ಹಿರಿ ಜೀವದ ಒಡಲೊಳಗಿದೆ ಬೇರೆಯದ್ದೇ ಲೆಕ್ಕಾಚಾರ!
ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣರಿಗೆ ಭಾರತೀಯ ಜನತಾ ಪಾರ್ಟಿಯೂ ಬೋರು ಹೊಡೆಸಿತೇ? ಸದ್ಯ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿರುವ ರೂಮರುಗಳ ಪ್ರಕಾರವಾಗಿ ನೋಡ ಹೋದರೆ ಕೃಷ್ಣ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿರೋದು ನಿಜ. ಅದು ಬೋರೋ, ತಮ್ಮ ಲೆಕ್ಕಾಚಾರ ಬೋರಲು ಬಿದ್ದುದರ ವಿರುದ್ಧದ ಅಸಹನೆಯೋ… ಅಂತೂ ಹೈಟೆಕ್ ಕೃಷ್ಣ ಮೆತ್ತಗೆ ಬಿಜೆಪಿ ಹೊಸಿಲಾಚೆ ಕಾಲಿಟ್ಟಿದ್ದಾರೆ. ಅಷ್ಟಕ್ಕೂ ವಯೋವೃದ್ಧರಾದ ಎಸ್.ಎಂ ಕೃಷ್ಣ ಬಿಜೆಪಿ ತೊರೆದರೆ ಆ ಪಕ್ಷಕ್ಕೇನು ನಷ್ಟವಿಲ್ಲ. ಕಾಂಗ್ರೆಸ್ಗೆ ಬಂದರೆ ಆಗುವ ಲಾಭವೂ ಅಷ್ಟಕ್ಕಷ್ಟೇ. ಆದರೆ ಕೃಷ್ಣ ಹಿರಿಯ ಮುತ್ಸದ್ಧಿಯಾಗಿರೋದರಿಂದ ಅವರ ನಡಾವಳಿಗಳ ಬಗೆಗೊಂದು ಕುತೂಹಲ ಇದ್ದೇ ಇದೆ!
ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ರಾಜ್ಯದ ಮುಖ್ಯಮಂತ್ರಿಯಾಗಿ ಕೇಂದ್ರ ಸಚಿವರಾಗಿಯೂ ಅಧಿಕಾರ ಅನುಭವಿಸಿದ್ದವರು ಎಸ್.ಎಂ ಕೃಷ್ಣ. ಆದರೆ ಈ ಅಧಿಕಾರ ಲಾಲಸೆ ಎಂಬುದು ಅಷ್ಟು ಸುಲಭಕ್ಕೆ ತಣಿಯುವಂಥಾದ್ದಲ್ಲ ಎಂಬುದಕ್ಕೆ ಕೃಷ್ಣ ಅವರಿಗಿಂತಲೂ ಉತ್ತಮ ಉದಾಹರಣೆ ಬೇರೊಂದಿಲ್ಲ. ಬಹುಶಃ ತಮ್ಮ ದೇಹವೇ ತಮ್ಮ ಮಾತು ಕೇಳದ ಸ್ಥಿತಿ ತಲುಪಿರುವಾಗ ಘನತೆಯಿಂದ ನಿವೃತ್ತಿ ಘೋಷಣೆ ಮಾಡಿ ಮನೆಗೆ ತೆರಳಿದ್ದರೆ ಅವರ ಮುತ್ಸದ್ಧಿತನಕ್ಕೊಂದು ಗೌರವ ಇರುತ್ತಿತ್ತು. ಚುನಾವಣೆಗಳಂಥಾ ಸಂದರ್ಭದಲ್ಲಿ, ಮುಖ್ಯ ನಿರ್ಧಾರಗಳನ್ನು ಕೈಗೊಳ್ಳುವಾಗೆಲ್ಲ ಪಕ್ಷದ ಮಂದಿ ಅವರ ಸಲಹೆ ಕೇಳದಿರುತ್ತಿರಲಿಲ್ಲ. ಆದರೆ, ಉಸಿರಿರುವವರೆಗೂ ಅಧಿಕಾರ ಬೇಕೆಂಬ ಮನಸ್ಥಿತಿಯ ಕೃಷ್ಣ ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ಹೊತ್ತಿಗೆಲ್ಲಾ ಕಾಂಗ್ರೆಸ್ಸಿನ ಗೋಡೌನು ಸೇರಿಕೊಂಡಿದ್ದರು. ಯಾಕೆಂದರೆ ಅಲ್ಲಿ ಸಿದ್ದು ಸಾರಥ್ಯ ವಹಿಸುತ್ತಲೇ ಬೇರೆಲ್ಲ ನಾಯಕರು ಸೈಡಿಗೆ ಹೋದಂತೆ ಕೃಷ್ಣಾ ಕೂಡಾ ಮೂಲೆಗುಂಪಾಗಿದ್ದರು. ಅವಕಾಶ ಸಿಕ್ಕರೆ ಆ ಸಲ ಕೂಡಾ ತಾನೇ ಸಿಎಂ ಆಗಿ ಮತ್ತೆ ಕನಸಿನ ಸಿಂಗಾಪುರದ ಹುಳ ಬಿಡುವ ಇರಾದೆ ಹೊಂದಿದ್ದ ಕೃಷ್ಣರನ್ನು ಚುನಾವಣಾ ಪ್ರಚಾರದಲ್ಲಿಯೂ ಲೆಕ್ಕಕ್ಕೆ ತಗೆದುಕೊಂಡಿರಲಿಲ್ಲ. ಅತ್ತ ಡಿಕೆಶಿ, ರಮ್ಯಾ ಮುಂತಾದ ಶಿಷ್ಯ ಪಡೆ ಇದ್ದರೂ ಸಿದ್ದು ಪ್ರಭೆಯ ಮುಂದೆ ಕಳೆಗುಂದಿ ಕಂಗಾಲಾಗಿದ್ದ ಕೃಷ್ಣ ಸಂಪೂರ್ಣ ನೇಪಥ್ಯಕ್ಕೆ ಸರಿಯುವ ಹಂತ ತಲುಪಿದ್ದಾಗಲೇ ಅತ್ತ ಬಿಜೆಪಿ ಮಂದಿ ಸರಿಯಾದ್ದೊಂದು ದಾಳ ಉರುಳಿಸಿದ್ದರಲ್ಲಾ? ಅದಕ್ಕೆ ಶರಣಾಗಿ ಕಾಂಗ್ರೆಸ್ ಮಂದಿಯ ವಿರುದ್ಧ ಸೇಡು ತೀರಿಸಿಕೊಳ್ಳುವ ಉಮೇದಿನಲ್ಲಿ ಬಿಜೆಪಿ ಸೇರಿಕೊಂಡಿದ್ದವರು ಎಸ್ಎಂಕೆ!
