ವಯಸ್ಸು ಅರವತ್ಮೂರರ ಗಡಿಯಲ್ಲಿ ಗಸ್ತು ಹೊಡೆಯುತ್ತಿದ್ದರೂ ಹದಿನೆಂಟರ ಹುಮ್ಮಸ್ಸನ್ನು ಆವಾಹಿಸಿಕೊಂಡಿರುವವರು ನಟ ಸಂಜಯ್ ದತ್. ಈತನ ಹೆಸರು ಕೇಳಿದಾಕ್ಷಣವೇ ಬಗೆ ಬಗೆಯ ಶೇಡುಗಳುಳ್ಳ, ವಿಕ್ಷಿಪ್ತ ಪರ್ಸನಾಲಿಟಿಗಳು ಕಣ್ಮುಂದೆ ಚಲಿಸಲಾರಂಭಿಸುತ್ತವೆ. ಈ ಆಸಾಮಿ ಬೇಕೆಂತಲೇ ಸೃಷ್ಟಿಕೊಂಡ ವಿವಾದಗಳು, ರಗಳೆ ರಾಮಾಯಣಗಳ ಸುರುಳಿ ಬಿಚ್ಚಿಕೊಳ್ಳುತ್ತವೆ. ಆದರೆ, ಸಂಜು ಬಾಬಾ ಈವತ್ತಿಗೂ ನಟನಾಗಿ ಚಾಲ್ತಿಯಲ್ಲಿರುವುದು, ಬೇಡಿಕೆ ಉಳಿಸಿಕೊಂಡಿರೋದು ತನ್ನೊಳಗಿನ ನಟನೆಯ ಕಸುವಿನಿಂದ ಮಾತ್ರ ಎಂಬುದು ನಿರ್ವಿವಾದ. ಕೆಜಿಎಫ್ನಲ್ಲಿ ಅಧೀರನಾಗಿ ಅಬ್ಬರಿಸಿದ ನಂತರವಂತೂ, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಂಜು ಬಾಬಾನ ಬೇಡಿಕೆ ದುಪ್ಪಟ್ಟುಗೊಂಡಿದೆ. ಅದಕ್ಕೆ ಸರಿಯಾಗಿ ಅವರ ಸಂಭಾವನೆಯೂ ಅಚ್ಚರಿದಾಯಕವಾಗಿ ಹೆಚ್ಚಾಗಿದೆ.
ಸಂಜು ಸ್ನೇಹ ಅಂತ ಬಂದಾಗ ಭಲೇ ಉದಾರಿ; ವ್ಯವಹಾರ ಅಂತ ಬಂದಾಗ ಅಷ್ಟೇ ಕಟ್ಟುನಿಟ್ಟಿನ ಆಸಾಮಿ. ಈ ಕಾರಣದಿಂದಲೇ ಅವರು ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಸಂಭಾವನೆಯ ಮೀಟರ್ ಅನ್ನೂ ಏಕಾಏಕಿ ರೈಸ್ ಮಾಡಿಬಿಟ್ಟಿದ್ದಾರೆ. ಇದೆಲ್ಲವನ್ನೂ ಏಕೆ ಹೇಳಬೇಕಾಯಿತೆಂದರೆ, ಸಂಜು ಬಾಬಾ ಇದೀ ಮತ್ತೊಮ್ಮೆ ದಕ್ಷಿಣ ಭಾರತೀಯ ಚಿತ್ರವೊಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಈಗಾಗಲೇ ಕಮಲ್ ಹಾಸನ್ ನಟನೆಯ ವಿಕ್ರಮ್ ಚಿತ್ರ ನಿರ್ದೇಶನ ಮಾಡಿ, ಅದರ ಗೆಲುವಿನ ಖುಷಿಯಲ್ಲಿರುವ ಲೋಕೇಶ್ ಕನಕರಾಜನ್ ಮತ್ತೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ. ಅದರ ಪಾತ್ರವೊಂದಕ್ಕೆ ಸಂಜು ಬಾಬಾರನ್ನು ಅಪ್ರೋಚ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಂಜು ಹತ್ತು ಕೋಟಿಗೆ ಬೇಡಿಕೆ ಇಟ್ಟಿದ್ದರಂತೆ. ಆ ಪಾತ್ರವನ್ನು ಅವರಲ್ಲದೇ ಬೇರ್ಯಾರೂ ಮಾಡಲು ಸಾಧ್ಯವಿಲ್ಲ ಎಂಬಂತೆ ಫಿಕ್ಸಾಗಿದ್ದ ಚಿತ್ರತಂಡ ಅಷ್ಟು ಕಾಸು ಕೊಡಲೊಪ್ಪಿದೆ. ಅಲ್ಲಿಗೆ ಸಂಜು ಮತ್ತೊಂದು ದಕ್ಷಿಣ ಭಾರತೀಯ ಚಿತ್ರದ ಭಾಗವಾಗೋದು ಪಕ್ಕಾ ಆದಂತಾಗಿದೆ.
ಲೋಕೇಶ್ ಕನಕರಾಜನ್ ನಿರ್ದೇಶನದ ಈ ಹೊಸಾ ಚಿತ್ರದಲ್ಲಿ ವಿಜಯ್ ನಾಯಕನಾಗಿ ನಟಿಸಲಿದ್ದಾರೆ. ಸದ್ಯ ಪೂರ್ವಭಾವೀ ತಯಾರಿ, ತಾರಾಗಣದ ಆಯ್ಕೆ ಕಾರ್ಯ ಭರದಿಂದ ಸಾಗುತ್ತಿದೆ. ಆದರೆ, ಇನ್ನೂ ಕೂಡಾ ಈ ಸಿನಿಮಾಗೆ ಹೆಸರನ್ನು ನಿಗಧಿ ಮಾಡಿಲ್ಲ. ಹಾಗಾದರೆ, ಈ ಚಿತ್ರದಲ್ಲಿ ಸಂಜಯ್ ದತ್ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬ ಕುತೂಹಲ ಕಾಡೋದು ಸಹಜ. ಈ ನಿಟ್ಟಿನಲ್ಲಿ ನೋಡ ಹೋದರೆ, ಮತ್ತೆ ವಿಲನ್ಗಿರಿಯೇ ಎದುರುಗೊಳ್ಳುತ್ತದೆ. ಕೆಜಿಎಫ್ನಲ್ಲಿ ರಗಡ್ ವಿಲನ್ ಆಗಿದ್ದ ಸಂಜುಗೆ ಈ ಚಿತ್ರದಲ್ಲಿ ಅದಕ್ಕಿಂತಲೂ ಭೀಕರವಾದ ಪಾತ್ರ ರೆಡಿಯಾಗಿದೆ. ಅದರ ಚಹರೆಗಳನ್ನು ಕೇಳಿದ ಸಂಜು ಬಾಬಾ ಖುದ್ದು ಖುಷಿಗೊಂಡಿದ್ದಾರಂತೆ. ಸದರಿ ಸಿನಿಮಾ ಬಗೆಗಿನ ಇನ್ನಷ್ಟು ಇಂಟರೆಸ್ಟಿಂಗ್ ಮಾಹಿತಿಗಳು ಇಷ್ಟರಲ್ಲಿಯೇ ಜಾಹೀರಾಗಲಿವೆ.