ಇಡೀ ಭಾರತವೇ ಇದೀಗ ನಾನಾ ಸಮಸ್ಯೆಗಳ ಸಂಕೋಲೆಯಲ್ಲಿ ಸಿಲುಕಿ ನರಳಾಡುತ್ತಿದೆ. ಕೊರೋನಾದಂಥಾ ಮಹಾಮಾರಿ ಬಂದಾದ ಮೇಲಂತೂ, ಇಚ್ಛಾಶಕ್ತಿಯುಳ್ಳ ನಾಯಕತ್ವ ಇದ್ದರೆ ಮಾತ್ರವೇ ಚೇತರಿಸಿಕೊಳ್ಳಲು ಸಾಧ್ಯ. ಆದರೆ, ಆ ಜಾಗವನ್ನು ನರೇಂದ್ರ ಮೋದಿಯಂಥಾ ಶೋಮ್ಯಾನುಗಳು ಆವರಿಸಿಕೊಂಡಿರುವಾಗ, ಪರಿಸ್ಥಿತಿ ತಹಬಂದಿಗೆ ಬರುತ್ತದೆಂಬ ನಿರೀಕ್ಷೆ ಇಟ್ಟುಕೊಳ್ಳುವುದೂ ಮೂರ್ಖತನವೆನ್ನಿಸುತ್ತೆ. ಇಡೀ ಇಂಡಿಯಾದ ಆತ್ಮದಂತಿರುವ ಹಳ್ಳಿಗಳಲ್ಲಿ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಅವ್ಯವಸ್ಥೆಗಳು ಕಾಲು ಚಾಚಿ ಕೂತಿವೆ. ಮೂಲಭೂತ ಸೌಕರ್ಯಗಳು ಇನ್ನೂ ಅಂಥಾ ಹಳ್ಳಿ ಹಾದಿಯತ್ತ ಮುಖ ಮಾಡಿಲ್ಲ. ವಾಸ್ತವ ಹೀಗಿರುವಾಗ ಮೋದಿ ಭಕ್ತರು ಭಾರತ ವಿಶ್ವಗುರು ಎಂಬಂತೆ ಪುಂಗುತ್ತಿರೋದೇ ಪರಮ ಕಾಮಿಡಿಯಂತೆ ಕಾಣುತ್ತಿರೋದರಲ್ಲಿ ಅತಿಶಯವಾದ್ದೇನೂ ಇಲ್ಲ!
ಬಡ ಭಾರತವನ್ನು ಬಲಿಷ್ಟವಾಗಿದೆಯೆಂದು ತೋರಿಸುವ ಕಸರತ್ತನ್ನು ಎರಡನೇ ಅವಧಿಯ ನಂತರ ಮೋದಿ ಪಡೆ ವ್ಯವಸ್ಥಿತವಾಗಿಯೇ ಮಾಡುತ್ತಾ ಬಂದಿದೆ. ಅದರ ನಡುವೆಯೂ ಸಾಮಾಜಿಕ ಜಾಲತಾಣಗಳ ದೆಸೆಯಿಂದ ಅಸಲೀ ಭಾರತದ ದಾರುಣಗಾಥೆಗಳು ಆಗಾಗ ಜಾಹೀರಾಗುತ್ತಿರುತ್ತವೆ. ಅಷ್ಟಾದರೂ ಮೋದಿ ಪ್ರಣೀತ ಮುಸುರೆ ಮಾಧ್ಯಮಗಳು ಅದರತ್ತ ಮೌನ ತಾಳುತ್ತವೆ. ಅದೇ ಹೊತ್ತಿನಲ್ಲಿ ಪ್ರಧಾನ ಸೇವಕನನ್ನು ಬಾಹುಬಲಿಯಂತೆ ಬಿಂಬಿಸುವ ವ್ಯರ್ಥ ಕಸರತ್ತಿನಲ್ಲಿ ಕಳೆದು ಹೋಗುತ್ತವೆ. ಇದೆಲ್ಲದರಾಚೆಗೆ ಅದೆಲ್ಲೋ ಪುಟ್ಟ ಮಗುವಿನ ಶವ ಸಾಗಿಸಲೂ ಕಾಸಿಲ್ಲದ ಬಡಪಾಯಿ ತಂದೆಯೊಬ್ಬನ ಕರುಳ ಸಂಕಟ ಮಾರ್ಧನಿಸುತ್ತದೆ. ಆಂಬ್ಯುಲೆನ್ಸಿಗೆ ಕಾಸಿಲ್ಲದೆ ಹೆಂಡತಿಯ ಶವ ಹೊತ್ತು ಹಳ್ಳಿಗೆ ಸಾಗಿದ ಬಡಪಾಯಿಯ ಒಡಲ ಉರಿ ನಿಗಿನಿಗಿಸುತ್ತದೆ.