ಸ್ವಂತ ಮನೆಯಲ್ಲೇ ನೆಮ್ಮದಿಯಿರದಾತ ನೆರಮನೆಯಲ್ಲಿ ನೆಮ್ಮದಿ ಕಂಡುಕೊಳ್ಳೋದು ಸಾಧ್ಯವೇ? ಬಿಜೆಪಿ ಕೃಷ್ಣರನ್ನು ಕರೆದುಕೊಂಡಿದ್ದ ಲೆಕ್ಕಾಚಾರವೇ ಬೇರೆ ಇದ್ದಿದ್ದರಿಂದ ಅಲ್ಲೂ ಕೂಡಾ ಕರೆದು ಮೂಲೆಯಲ್ಲಿ ಕೂರಿಅಸಿದಂಥಾ ಪರಿಸ್ಥಿತಿ ತಂದುಕೊಂಡು ಕೃಷ್ಣ ಕಂಗಾಲಾಗಿದ್ದರು. ಗಮನಿಸಿ ನೋಡಿ, ಅಮಿತ್ ಶಾ ಚುನಾವಣಾ ಪ್ರಚಾರಕ್ಕೆ ಬಂದು ಊರೆಲ್ಲಾ ಓಡಾಡುವಾಗ ಚಿಳ್ಳೆಪಿಳ್ಳೆ ಬಿಜೆಪಿಗರೆಲ್ಲ ಠಳಾಯಿಸುತ್ತಿದ್ದಾರೆ. ಆದರೆ ಕೃಷ್ಣ ಮಾತ್ರ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅಸಲಿಗೆ ಅವರನ್ನು ಬಿಜೆಪಿ ನಾಯಕರು ಒಂದು ಮಟ್ಟಕ್ಕೆ ಮರೆತೇ ಬಿಟ್ಟಿದ್ದರು. ಇದೆಲ್ಲ ಹೇಗಾದರೂ ಹಾಳು ಬಿದ್ದು ಹೋಗಲಿ, ಈ ಬಾರಿ ಬಿಜೆಪಿಯಿಂದ ತಮಗೆ ಬೇಕಾದ ಒಂದಷ್ಟು ಮಂದಿಗೆ ಟಿಕೆಟು ಗಿಟ್ಟಿಸಿ ಕೊಡುವ ತೀರ್ಮಾನಕ್ಕೆ ಕೃಷ್ಣ ಬಂದಿದ್ದರು. ಈ ಬಗ್ಗೆ ಒಂದು ಪಟ್ಟಿಯನ್ನೂ ರವಾನಿಸಿದ್ದರು. ಆದರೆ ಅದರಲ್ಲಿ ಒಬ್ಬೇ ಒಬ್ಬರನ್ನೂ ಕೂಡಾ ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಎಸೆಂಕೆ ಹಠಾತ್ತನೆ ಮತ್ತೆ ಕಾಂಗ್ರೆಸ್ ಸೇರಿಕೊಳ್ಳುವ ಬಗ್ಗೆ ಹುಯಿಲೇಳುವುದಕ್ಕೆ ಅದೂ ಕೂಡಾ ಒಂದು ಕಾರಣ.
