ಮಳೆಗೆ ಅದೆಂಥಾ ಮುನಿಸಿತ್ತೋ… ಥೇಟು ನಿನ್ನಂತೆಯೇ ಕಾಡಿ, ಬಾರದೆ ಸತಾಯಿಸಿ ಮತ್ತೆ ಲಯ ಹಿಡಿದಿದೆ. ಮಾಮೂಲಿಯಂತಿದ್ದರೆ ಈ ಹೊತ್ತಿಗೆಲ್ಲಾ ಪೇಪರು ತಿರುವಿದರೂ, ಟಿವಿ ಆನ್ ಮಾಡಿದ್ದರೂ ಮಳೆಯದ್ದೇ ಸುದ್ದಿ. ಅಲ್ಲೆಲ್ಲೋ ಸೇತುವೆಯ ಮೇಲೆ ಹರಿದ ತೊರೆ, ಮತ್ತೆಲ್ಲೋ ಊರಿಗೂರೇ ದ್ವೀಪ, ಅಣೆಕಟ್ಟೆಗಳೆಲ್ಲ ಭರ್ತಿಯಾದ ಸಂತಸ, ಮುಖ್ಯಮಂತ್ರಿಯೋ, ಸಚಿವನೋ ತುಂಬಿದ ಆಣೆಕಟ್ಟೆಗೆ ಬಾಗೀನ ಬಿಡುವ ಸಾಲು ಸಾಲು ಪೋಸು… ಅಂಥಾ ಮುಂಗಾರು ಈ ಸಾರ್ತಿ ಮಾತ್ರ ನಿನ್ನ ಬುದ್ಧಿಯನ್ನೇ ಫಾಲೋ ಮಾಡಿದಂತಿತ್ತು. ಆದರೀಗ ಮತ್ತೆ ಮೋಡಗಟ್ಟಿದೆ. ಮತ್ತೆ ವರ್ಷಧಾರೆಗೆ ಮೈಕೈಚಾಚಿ ನಡೆಯುವ ಸಂಭ್ರಮ. ಮನಸು ಮಂಕಾದಾಗೆಲ್ಲಾ ಕೆನ್ನೆ ಕೆಂಪಾಗಿಸಿಕೊಂಡು ಕಾಯುತ್ತಿದ್ದಂತಿದ್ದ ನನ್ನಿಷ್ಟದ ಸಂಜೆಗಳೂ ಶೀತಲ ಸ್ಪರ್ಶದಿಂದ ತಂಪು ತಂಪು. ಇಂಥಾ ಸಂಜೆಗಳ ಸನ್ನಿಧಾನದಲ್ಲಿ ನಿನ್ನ ಸಾನಿಧ್ಯವೂ ಇದ್ದಿದ್ದರೆ ಅದರ ರಂಗೇ ಬೇರೆಯದ್ದಿರುತ್ತಿತ್ತು!
