ಭಾರತೀಯ ಚಿತ್ರರಂಗದ ಮೇರು ನಿರ್ದೇಶಕ ಮಣಿರತ್ನಂ. ತಾನೇ ಮುರಿಯಲು ಕಷ್ಟವಾಗುವಂಥಾ ಹಿಟ್ ದಾಖಲೆಗಳನ್ನು ಹೊಂದಿರುವ ಮಣಿರತ್ನಂ ನಮ್ಮ ನಡುವಿನ ಕ್ರಿಯಾಶೀಲ ನಿರ್ದೇಶಕರಲ್ಲಿಯೇ ಮುಂಚೂಣಿಯಲ್ಲಿರುವವರು. ಸಾಮಾನ್ಯವಾಗಿ ಒಂದು ಹಿಟ್ ಚಿತ್ರದಾಚೆಗೆ, ಆ ಗೆಲುವಿನ ಪ್ರಭೆಯನ್ನು ಮುಂದುವರೆಸಿಕೊಂಡು ಹೋಗುವುದು ಯಾರ ಪಾಲಿಗಾದರೂ ಸವಾಲಿನ ಸಂಗತಿಯೇ. ಕೆಲವರಂತೂ ಒಂದು ಹಿಟ್ ನಂತರದಲ್ಲಿ ಎದುರಾಗೋ ಆಘಾತದಿಂದ ತತ್ತರಿಸಿ ಅಕ್ಷರಶಃ ಮೂಲೆಗುಂಪಾಗಿಬಿಡೋದಿದೆ. ಆದರೆ ಮಣಿರತ್ನಂ ವೃತ್ತಿ ಬದುಕಿನ ಗ್ರಾಫಿನಲ್ಲಿ ಸಾಕಷ್ಟು ಏರಿಳಿತಗಳು ಕಾಣಿಸುತ್ತವೆ. ಅದ್ಯಾವುದರಿಂದಲೂ ವಿಚಲಿತರಾಗದೆ ಮತ್ತೆ ಹೊಸ ಹೊಸಾ ಅಚ್ಚರಿಗಳ ಮೂಲಕ ಮೇಲೆದ್ದು ನಿಲ್ಲುತ್ತಾ ಬಂದಿರೋದು ನಿಜವಾದ ವಿಶೇಷ. ಅಂಥಾದ್ದೊಂದು ಮಹಾನ್ ಅಚ್ಚರಿಯಂಥಾ ಚಿತ್ರ ‘ಪೊನ್ನಿಯಿನ್ ಸೆಲ್ವನ್’!
‘ಪೊನ್ನಿಯಿನ್ ಸೆಲ್ವನ್’ ಭಾರತೀಯ ಚಿತ್ರರಂಗವೆಲ್ಲ ಸಾರಾಸಗಟಾಗಿ ಕಣ್ಣರಳಿಸಿ ನೋಡುತ್ತಿರುವ, ಪ್ರೇಕ್ಷಕರಲ್ಲಿ ಗಾಢವಾದ ನಿರೀಕ್ಷೆ ಮೂಡಿಸಿರುವ ಚಿತ್ರ. ಒಂದು ಸಿನಿಮಾ ಆರಂಭಿಸಿದರೆಂದರೆ, ಅದನ್ನೊಂದು ಧ್ಯಾನದಂತೆ ಪರಿಭಾವಿಸುವವರು ಮಣಿರತ್ನಂ. ಅಂಥಾದ್ದೊಂದು ತಾದಾತ್ಮ್ಯದ ಶಿಖರ ಸ್ಥಿತಿಯಲ್ಲಿ ಅವರು ನಿರ್ದೇಶನ ಮಾಡಿರುವ ಚಿತ್ರ ‘ಪೊನ್ನಿಯಿನ್ ಸೆಲ್ವನ್’. ಬಹು ದೊಡ್ಡ ತಾರಾಗಣ, ಸ್ಟಾರ್ ನಟ ನಟಿಯರ zಂಡನ್ನೇ ಹೊಂದಿರುವ ಇದು ಮಲ್ಟಿ ಸ್ಟಾರರ್ ಚಿತ್ರ. ಈಗಾಗಲೇ ಅಷ್ಟದಿಕ್ಕುಗಳಿಂದಲೂ ಈ ಸಿನಿಮಾ ಬಗ್ಗೆ ಅಗಾಧ ನಿರೀಕ್ಷೆಗಳು ಕೇಳಿ ಬರುತ್ತಿವೆ. ತಮಿಳು ಚಿತ್ರೋದ್ಯಮದ ದಿಕ್ಕಿನಿಂದಂತೂ ಥ್ರಿಲ್ ಆಗಿಸುವಂಥಾ ಅಭಿಪ್ರಾಯಗಳೇ ಪಡಿಮೂಡಿಕೊಂಡಿವೆ. ಇದೀಗ ಬಂದಿರುವ ಸುದ್ದಿಯಂತೂ ಅಂಥಾ ಥ್ರಿಲ್ಲಿಗೆ ಮತ್ತಷ್ಟು ಆವೇಗ ಮೂಡಿಸುವಂತಿದೆ.