ಈ ಬಗ್ಗೆ ಈಗಾಗಲೇ ತಮ್ಮ ಪಟ್ಟದ ಶಿಷ್ಯ ಡಿ.ಕೆ ಶಿವಕುಮಾರ್ ಬಳಿ ಮಾತುಕತೆಯನ್ನೂ ಕೃಷ್ಣ ನಡೆಸಿದ್ದಾರೆ. ತಮ್ಮ ಗುರು ಯಾವುದೋ ದಾಳಕ್ಕೆ ಸೇರಿ ಶತ್ರು ಪಕ್ಷದ ಪಾಲಾದಾಗಲೂ ಕೈ ಕಟ್ಟಿಕೊಂಡು ಸುಮ್ಮನಿರುವ ದಯನೀಯ ಸ್ಥಿತಿ ತಲುಪಿಕೊಂಡಿದ್ದ ಡಿಕೆಶಿ ಕೂಡಾ ಈ ಬಗ್ಗೆ ಒಲವು ತೋರಿಸಿದ್ದಾರೆ. ಸಿದ್ದರಾಮಯ್ಯನವರ ಗಮನಕ್ಕೂ ಈ ವಿಚಾರವನ್ನು ತಂದು ಅತ್ತಲಿಂದಲೂ ಹಸಿರು ನಿಶಾನೆ ಪಡೆದಿದ್ದಾರೆ. ಅತ್ತ ಹೈ ಕಮಾಂಡಿನ ಕಡೆಯಿಂದ ರಾಹುಲ್ ಗಾಂಧಿ ಕೂಡಾ ಕೃಷ್ಣ ಬರೋದಾದರೆ ಯಾರ ಅಭ್ಯಂತರವೂ ಇಲ್ಲ ಅಂದಿದ್ದಾರೆ. ಅಲ್ಲಿಗೆ ಒಂದು ಹಂತದಲ್ಲಿ ಕೃಷ್ಣ ಮತ್ತೆ ಗೂಡು ಸೇರಿಕೊಳ್ಳಲು ಎಲ್ಲ ಅಡೆತಡೆಗಳೂ ನಿವಾರಣೆಯಾಗಿವೆ. ಹೀಗಾದೇಟಿಗೆ ಮತ್ತೆ ಕಾಂಗ್ರೆಸ್ಗೆ ಕೃಷ್ಣಾಗಮನವಾಗಿ ಮತ್ತೊಂದು ಸುತ್ತಿನ ಕೃಷ್ಣ ಗಾರುಡಿ ಶುರುವಾಗುತ್ತದೆಂಬ ಭ್ರಮೆ ಮಾತ್ರ ಕಾಂಗ್ರೆಸ್ನ ಕಟ್ಟ ಕಡೆಯ ಕಾರ್ಯಕರ್ತನಲ್ಲಿಯೂ ಉಳಿದುಕೊಂಡಿಲ್ಲ!
ಅಷ್ಟಕ್ಕೂ ಕೃಷ್ಣ ಅವರ ಮನದಾಳದ ಗಾರುಡಿಗಳೇ ಬೇರೆ ತೆರನಾಗಿದ್ದರೂ ಅಚ್ಚರಿ ಪಡುವಂಥಾದ್ದೇನೂ ಇಲ್ಲ. ಯಾಕೆಂದರೆ, ಒಂದಷ್ಟು ಮಂದಿ ಕೃಷ್ಣ ಅವರ ಈ ನಡೆಯ ಹಿಂದೆ ಬಿಜೆಪಿ ವರಿಷ್ಠರನ್ನು ಬೆದರಿಸಿ ಒಂದೊಳ್ಳೆ ಪೊಜಿಷನ್ ಗಿಟ್ಟಿಸಿಕೊಳ್ಳುವ ಹುನ್ನಾರ ಅಡಗಿದೆ ಎಂದೂ ಹೇಳುತ್ತಿದ್ದಾರೆ. ಬಿಜೆಪಿ ಮಂದಿ ಅಳಿಯ ಸಿದ್ಧಾರ್ಥನ ಮೇಲೆ ರೇಡು ನಡೆಸುವ ಬೆದರಿಕೆ ಹಾಕಿ ಕೃಷ್ಣರನ್ನು ಕರೆದುಕೊಂಡರೇ ವಿನಃ ಕನಿಷ್ಠ ಅವರಿಗೆ ರಾಜ್ಯಸಭಾ ಸದಸ್ಯತ್ವದ ಗೌರವವನ್ನೂ ಕೊಟ್ಟಿರಲಿಲ್ಲ. ಇದು ಹೇಳಿ ಕೇಳಿ ಚುನಾವಣಾ ಸಮಯ. ಅಮಿತ್ ಷಾ ಅದೇನೇ ತಂತ್ರ ಹೆಣೆದರೂ ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಬರಖತ್ತಾಗೋದು ಕಷ್ಟವಿದೆ. ಹೀಗಿರುವಾಗ ಎಸ್ ಎಂ ಕೃಷ್ಣ ಮತ್ತೆ ಕಾಂಗ್ರೆಸ್ಗೆ ಮರಳಿದ್ದರೆ ಸಣ್ಣ ಮಟ್ಟದಲ್ಲಾದರೂ ಡ್ಯಾಮೇಜ್ ಆಗೋದನ್ನು ಅಲ್ಲಗಳೆಯುವಂತಿಲ್ಲ. ಅದಲ್ಲದೇ ಅಳಿಯನ ಮೇಲೆ ರೇಡು ನಡೆಸೋ ಬೆದರಿಕೆ ಹಾಕಿ ಬಿಜೆಪಿ ಮಂದಿ ಕರೆಸಿಕೊಂಡಿದ್ದರೆಂಬ ಸತ್ಯ ಈ ಚುನಾವಣಾ ಹೊಸ್ತಿಲಲ್ಲೇನಾದರೂ ಕೃಷ್ಣರ ಬಾಯಿಂದಲೇ ಹೊರ ಬಂದರೆ ಕರ್ನಾಟಕದಲ್ಲಿ ಬಿಜೆಪಿ ಮಾನ ಹರಾಜಾಗುತ್ತದೆ. ಅದು ಎಸ್ಎಂಕೆ ಶಿಷ್ಯ ಡಿ.ಕೆ ಶಿವಕುಮಾರ್ ಅವರಿಗೂ ವರವಾಗುತ್ತದೆ. ತನ್ನ ಮೇಲೆ ಬಿಜೆಪಿ ಸೇರಬೇಕೆಂಬ ಒತ್ತಡ ಹೇರಿ ಐಟಿ ದಾಳಿಯ ಬೆದರಿಕೆ ಹಾಕಲಾಗಿದೆ ಅನ್ನುವ ಮೂಲಕ ಅವರೂ ಕೂಡಾ ಸಿಂಪಥಿ ಗಿಟ್ಟಿಸಿಕೊಳ್ಳುವ ಸಾಧ್ಯತೆಗಳಿದ್ದಾವೆ. ಹೀಗೇನಾದರೂ ಆದರೆ ರಾಜ್ಯದಲ್ಲದು ಬಿಜೆಪಿಗೆ ದೊಡ್ಡ ಹಿನ್ನಡೆ.