ತುಂಬಾ ಇಷ್ಟದ ಜೀವದ ಧ್ಯಾನದಲ್ಲಿಯೇ ಈ ಮಳೆ ಜಿಬುರುವ ಸಂಜೆಗಳನ್ನ ಕಳೆಯುವುದು, ಮಧುರ ನೀರವದ ರಾತ್ರಿಗಳನ್ನು ಆಸ್ವಾದಿಸುವ ಆಹ್ಲಾದವೇ ಬೇರೆ. ಬಹುಶಃ ನೀ ನಂಗಿಂಥಾದ್ದೊಂದು ಶಿಕ್ಷೆ ಕೊಟ್ಟಿದ್ದೀಯೆಂದು ಬೀಗುತ್ತಿದ್ದಿರಬಹುದೇನೋ. ಈ ಜಗತ್ತಿನ ಬಹುತೇಕ ಹುಡುಗೀರು ಹಾಗೇ ಅಂದುಕೊಳ್ತಾರೆ. ನಿಂಗೊತ್ತಾ ಜಗತ್ತಿನ ಬಹುಪಾಲು ಹುಡುಗರಿಗೆ ಹುಡುಗೀರು ಕೊಡೋ ಘೋರ ಶಿಕ್ಷೆಗಳನ್ನೂ ಚೆಂದದ ವರವಾಗಿ ಪಳಗಿಸಿಕೊಳ್ಳೋ ಕಲೆ ಗೊತ್ತಿರುತ್ತೆ. ವಿರಹವನ್ನೇ ಅಚಲ ನಿರೀಕ್ಷೆಯ, ನಂಬಿಕೆಯ ಅಗ್ಗಿಷ್ಠಿಕೆಯನ್ನಾಗಿ ಮಾರ್ಪಡಿಸಿಕೊಳ್ಳೋ ವಿಧಾನವೂ ತಿಳಿದಿರುತ್ತೆ. ಅಂಥಾ ಹುಡುಗರ ಸಾಲಿನಲ್ಲಿ ನಾನೂ ಒಬ್ಬ. ನಿನ್ನ ಗೈರು ಹಾಜರಿಯಲ್ಲಿಯೂ ನಿನ್ನನ್ನೇ ಧ್ಯಾನಿಸುತ್ತಾ ಖುಷಿಯಾಗಿರೋ ಫಾರ್ಮುಲಾವಲ್ಲ ಕೇವಲ ನಂಗಾಗಿಯೇ ಸಂಶೋಧನೆ ಮಾಡಿಕೊಂಡಿದ್ದೇನೆ…
ಈ ಥಂಡಿ ಥಂಡಿ ಸಂಜೆಗಳಲ್ಲಿ, ಶೀತ ಹೊದ್ದು ಕೊರೆವ ರಾತ್ರಿಗಳಲ್ಲಿ ತುಟಿಗಿಟ್ಟ ಸಿಗರೇಟಿನ ಉರಿ ಫಿಲ್ಟರಿನ ಕಾಲರು ಕಚ್ಚುವ ಮುನ್ನ ನೀನೆಷ್ಟು ಸಲ ನೆನಪಾದೆ ಅಂತ ಲೆಕ್ಕ ಹಾಕುತ್ತಲೇ ಉಸಿರು ನಿಂತರೂ ಒಳಿತೇ ಅಂತ ಆಗಾಗ ಅನ್ನಿಸುತ್ತೆ. ಈ ಮಳೆಗೂ ನೆನಪಿಗೂ ಮತ್ತು ಗಾಢ ನಿರೀಕ್ಷೆಗಳಿಗೂ ಭೂಮಿ-ಭಾನಿಗಿರುವಂಥಾದ್ದೇ ನಿಗೂಢ ಕನೆಕ್ಷನ್ನು. ಅದು ಕಾಣಿಸದೆಯೇ ಕಂಗಾಲು ಮಾಡುತ್ತೆ. ತಲ್ಲಣಿಸುವಂತೆ ಕಾಡುತ್ತದೆ. ಒಂಟಿಯಾಗಿ ಕೂತಾಗಲೂ ನೆತ್ತಿ ಸವರಿ ಕಡು ಏಕಾಂತದ ಸೂತಕವನ್ನ ಎದೆಯಿಂದ ಗುಡಿಸಿ ಹೊರ ಹಾಕುತ್ತೆ. ಭಣಗುಡುವ ಬೇಸಗೆಯಲ್ಲಿಯೂ ಒಮ್ಮೊಮ್ಮೆ ಮುಂಜಾನೆಯೆಂಬುದು ಮಳೆಯಲ್ಲಿ ನೆಂದು ಒದ್ದೆಮುದ್ದೆಯಾಗಿಯೇ ಎದುರುಗೊಳ್ಳಲಿ ಅಂತಲೇ ಹಂಬಲಿಸುತ್ತೇನೆ. ಕೆಲವೊಮ್ಮೆ ದಿಢೀರನೆ ನೀ ಪ್ರತ್ಯಕ್ಷವಾಗುತ್ತೀಯಲ್ಲಾ? ಹಾಗೆಯೇ ಸುಳಿವು ಕೊಡದೆ ಮಳೆ ಹನಿಯಲಿ ಅಂತ ಆಶಿಸುತ್ತೇನೆ.
