂ ಕೂಡಾ ಆ ನೋವನ್ನು ಸಹಿಸಿಕೊಂಡು ಸುಧಾರಿಸಿಕೊಳ್ಳೋದಕ್ಕೆ ವಾರಗಟ್ಟಲೆ ಬೇಕಾಗುತ್ತೆ. ಮತ್ತೆ ಕೆಲ ಜೀವಿಗಳು ಕಚ್ಚಿದರೆ ಆ ಭಾಗವೇ ಕೊಳೆತು ನಾರುತ್ತೆ.
ಅಂಥಾ ಭಯಾನಕ ವಿಷ ತುಂಬಿಕೊಂಡಿರೋ ಜೀವಿಗಳಲ್ಲಿ ಚೇಳು ಪ್ರಧಾನವಾದದ್ದು. ಚೇಳು ಎಂಬುದು ಯಾರನ್ನೇ ಆದರೂ ನಡುಗಿಸಿ ಹಾಕುವಂಥಾ ಗುಣ ಲಕ್ಷಣಗಳನ್ನು ಹೊಂದಿರೋ ಜೀವಿ. ಅದು ಕೊಂಚ ಪೊದೆ ಪ್ರದೇಶದಲ್ಲಿದ್ದುಕೊಂಡು ಮನುಷ್ಯರು ವಾಸವಿರೋ ಪ್ರದೇಶದಲ್ಲಿಯೇ ಕಾಣಿಸಿಕೊಳ್ಳುತ್ತವೆ. ಕೊಂಚ ಯಾಮಾರಿದರೂ ಕುಟುಕಿ ಒಂದಷ್ಟು ದಿನ ನೋವಲ್ಲಿ ವಿಲಗುಡುವಂತೆ ಮಾಡಿ ಬಿಡುತ್ತವೆ. ಒಂದೇ ಒಂದು ಸಲ ಕುಟುಕಿದರೆ ಅಷ್ಟೆಲ್ಲ ಪರಿಣಾಮ ಬೀರೋ ತಾಕತ್ತು ಹೊಂದಿರೋ ಚೇಳು ಒಂದಷ್ಟು ಅಚ್ಚರಿದಾಯಕ ಕಲೆಗಳನ್ನೂ ಕರಗತ ಮಾಡಿಕೊಂಡಿದೆ.
ಮನುಷ್ಯರಂಥ ಮನುಷ್ಯರನ್ನೇ ಕಂಗಾಲು ಮಾಡೋ ಚೇಳುಗಳಿಗೂ ಕೂಡಾ ಪ್ರಾಕೃತಿಕವಾಗಿ ನಾನಾ ಗಂಡಾಂತರಗಳು ಬರುತ್ತವೆ. ಅವುಗಳಿಗೂ ಕೂಡಾ ಶತ್ರುಗಳಂಥಾ ಜೀವಿಗಳಿದ್ದಾವೆ. ಇಂಥಾ ಶತ್ರುಗಳಿಂದ ಅಪಾಯವಾದ ಘಳಿಗೆಯಲ್ಲಿ ಅದು ಯಾವುದಾದ್ರೂ ತಾವು ಸೇರಿಕೊಂಡು ಮಿಸುಕಾಡದೆ ನಿಲ್ಲುತ್ತೆ. ಆ ಹೊತ್ತಿನಲ್ಲಿ ಅದು ಉಸಿರಾಡೋದೂ ಇಲ್ಲ. ನಿಮಿಷ, ಘಂಟೆಗಳಲ್ಲ; ಒಂದು ದಿನವೂ ಅಲ್ಲ… ಅಖಂಡ ಏಳು ದಿನಗಳ ಕಾಲ ಉಸಿರನ್ನು ತಡೆಹಿಡಿದು ಬದುಕೋ ಸಾಮರ್ಥ್ಯ ಚೇಳುಗಳಿಗಿರುತ್ತದಂತೆ.
ಇಂಥಾ ಚೇಳುಗಳ ಜೀವನ ಚಕ್ರವೂ ತುಂಬಾನೇ ವಿಚಿತ್ರ. ಸಾಮಾನ್ಯವಾಗಿ ಜಗತ್ತಿನ ಬಹುತೇಕ ಜೀವಿಗಳಿಗೆ ಸಂತಾನಾಭಿವೃದ್ಧಿ ಅನ್ನೋದು ಮಹಾ ಸಂಭ್ರಮ. ಅದೊಂದು ಹೊಸಾ ಹುಟ್ಟು. ತಮ್ಮದೇ ಸಂತಾನ ದುಪ್ಪಟ್ಟಾಗುವ ಸಡಗರ. ಆದರೆ ಚೇಳುಗಳ ವಿಚಾರದಲ್ಲಿ ಆ ಸಂಭ್ರಮಕ್ಕೆ ಸೂತಕವೂ ಅಂಟಿಕೊಂಡಿರುತ್ತೆ. ಯಾಕಂದ್ರೆ ಹೆಣ್ಣು ಚೇಳಿನ ಪಾಲಿಗೆ ಸಂತಾನಾಭಿವೃದ್ಧಿ ಆದ ಘಳಿಗೆಯಿಂದಲೇ ಅಂತ್ಯ ಆರಂಭವಾಗುತ್ತೆ. ಯಾಕಂದ್ರೆ ಹೆಣ್ಣು ಚೇಳನ್ನು ಅದರದ್ದೇ ಮರಿಗಳು ಕೆಲವೇ ದಿನಗಳಲ್ಲಿ ತಿಂದು ಮುಗಿಸುತ್ತವೆ!