ಇಂಥಾ ಮುಲಾಜುಗಳಿಂದ ಬಿಜೆಪಿ ಮಂದಿ ಓಲೈಸಿಕೊಂಡು ಒಂದೊಳ್ಳೆ ಅಧಿಕಾರ ಕೊಟ್ಟಾರೆಂಬ ಪ್ಲಾನು ಕೃಷ್ಣರ ಮೆದುಳಿನಲ್ಲಿದ್ದರೆ ಅಚ್ಚರಿ ಪಡುವಂಥಾದ್ದೇನೂ ಇಲ್ಲ. ಯಾಕೆಂದರೆ ಈ ಬಾರಿ ಕಾಂಗ್ರೆಸ್ಗೆ ಬಂದರೂ ರಾಜ್ಯಾಧಿಕಾರ ಹಿಡಿಯುವುದು ಡೌಟು. ಇನ್ನು ಕೇಂದ್ರದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಪಡೆಯುವಷ್ಟರಲ್ಲಿ ತಮ್ಮ ಆಯುಷ್ಯದ ವ್ಯಾಲಿಡಿಟಿ ಉಳಿದಿರುತ್ತದೆ ಎಂಬ ನಂಬಿಕೆ ಖುದ್ದು ಕೃಷ್ಣರಿಗೇ ಇಲ್ಲ. ರಾಜ್ಯದ ಕಥೆ ಏನೋ ಆದರೆ ಕೇಂದ್ರದಲ್ಲಂತೂ ಬೇರು ಗಟ್ಟಿ ಮಾಡಿಕೊಂಡಿರುವ ಬಿಜೆಪಿ ಜೊತೆಗಿದ್ದರೇನೇ ಅಧಿಕಾರದ ದೃಷ್ಟಿಯಿಂದ ಸೇಫು ಎಂಬಂಥಾ ಲೆಕ್ಕಾಚಾರವೂ ಕೃಷ್ಣರಿಗಿದೆ. ಆದ್ದರಿಂದಲೇ ಅವರು ಕಾಂಗ್ರೆಸ್ಗೆ ಕಾಲೆತ್ತಿಟ್ಟಂತೆ ಮಾಡಿ ಬಿಜೆಪಿ ಮಂದಿ ಬಂದು ಓಲೈಸೋದನ್ನೇ ಎದುರು ನೋಡುತ್ತಿದ್ದಾರೆ ಎಂಬಂಥಾ ವಾತಾವರಣವೇ ದಟ್ಟವಾಗಿದೆ.
ಅಧಿಕಾರಕ್ಕಾಗಿ ಹಪಾಹಪಿಸುವುದು ಕೃಷ್ಣರ ವ್ಯಕ್ತಿತ್ವದ ಟ್ರೇಡ್ ಮಾರ್ಕು. ಕಳೆದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯಸಭಾ ಸದಸ್ಯರ ಆಯ್ಕೆ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ತೀವ್ರ ಕದನ ಚಾಲ್ತಿಯಲ್ಲಿತ್ತಲ್ಲಾ? ಆ ಹಂತದಲ್ಲಿಯೇ ಕೃಷ್ಣ ಆ ಕಾಲಕ್ಕೆ ತಾವಿದ್ದ ಕಾಂಗ್ರೆಸ್ ವಿರುದ್ಧ ಕೊತಗುಡಲಾರಂಭಿಸಿದ್ದರು. ಆಗ ಹರಿದು ಹಂಚಿ ಹೋದಂತಿದ್ದ ಕಾಂಗ್ರೆಸ್ ನಾಯಕರೆಲ್ಲ ತಂತಮ್ಮ ಬಣದ ಮಂದಿಯೇ ರಾಜ್ಯಸಭಾ ಸದಸ್ಯರಾಗಬೇಕೆಂದು ತಿಪ್ಪರಲಾಗ ಹಾಕುತ್ತಿದ್ದರು. ಆ ಕಾಲದಿಂದಲೂ ರಾಜ್ಯ ಕಾಂಗ್ರೆಸ್ ಎಣಿಸಲು ಜಿಗುಪ್ಸೆ ಬರುವಷ್ಟು ಹೋಳಾಗಿದೆಯಾದರೂ ಮೇಲುನೋಟಕ್ಕೆ ಸಿದ್ದು ಮತ್ತು ಸಿದ್ದು ವಿರೋಧಿ ಬಣಗಳು ಸ್ಪಷ್ಟವಾಗಿ ಚಾಲ್ತಿಯಲ್ಲಿವೆ. ಸಿದ್ದು ಮಾತ್ರ ತಮ್ಮದೇ ಬಣ ಮೇಲುಗೈ ಸಾಧಿಸುವಂತೆ ನೋಡಿಕೊಂಡು ವಿರೋಧಿಗಳನ್ನ ಹಣಿಯಲು ರಣೋತ್ಸಾಹ ತೋರುತ್ತಿದ್ದಾರೆ. ಪರಮೇಶ್ವರ್ ವಿಚಾರದಲ್ಲಿ ಕೊಂಚ ಹಿನ್ನಡೆ ಆದಂತೆ ಕಾಣಿಸಿದರೂ ಸಹ ಸಿದ್ದು ಮತ್ತೆಲ್ಲ ವಿಚಾರಗಳಲ್ಲಿಯೂ ಗೆದ್ದಿದ್ದಾರೆ. ಈ ಬಣ ಬಡಿದಾಟಗಳಲ್ಲಿ ಹಿರಿಯ ಮುತ್ಸದ್ದಿ ಎಸ್.ಎಂ. ಕೃಷ್ಣ ಅಕ್ಷರಶಃ ಮೂಲೆಗುಂಪಾಗಿದ್ದರು. ಹೀಗೆ ಹಿರಿಯ ನಾಯಕನನ್ನು ಕಡೆಗಣಿಸಿದ ಒಂದು ಪಟಾಲಂ ರಣ ಕೇಕೆ ಹಾಕುತ್ತಿದ್ದರೆ, ಇನ್ನೊಂದು ಗುಂಪು ಕೊತಕೊತ ಕುದಿಯಲು ಶುರುವಿಟ್ಟಿತ್ತು!