ಇಂಥಾದ್ದೊಂದು ಆಕಸ್ಮಿಕ ಮಳೆಗಾಗಿ ನಿನ್ನ ಬರುವಿಕೆಗಾಗಿಯೇ ಕಾದು ಕೂರುವುದರಲ್ಲೂ ಒಂದು ಸುಖವಿದೆ. ನೀ ಬಂದೇ ಬರುತ್ತೀಯೆಂಬೋ ಖಾತರಿ ಇಲ್ಲದಿದ್ದರೂ ಕೆಲವೊಮ್ಮೆ ಮನಸಿನ ತುಂಬಾ ಆಸೆಯ ಗರಿಕೆ ಮೂಡಿಸಿಕೊಂಡು ಕಾಯುತ್ತೇನಲ್ಲಾ? ಬಹುಶಃ ಈ ಮಳೆ ಮತ್ತು ನಿನಗಾಗಿ ಕಾತರಿಸಿದಂತೆ ಈ ಬದುಕಲ್ಲಿ ಮತ್ಯಾವುದಕ್ಕೂ ಕಾದಿಲ್ಲವೇನೋ. ಇಂಥಾ ಭ್ರಮೆಗಳೂ ಬದುಕಿಸಿ ಬಿಡುತ್ತವೆ, ಆಸೆ, ನಿರೀಕ್ಷೆ, ಭರವಸೆಗಳೆಲ್ಲ ಖಾಲಿ ಖಾಲಿಯಾದಂಥಾ ಸ್ಥಿತಿಯಲ್ಲಿಯೂ ಇಂಥಾ ಅಸೀಮ ಭ್ರಮೆಗಳು ಜೀವಂತವಾಗಿಡುತ್ತವೆ. ಬಹುಶಃ ಇಂಥಾದ್ದೊಂದು ರೂಟು ಕಂಡುಹಿಡಿದುಕೊಳ್ಳದೇ ಹೋಗಿದ್ದರೆ. ಈ ಜೀವಿತದ ಹಾದಿಯ ಅದೆಲ್ಲೋ ತಿರುವು ಮುರುವುಗಳಲ್ಲಿ ಯಾವತ್ತೋ ಈ ಪಯಣ ಸಮಾಪ್ತಿ ಹೊಂದುತ್ತಿತ್ತು…
ಜೀವಾ… ಕನಸು ಅಥವಾ ಅದಕ್ಕೆ ಹೊಸೆದುಕೊಂಡಿರುವಂಥಾ ಭ್ರಮೆಗಳು ಇರಲೇ ಬೇಕೆಂಬ ವಾಸ್ತವದ ಅರಿವಾಗಿಸಿದವಳೇ ನೀನು. ನೀನೆಂಬುದು ನನ್ನ ಬದುಕಿನ ಜೀವಂತ ಕನಸು. ಆದರೆ ಈ ಬದುಕಿಗೆ ನೀ ಶಾಶ್ವತವಾಗಿ ಜೊತೆಯಾಗುತ್ತಿಯೆಂಬೋ ಅನುಕ್ಷಣದ ನನ್ನ ನಿರೀಕ್ಷೆಗಳಿದ್ದಾವಲ್ಲಾ? ಅವುಗಳೆಲ್ಲವೂ ಭ್ರಮೆಯೇನೋ ಅಂತ ಕೆಲ ಕ್ಷಣಗಳಲ್ಲಿ ಅನ್ನಿಸುತ್ತೆ. ಅಂಥಾ ಘಳಿಗೆಗಳಲ್ಲಿ ಹೀಗೆ ಒಂದು ಹಿತವಾದ ಸಂಜೆಗೆ, ಮಳೆಗೆ, ಬೆಳುದಿಂಗಳಿಗೆ ಕೆಲವೊಮ್ಮೆ ಕತ್ತಲಿಗಾಗಿಯೂ ನಿರೀಕ್ಷಿಸುತ್ತೇನೆ. ಇಂಥಾ ಕಾಲಮಾನಗಳ ತೆಕ್ಕೆಯಲ್ಲಿ ಭ್ರಮೆಗಳನ್ನೇ ಹೊದಿಕೆಯಾಗಿಸಿಕೊಂಡಂತೆ ಬೆಚ್ಚಗಿರುತ್ತೇನೆ.