ಇದೀಗ ಮಹಾರಾಷ್ಟ್ರದ ಫಾಲ್ಗಾರ್ ಅರಣ್ಯ ಪ್ರದೇಶದ ಒಡಲಿನಲ್ಲಿರುವ ಹಳ್ಳಿಯೊಂದರಲ್ಲಿ ನಿಜವಾದ ಭಾರತದ ಚಿತ್ರಣಗಳು ಬಯಲಾಗಿವೆ. ಆ ಹಳ್ಳಿಗೂ, ಪಟ್ಟಣಕ್ಕೂ ಕಿಲೋಮೀಟರ್ಗಟ್ಟಲೆ ದೂರವಿದೆ. ಬುಡಕಟ್ಟು ಜನಾಂಗದ ಮಂದಿ ಒಂದಷ್ಟು ನಾಗರಿಕತೆಗೆ ಒಗ್ಗಿಕೊಂಡು ಆ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಆದರೆ ಅದೇನೇ ಮನವಿಕೊಟ್ಟರೂ ಕೂಡಾ ಈವತ್ತಿಗೂ ಆ ಊರಿಗೆ ಕಾಲು ದಾರಿಯೇ ಗತಿಯೆಂಬಂತಾಗಿದೆ. ಇಂಥಾ ಊರಿನಲ್ಲಿ ಯಾರಿಗೆ ರೋಗ ಬಾಧಿಸಿದರೂ ಬೆಡ್ಶೀಟಿನಲ್ಲಿ ಕಟ್ಟಿ ಹೊತ್ತೊಯ್ಯದೇ ಬೇರೆ ದಾರಿಗಳಿಲ್ಲ. ಹೀಗೆಯೇ ಇತ್ತೀಚೆಗೆ ಬಸುರಿಯೊಬ್ಬಳಿಗೆ ನೋವು ಬಂದಿದೆ. ಗ್ರಾಮಸ್ಥರು ಮಾಮೂಲಿನಂತೆ ಕಾಡು ದಾರಿಯಲ್ಲಿ ಆಕೆಯನ್ನು ಆಸ್ಪತ್ರೆಗೆಂದು ಹೊತ್ತು ನಡೆದಿದ್ದಾರೆ. ಆದರೆ ಕಾಡಿನ ಮಧ್ಯದಲ್ಲಿಯೇ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಸರಿಯಾದ ಚಿಕಿತ್ಸೆ ಸಿಗದೆ ನಿತ್ರಾಣಳಾಗಿ, ಹೇಗೋ ಬಚಾವಾಗಿದ್ದಾಳೆ.
ಇಂಥಾದ್ದೊಂದು ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ. ವಾಸ್ತವವೆಂದರೆ ಇದಕ್ಕಿಂತಲೂ ದಟ್ಟ ದರಿದ್ರ ಸ್ಥಿತಿಯಲ್ಲಿ ಈವತ್ತಿಗೂ ಭಾರತದ ಸಾವಿರಾರು ಹಳ್ಳಿಗಳಿದ್ದಾವೆ. ನಮ್ಮ ರಾಜ್ಯದಲ್ಲಿಯೇ ಅದಕ್ಕೆ ದಂಡಿ ದಂಡಿ ಉದಾಹರಣೆಗಳು ಸಿಗುತ್ತವೆ. ಅವೆಲ್ಲವನ್ನೂ ಪರಿಹರಿಸಿ, ಹಳ್ಳಿ ಹಳ್ಳಿಯೂ ಅಭಿವೃದ್ಧಿ ಹಬ್ಬುವಂತೆ ಮಾಡಿದರೆ ನಿಜಕ್ಕೂ ಭಾರತ ವಿಶ್ವಗುರುವಾಗಬಹುದು. ಬರೀ ಭಾಷಣ ಬಜಾಯಿಸೋದರಿಂದ ಭಾರತ ವಿಶ್ವಗುರುವಾಗುತ್ತದೆಂದು ಯಾವನಾದರೂ ಭಾವಿಸಿದ್ದರೆ ಆತನಷ್ಟು ಮೂರ್ಖ ಬೇರೊಬ್ಬನಿಲ್ಲ ಎಂದೇ ಅರ್ಥ. ದುರಂತವೆಂದರೆ, ಮೋದಿ ಮಹಾತ್ಮರು ಲಕ್ಷಣವಾಗಿ ಪ್ರೋಟೀನುಯುಕ್ತ ಅಣಬೆ ಮೆಲ್ಲುತ್ತಾ, ಆ ಎನರ್ಜಿಯನ್ನು ಸುಳ್ಳೇ ಭಾಷಣ ಒದರೋದಕ್ಕೆ ವಿನಿಯೋಗಿಸುತ್ತಾ ಮುಂದುವರೆಯುತ್ತಿದ್ದಾರೆ. ಅವರ ಮರ್ಜಿಗೆ ಬಿದ್ದ ಕೆಲ ಭಾಷಣಕೋರರು ಪ್ರಧಾನಿಯ ಅಸಮರ್ಥತೆಯನ್ನೂ, ಸಾಮರ್ಥ್ಯವನ್ನಾಗಿ ರೂಪಾಂತರಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಒಂದಲ್ಲಾ ಒಂದು ರೀತಿಯಲ್ಲಿ ಭಾರತದ ದಾರುಣ ಸ್ಥಿತಿ ಮಾತಾಡುತ್ತದೆ. ಭಾಷಣಕೋರರ ಅಸಲೀಯತ್ತನ್ನು ಬಗೆದು ಬಯಲಾಗಿಸುತ್ತದೆ…