ಕಳೆದ ಬಾರಿ ಕಾಂಗ್ರೆಸ್ನಿಂದ ಕೃಷ್ಣರಿಗೆ ರಾಜ್ಯಸಭಾ ಸದಸ್ಯತ್ವ ಸಿಗೋದು ಗ್ಯಾರೆಂಟಿ ಎಂಬ ವಾತಾವರಣ ಕಡೇತನಕವೂ ಚಾಲ್ತಿಯಲ್ಲಿತ್ತು. ಆದರೆ ರಾಜ್ಯಸಭೆ ಪ್ರವೇಶದ ಅವಕಾಶ ತಪ್ಪುವುದರೊಂದಿಗೆ, ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ತಮ್ಮದೇ ಚಾಪು ಮೂಡಿಸಿರುವ ಕೃಷ್ಣ ಅವರ ಸುದೀರ್ಘ ರಾಜಕೀಯ ಅಧ್ಯಾಯಕ್ಕೆ ಶಾಶ್ವತ ಅಂತ್ಯವಾಗಿತ್ತು. ರಾಜಕಾರಣದಲ್ಲಿ ನಿವೃತ್ತಿಯ ವಿಚಾರವೇ ಇಲ್ಲ. ಅದರಲ್ಲೂ ಕೃಷ್ಣರ ವಿಒಚಾರದಲ್ಲಿಯಂತೂ ನಿವೃತ್ತಿಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಕೈಯಲ್ಲಿ ಊರುಗೋಲು ಹಿಡಿದಾದರೂ ಕುರ್ಚಿ ಹತ್ತುವ ಹುಮ್ಮಸ್ಸು ಅವರಿಗೆ ಯಾವಾಗಲೂ ಇದ್ದೇ ಇರುತ್ತದೆ. ಅಂಥಾ ಕೃಷ್ಣ ಅವರ ಸಕ್ರಿಯ ರಾಜಕಾರಣದ ಯುಗಾಂತ್ಯಕ್ಕೆ ಕಾಂಗ್ರೆಸ್ ಹೈಕಮಾಂಡ್ ಬಲವಂತದಿಂದಲೇ ಮುಂದಾಗಿತ್ತು. ಪ್ರಬಲ ಒಕ್ಕಲಿಗ ಸಮುದಾಯದ ನಾಯಕರಾಗಿದ್ದ ಕೃಷ್ಣ, ರಾಜ್ಯಸಭೆಗೆ ಮರು ಆಯ್ಕೆಯಾಗುತ್ತಾರೆಂದೇ ಭಾವಿಸಲಾಗಿತ್ತು. ಆದರೆ, ಅನಿರೀಕ್ಷಿತವಾಗಿ ಯುಪಿಎ ಸಂಪುಟದಿಂದ ಅವರನ್ನು ಬಿಡುಗಡೆಗೊಳಿಸಿದ ಮಾದರಿಯಲ್ಲೆ ರಾಜ್ಯಸಭೆ ಸದಸ್ಯತ್ವದಿಂದಲೂ ದೂರ ಇರಿಸಲಾಗಿತ್ತು. ಏಕಕಾಲಕ್ಕೆ ಕೃಷ್ಣ ಅವರ ಮೂಗು ತೂರಿಸುವಿಕೆಯನ್ನು ತಗ್ಗಿಸುವುದು ಹಾಗೂ ಹೊಸಬರಿಗೆ ಆದ್ಯತೆ ಕೊಡಬೇಕೆನ್ನುವ ಮೂಲಕ ಸಿದ್ದರಾಮಯ್ಯ ನಾಜೂಕಿನಿಂದಲೇ ಕೃಷ್ಣರನ್ನು ಸೈಡಿಗೆ ಸರಿಸಿದ್ದರು.