ಕಣ್ಣೆದುರಿಂದ ಅಮ್ಮ ಮರೆಯಾದ ಧಾವಂತದಲ್ಲಿರುವ ಹಸುಗೂಸಿನ ಎದೆಯಲ್ಲಿ ಆಕೆ ಬಂದೇ ಬರುತ್ತದೆಂಬ ಪ್ರಾಂಜನ ನಂಬಿಕೆ ಇದ್ದೀತಲ್ಲ? ಅಂಥಾದ್ದೆ ಅಚಲ ನಂಬಿಕೆ ನಿನ್ನ ಮೇಲಿದೆ ನಂಗೆ. ಇಷ್ಟೆಲ್ಲಾ ಇದ್ದರೂ ಅದೆಂಥಾದ್ದೇ ಮಧುರ ಸಂಜೆಗಳೂ, ಮುದ ನೀಡುವ ಮಳೆಯ ರಾತ್ರಿಗಳೂ ನಿನ್ನ ಜೊತೆಯಿಲ್ಲದೆ ನರಳಿದಂತಾಗುತ್ತೆ. ಮತ್ತೆ ಕನಸುಗಳನ್ನ ಎಣಿಸುವ, ನಿರಾಸೆಗಳನ್ನು ಮಣಿಸುವ ಸರ್ಕಸ್ಸು ನಡೆಸುತ್ತೇನೆ. ಇಂಥಾ ಜಾಗರದ ರಾತ್ರಿಗಳೆಲ್ಲ ಒಜ್ಜೆಯಾಠಗಿ ಎದೆಗೆ ನೇತು ಬಿದ್ದಂತಾಗುತ್ತೆ…
ಹುಡುಗೀ… ನಿನ್ನ ಲೋಕದಲ್ಲಿ ಮೀನಿನಂತೆ ಸ್ವಚ್ಚಂದವಾಗಿರೋ ನಿಂಗೆ ನಿನಗಾಗಿಯೇ ಒಂದು ಜೀವ ಇಷ್ಟೆಲ್ಲ ಪರಿತಪಿಸುತ್ತಿರಬಹುದು, ನಿನ್ನ ಧ್ಯಾನದಲ್ಲಿಯೇ ಉಸಿರಾಡುತ್ತಿರಬಹುದು, ದೂರದಲ್ಲಿ ನಿಂತೇ ನಿನ್ನ ನೆನಪಿನ ಅಮಲಲ್ಲಿ ಕಳೆದು ಹೋಗಿರ ಬಹುದೆಂಬ ಸಣ್ಣ ಕಲ್ಪನೆಯಾದರೂ ಇದೆಯೇ? ಇಂಥಾ ಲಹರಿಯಲ್ಲೇ ಕರಗಿದ ರಾತ್ರಿಗಳೆಷ್ಟೋ… ಹರಿದ ಕಣ್ಣೀರು, ಬಿಕ್ಕಳೀಕೆ, ಭರವಸೆ… ಈ ಕಥೆ ಕೇಳಿದರೆ ನಿನ್ನ ಕಣ್ಣುಗಳೂ ಮಂಜಾದಾವು… ಇದೆಲ್ಲ ಇನ್ನೆಷ್ಟು ದಿನದ ಹಳವಂಡವೆಂಬುದನ್ನೂ ನೀನೇ ಹೇಳಬೇಕಿದೆ…
– ನಿನ್ನವನು