ಹಾಗೆ ನೋಡಿದರೆ, ಈ ಚಿತ್ರ ಸೂಪರ್ ಹಿಟ್ ಆಗುತ್ತದೆಂಬಂಥಾ ನಂಬಿಕೆ ಎಲ್ಲರಲ್ಲಿಯೂ ಇದೆ. ಅದು ಮೂಡಿ ಬಂದಿರುವ ಅದ್ದೂರಿಒ ಸ್ವರೂಪದ ಬಗೆಗಂತೂ ಊರು ತುಂಬಾ ಬೆರಗು ಹಬ್ಬಿಕೊಂಡಿದೆ. ಈ ಚಿತ್ರ ಓಟಿಟಿ ಪ್ಲಾಟ್ಫಾರ್ಮಿನಲ್ಲಿ ನೂರಾ ಇಪ್ಪತೈದು ಕೋಟಿಗೆ ಮಾರಾಟವಾಗೋದರ ಮೂಲಕ ಮಹಾ ದಾಖಲೆಯನ್ನೇ ಬರೆದಿದೆ. ಈ ಮೂಲಕ ನಿರ್ಮಾಪಕರೂ ಆಗಿರುವ ಮಣಿರತ್ನಂಗೆ ಮೊದಲ ಹಂತದ ಗೆಲುವು ಲಭಿಸಿದಂತಾಗಿದೆ. ಓಟಿಟಿಗೇ ಇಷ್ಟು ದೊಡ್ಡ ಮೊತ್ತದ ವ್ಯಾಪಾರ ಕುದುರಿಕೊಂಡಿರೋದು ಸದರಿ ಚಿತ್ರದ ಕಿಮ್ಮತ್ತಿನ ಕಂಟೆಂಟಿಗೊಂದು ಸಾಕ್ಷಿ. ಅಂದಹಾಗೆ, ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಗೊಳ್ಳಲಿರೋ ಪ್ಯಾನಿಂಡಿಯಾ ಮಟ್ಟದ್ದು. ಮೊದಲ ಭಾಗ ಇದೇ ಸೆಪ್ಟೆಂಬರ್ ಮೂವತ್ತರಂದು ದೇಶಾದ್ಯಂತ ಬಿಡುಗಡೆಗೊಳ್ಳಲಿದೆ. ಓಟಿಟಿ ವ್ಯವಹಾರದ ಖದರ್ ಕೇಳಿಯೇ ಮತ್ತಷ್ಟು ಪ್ರೇಕ್ಷಕರು ‘ಪೊನ್ನಿಯಿನ್ ಸೆಲ್ವನ್’ನತ್ತ ಚಿತ್ತ ಹಾಯಿಸಿದ್ದಾರೆ.
‘ಪೊನ್ನಿಯಿನ್ ಸೆಲ್ವನ್’ ಮಣಿರತ್ನಂ ವೃತ್ತಿ ಬದುಕಿನಲ್ಲಿಯೇ ಮಹತ್ತರವಾದ ಚಿತ್ರ. ಇದರ ಸ್ಕ್ರೀನ್ ಪ್ಲೇಯನ್ನು ಮಣಿರತ್ನಂ ಎಲಂಗೋ ಕುಮಾರವೇಲ್ ಜೊತೆಗೂಡಿ ರಚಿಸಿದ್ದಾರೆ. ಕಲ್ಕಿ ಕೃಷ್ಣಮೂರ್ತಿ ಅವರ ಕಾದಂಬರಿಯಾಧಾರಿತ ಈ ಚಿತ್ರದಲ್ಲಿ ಸ್ಟಾರ್ ನಟ ನಟಿಯರದ್ದೊಂದು ದಂಡೇ ಇದೆ. ಜಯಂ ರವಿ, ಕಾರ್ತಿ, ವಿಕ್ರಂ, ಐಶ್ವರ್ಯಾ ರೈ, ತ್ರಿಷಾ ಮುಂತಾದವರು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಹಿಂದೆ ಕನ್ನಡದ ಕೆಜಿಎಫ್ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಿರುಗಿತ್ತಲ್ಲಾ? ಆ ಹಿಸ್ಟರಿ ‘ಪೊನ್ನಿಯಿನ್ ಸೆಲ್ವನ್’ ವಿಚಾರದಲ್ಲಿ ಮತ್ತೆ ಮರುಕಳಿಸುವ ಕುರುಹುಗಳು ಸ್ಪಷ್ಟವಾಗಿಯೇ ಗೋಚರಿಸುತ್ತಿವೆ. ಅಂತೂ ಈ ಚಿತ್ರವೀಗ ಓಟಿಟಿ ವ್ಯವಹಾರದ ಸಂಬಂಧವಾಗಿ ಮತ್ತೆ ಸುದ್ದಿ ಕೇಂದ್ರದಲ್ಲಿದೆ. ಅದನ್ನು ಕಣ್ತುಂಬಿಕೊಳ್ಳುವ ಕಾತರ ಇನ್ನು ಕೆಲವೇ ದಿನಗಳಲ್ಲಿ ಸಾಕಾರಗೊಳ್ಳಲಿದೆ.