ಅಷ್ಟಕ್ಕೂ ಕೃಷ್ಣ ಕಾಂಗ್ರೆಸ್ ಹೈಕಮಾಂಡ್ ವಲಯದಲ್ಲಿ ಭಾರೀ ಪ್ರಭಾವ ಹೊಂದಿದ್ದರು. ಅದಕ್ಕೆ ಮುತ್ಸದ್ದಿತನವೂ ಜೊತೆಯಾಗಿ ಅವರು ಕೇಂದ್ರ ಸಚಿವರಾಗಿಯೂ ಜವಾಬ್ಧಾರಿ ನಿಭಾಯಿಸಿದ್ದರು. ೧೯೯೯ರಲ್ಲಿ ಪಾಂಚಜನ್ಯ ಮೊಳಗಿಸಿ ಕೆಪಿಸಿಸಿಯ ಚುಕ್ಕಾಣಿ ಹಿಡಿದು ಹೊರಟಿದ್ದ ಅವರು, ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದರು. ಪ್ರತಿಷ್ಠಿತ ವಿದೇಶಾಂಗ ವ್ಯವಹಾರಗಳ ಖಾತೆ ವಹಿಸಿಕೊಂಡಿದ್ದರು. ಅದನ್ನೆಲ್ಲ ಒಂದು ಮಟ್ಟಕ್ಕೆ ಸಮರ್ಥವಾಗಿಯೇ ನಿಭಾಯಿಸಿದ್ದರು. ಆದರೆ, ಇಷ್ಟೆಲ್ಲ ಬಲ ಹೊಂದಿರುವ ಕೃಷ್ಣ ಇದ್ದಕ್ಕಿದ್ದಂತೆ ಕಾಂಗ್ರೆಸ್ ವರಿಷ್ಠರಿಗೆ ಬೇಡವಾದುದರ ಹಿಂದೆ ಕಾಂಗ್ರೆಸ್ನ ಒಂದು ಬಣದ ಮಂದಿಯ ಆಟಗಳೇ ಕಾರಣವೆಂಬುದು ಬಹಿರಂಗ ಸತ್ಯ. ಆದರೆ ಬೇಕಾದ ಎಲ್ಲ ಅಧಿಕಾರಗಳನ್ನೂ ಪಕ್ಷದಿಂದ ಅನುಭವಿಸಿ, ವಯೋ ಸಹಜವಾದ ಬಾಧೆಗಳಿಗೆ ತುತ್ತಾಗಿದ್ದ ಕೃಷ್ಣರನ್ನು ಸುಮ್ಮನಿರಿಸಲು ಕಾಂಗ್ರೆಸ್ ವರಿಷ್ಠರ ಬಳಿ ಯಾವ ದಾರಿಗಳೂ ಇರಲಿಲ್ಲ. ಅಷ್ಟಕ್ಕೂ ಕೃಷ್ಣ ರಾಜ್ಯಸಭಾ ಸದಸ್ಯತ್ವ ಸಿಕ್ಕಿದ್ದರೆ ಸಚವಗಿರಿಯ ಮೇಲೆ ಕಣ್ಣಿಡುತ್ತಿದ್ದರು. ಆದರೆ ಅರ್ಹರನೇಕರು ಸಾಲುಗಟ್ಟಿ ನಿಂತಿರುವಾಗ ಕೃಷ್ಣಗೇ ಪದೇ ಪದೆ ಸಚಿವ ಸ್ಥಾನ ಕೊಡುವಂತೆಯೂ ಇರಲಿಲ್ಲ. ಕೊಟ್ಟರೆ ಅದನ್ನು ನಿಭಾಯಿಸುವ ದೈಹಿಕ ಸ್ಥಿತಿಯಲ್ಲಿಯೂ ಕೃಷ್ಣ ಅವರಿರಲಿಲ್ಲ!
ಅಂತೂ ರಾಜಕೀಯ ಅಧಿಕಾರಕ್ಕಾಗಿ ಬಡಿದಾಡುತ್ತಲೇ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಪೂರೈಸಿದ್ದ ಕೃಷ್ಣ ಅವರಿಗೆ ಲಾಗಾಯ್ತಿನಿಂದಲೂ ಅಧಿಕಾರವೇ ಮುಖ್ಯ. ೨೦೦೪ ರಲ್ಲಿ ಸ್ವಕ್ಷೇತ್ರ ಮದ್ದೂರನ್ನು ಕಡೆಗಣ್ಣಿನಿಂದಲೂ ನೋಡದೆ ಬೆಂಗಳೂರಿನ ಚಾಮರಾಜಪೇಟೆಗೆ ವರ್ಗಾವಣೆಗೊಂಡಿದ್ದರು. ಅಂದಿನ ಚುನಾವಣೆಯ ನಂತರದ ಸಮ್ಮಿಶ್ರ ಸರಕಾರದ ಪರ್ವದಲ್ಲಿ ಅಪ್ರಸ್ತುತರಾಗಿದ್ದ ಕೃಷ್ಣ ಅವರಿಗೆ ಮಹಾರಾಷ್ಟ್ರ ರಾಜ್ಯಪಾಲರ ಪಟ್ಟ ಕಟ್ಟಲಾಗಿತ್ತು. ರಾಜಭವನ ತೊರೆದು ವಾಪಸಾದ ಅವರು, ಇಸ್ವಿ ೨೦೦೮ ರ ಚುನಾವಣೆಯ ನೇತೃತ್ವದ ಆಕಾಂಕ್ಷೆ ಹೊಂದಿದ್ದರೂ ವರಿಷ್ಠರು ಅಸ್ತು ಎಂದಿರಲಿಲ್ಲ. ಆದರೆ, ಇಸ್ವಿ ೨೦೦೯ ರಲ್ಲಿ ಎರಡನೇ ಬಾರಿಗೆ ಯುಪಿಎ ಮೈತ್ರಿಕೂಟ ಸರಕಾರ ರಚನೆಯಾದಾಗ ವಿದೇಶಾಂಗ ಖಾತೆ ಒಲಿದಿತ್ತು. ಆಗ ಎಂಬತ್ತರ ಆಸುಪಾಸಿನ ವಯೋಮಾನದ ಕೃಷ್ಣ, ನವಯುವಕನಂತೆ ನೂರಾರು ದೇಶ ಸುತ್ತಾಡಿ ದ್ವಿಪಕ್ಷೀಯ ಸಂಧಾನ ನಡೆಸಿದ್ದರು. ಆದರೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯೊಂದರಲ್ಲಿ ಪೋರ್ಚುಗಲ್ ದೇಶದ ಸಚಿವರ ಭಾಷಣವನ್ನು ವಾಚಿಸಲು ತೊಡಗಿ ಮುಜುಗರಕ್ಕೆ ಈಡಾಗಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾದದ್ದಲ್ಲದೆ, ಕಾಂಗ್ರೆಸ್ಗೂ ಇರಸುಮುರಿಸು ತಂದಿತ್ತು. ನಂತರದ ಬೆಳವಣಿಗೆಯಲ್ಲಿ ಸಂಪುಟ ವಿಸ್ತರಣೆಗೆ ಒಂದು ದಿನ ಮೊದಲು ಕೃಷ್ಣ ಅವರಿಂದ ರಾಜೀನಾಮೆ ತೆಗೆದುಕೊಳ್ಳಲಾಯಿತು. ಅಲ್ಲಿಂದ ರಾಜ್ಯದತ್ತ ಹೊರಳಿದ ಅವರು, ೨೦೧೩ರ ವಿಧಾನಸಭೆ ಚುನಾವಣೆಯಲ್ಲಿ ಮಹತ್ವದ ಭೂಮಿಕೆ ನಿಭಾಯಿಸುತ್ತಾರೆಂದು ಬೆಂಬಲಿಗರು ನಿರೀಕ್ಷಿಸಿದ್ದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೃಷ್ಣ ಅವರನ್ನು ನಿರ್ದಿಷ್ಟ ಅಂತರದಲ್ಲೆ ಇರಿಸಿದ ಹೈಕಮಾಂಡ್, ಯಾವ ಹೊಣೆಗಾರಿಕೆಯನ್ನೂ ವಹಿಸಲಿಲ್ಲ. ಕೃಷ್ಣ ಕೂಡ ಪಕ್ಷದ ಕಡೆಯಿಂದ ಅಧಿಕೃತ ಆಹ್ವಾನ ಬರುವ ವರೆಗೆ ಪ್ರಚಾರಕ್ಕೂ ತೆರಳಲಿಲ್ಲ. ಇತ್ತೀಚಿನ ಲೋಕಸಭೆ ಚುನಾವಣೆಯಲ್ಲೂ ಇದು ಪುನರಾವರ್ತನೆಯಾಗಿತ್ತು. ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಭೇಟಿಯಾದ ಬಳಿಕವೇ ಅವರು, ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ತವರು ಜಿಲ್ಲೆ ಮಂಡ್ಯದಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ದಡ ಸೇರಿಸಲು ಆಗಲಿಲ್ಲ. ಕೃಷ್ಣರಿಂದಲೇ ಐಟಿ, ಬಿಟಿಯಲ್ಲಿ ಉತ್ತುಂಗಕ್ಕೆ ಏರಿರುವ ಬೆಂಗಳೂರಿನ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಮುಗ್ಗರಿಸಿತ್ತು. ಅಲ್ಲದೆ, ಮದ್ದೂರು ಕ್ಷೇತ್ರವನ್ನು ತ್ಯಜಿಸಿದಾಗಲೇ ಮಂಡ್ಯದ ರಾಜಕಾರಣವು ಕೃಷ್ಣ ಅವರ ಕೈಜಾರಿದೆ. ಹೀಗಾಗಿ ವಿಧಾನಸಭೆ, ಲೋಕಸಭೆ, ಸ್ಥಳೀಯ ಹಂತದ ಯಾವುದೇ ಚುನಾವಣೆಗಳಲ್ಲಿ ಕೃಷ್ಣ ಅವರಿಂದ ಪಕ್ಷಕ್ಕೆ ಕಾಣಿಕೆ ಸಲ್ಲಿಕೆಯಾಗಲಿಲ್ಲ. ಒಂದು ಹಂತದಲ್ಲಿ ಕೆಪಿಸಿಸಿಯನ್ನು ವಿಕೇಂದ್ರೀಕರಿಸಿದ್ದ ಎಐಸಿಸಿ, ಅಂದಿನ ಕೇಂದ್ರ ಸಚಿವರನ್ನು ವಲಯವಾರು ಸಂಘಟನೆಗೆ ನಿಯುಕ್ತಿಗೊಳಿಸಿತ್ತು. ಆಗಲೂ ಪಕ್ಷಕ್ಕೆ ಶಕ್ತಿ ತುಂಬಲು ಕೃಷ್ಣ ಲಕ್ಷ್ಯ ಕೊಟ್ಟಿರಲಿಲ್ಲ ಎನ್ನುವ ಅಪವಾದ ಅವರಿಗೆ ಅಂಟಿಕೊಂಡಿದೆ.
ಇವೆಲ್ಲವನ್ನೂ ಮೌನವಾಗಿಯೇ ಗ್ರಹಿಸಿಕೊಂಡಿದ್ದ ಹೈಕಮಾಂಡ್, ಸಮಯ ಸಾಧಿಸಿ ಕೃಷ್ಣ ಅವರಿಗೆ ವಿಶ್ರಾಂತಿಯ ನಿಚ್ಚಳ ಸಂದೇಶ ರವಾನಿಸಿತ್ತು. ಹೀಗಾಗಿ ರಾಜ್ಯ ಕಾಂಗ್ರೆಸ್ನ ಸಾರಥ್ಯ ವಹಿಸಿದ್ದ ಹಾಗೂ ಮತ್ತೆಮತ್ತೆ ಸಾರಥಿಯ ಪೀಠದಲ್ಲಿ ವಿರಾಜಮಾನರಾಗುತ್ತಾರೆಂದು ಬಿಂಬಿತರಾಗುತ್ತಿದ್ದ ಕೃಷ್ಣ, ಯುದ್ಧ ಮುಗಿಸಿದ ಮಹಾರಥಿಯಂತೆ ಬಿಡದಿಯತ್ತ ಸರಿದು ಹೋಗಿದ್ದರು. ರಾಜ ಗಾಂಭೀರ್ಯದಲ್ಲೆ ತೆರೆಯಮರೆಗೆ ಸರಿಯಲು ಹೈಕಮಾಂಡ್ ಅವಕಾಶ ನೀಡಬಹುದಿತ್ತು ಎನ್ನುವುದು ಅವರ ಬೆಂಬಲಿಗರು, ಅಭಿಮಾನಿಗಳನ್ನು ಕಾಡುತ್ತಿರುವ ದುಃಖವಾಗಿದ್ದರೆ, ಅವರೇ ಘನತೆಯಿಂದ ಮರೆಗೆ ಸರಿಯ ಬಹುದಿತ್ತೆಂದು ಈ ನೆಲದ ಪ್ರಜ್ಞಾವಂತರು ಅಭಿಪ್ರಾಯ ಪಡುತ್ತಿದ್ದಾರೆ. ಆದರೆ ಕೃಷ್ಣ ಅವರೊಳಗಿನ ಅಧಿಕಾರದ ಪಿತ್ಥ ಎಂಭತ್ತರಾಚೆಗೂ ಇನ್ನೂ ನಿಗಿನಿಗಿಸುತ್ತಲೇ ಇದೆ. ಆದ್ದರಿಂದಲೇ ಈ ವಿಧಾನ ಸಭಾ ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಯಿಂದ ಮತ್ತೆ ಮೇಲೆದ್ದು ಬರುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ.
ಈಗಿರೋ ವಾತಾವರಣದ ಪ್ರಕಾರ ಹೇಳೋದಾದರೆ, ಅಧಿಕಾರ ಸಿಕ್ಕರೆ ಕಡೇ ಕ್ಷಣದಲ್ಲಿ ನಿರ್ಧಾರ ಬದಲಿಸಿಕೊಂಡಾದರೂ ಕೃಷ್ಣ ಬಿಜೆಪಿಯಲ್ಲೇ ಉಳಿಯುತ್ತಾರೆ. ಅದಿಲ್ಲವಾದರೆ ಕಾಂಗ್ರೆಸ್ಗೆ ಮರಳುತ್ತಾರೆ. ಅವರು ಬಿಜೆಪಿಯಲ್ಲಿದ್ದರೂ, ಕಾಂಗ್ರೆಸ್ಗೆ ಮರಳಿದರೂ ಅಧಿಕಾರ ಮಾತ್ರ ಮರೀಚಿಕೆ ಎಂಬುದು ಮಾತ್ರ ದುರಂತ ವಾಸ್ತವ. ಕೃಷ್ಣ ಅವರಿಗೀಗ ಇಳಿ ವಯಸ್ಸು. ಆದರೆ ಹುರುಪಿನ ಕಾಲವನ್ನೆಲ್ಲ ಮಿರಮಿರ ಮಿಂಚುತ್ತಾ, ಆಯಕಟ್ಟಿನ ಅಧಿಕಾರ ಅನುಭವಿಸುತ್ತಾ ಸಾಗಿರುವ ಅವರ ಪಾಲಿಗೆ ಕಾಂಗ್ರೆಸ್ನಲ್ಲಿಯೇ ಮುಂದುವರೆದು ಒಂದಷ್ಟು ಗೌರವವನ್ನಾದರೂ ಉಳಿಸಿಕೊಂಡು ಹೋಗುವ ಇರಾದೆ ಇದ್ದಂತಿದೆ. ಕನಿಷ್ಠಪಕ್ಷ ಕಾಂಗ್ರೆಸ್ಸಿನಲ್ಲಿ ಹಿರೀಕನೆಂಬ ಗೌರವಾಧರಗಳಾದರೂ ಸಿಕ್ಕಿಯಾವೆಂಬ ಕ್ಷೀಣ ಆಸೆಯೊಂದು ಆ ವೃದ್ಧ ಜೀವದೊಳಗೆ ಸ್ಫುರಿಸುತ್ತಿರುವಂತಿದೆ. ಒಂದು ಕಾಲದಲ್ಲಿ ಕೃಷ್ಣ ಬೆಂಗಳೂರನ್ನು ಸಿಂಗಾಪುರ ಮಾಡೋದಾಗಿ ಬಿಲ್ಡಪ್ಪು ಪಡೆದುಕೊಂಡಿದ್ದರು. ಆ ನಗರಿಯ ಹರುಕು ಫುಟ್ಪಾತುಗಳು ಅಧಿಕಾರ ಕಾಲದಲ್ಲಿಯೇ ಖುದ್ದು ಅವರನ್ನೇ ಅಣಕಿಸುತ್ತಿದ್ದವು. ಈವತ್ತಿಗೆ ಕೃಷ್ಣರ ಕನಸಿನ ಸಿಂಗಾಪುರದಂಥಾ ಬೆಂಗಳೂರು ಬಹುಪಾಲು ಮುಳುಗಿದೆ. ಅವರ ರಾಜಕೀಯ ಬದುಕೂ ಕೂಡಾ ಅದಕ್ಕೆ ಪೂರಕವಾಗಿಯೇ ಇದೆ. ಈ ಎಲ್ಲ ಪಲ್ಲಟಗಳ ಅಸಲೀ ವಿಚಾರ ಇಷ್ಟರಲ್ಲಿಯೇ ಜಾಹೀರಾಗಲಿದೆ.