ಗಾಯಕಿಯಾಗಿಯೂ ಗಮನ ಸೆಳೆದ ಬಿಗ್ಬಾಸ್ ಹುಡುಗಿ!
ಕಿರುತೆರೆಯಲ್ಲಿ ಮಿಂಚಿ, ತನ್ನ ಮುದ್ದಾದ ಅಭಿನಯದ ಮೂಲಕ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡುರುವಾಕೆ ಚಂದನಾ ಅನಂತಕೃಷ್ಣ. ಬರೀ ಕಿರುತೆರೆಯಲ್ಲಿಯೇ ಕಳೆದು ಹೋಗದೆ, ಬೇರೆ ಬೇರೆ ಹವ್ಯಾಸಗಳತ್ತ ಕೈಚಾಚುತ್ತಾ, ಥರ ಥರದ ಪ್ರಯೋಗಳಿಗೆ ಒಗ್ಗಿಕೊಳ್ಳುತ್ತಿರುವುದು ಈ ಹುಡುಗಿಯ ಹೆಚ್ಚುಗಾರಿಕೆ. ಪ್ರತಿಭೆ ಮತ್ತು ಅದಕ್ಕಾಗಿನ ನಿರಂತರ ಪರಿಶ್ರಮಗಳಿದ್ದರೆ ಕೊಂಚ ತಡವಾದರೂ ಗೆಲುವೆಂಬುದು ನಾನಾ ಬಗೆಯಲ್ಲಿ ಕೈ ಹಿಡಿಯುತ್ತದೆ ಎಂಬುದಕ್ಕೆ ಚಂದನಾ ನಿಜಕ್ಕೂ ಉದಾಹರಣೆಯಂಥವರು. ಇತ್ತೀಚಿನ ದಿನಗಳಲ್ಲಿ ಕೊಂಚ ಮರೆಯಾದಂತಿದ್ದ ಚಂದನಾ ಅಭಿಮಾನಿಗಳಲ್ಲಿ ಕೊಂಚ ದಿಗಿಲು ಮೂಡಿಸಿದ್ದರು. ಆದರೀಗ ಮತ್ತೊಂದು ಅಚ್ಚರಿಯೊಂದಿಗೆ ವಾಪಾಸಾಗಿದ್ದಾರೆ!
ಹಾಗೆ ಚಂದನಾ ಅಚ್ಚರಿ ಮೂಡಿಸಿರೋದು ‘ಎದುರಲಿ ಇರುವಾಗ ನೀನು’ ಎಂಬ ಮೋಹಕವಾದೊಂದು ಆಲ್ಬಂ ಸಾಂಗ್ ಮೂಲಕ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಈ ಆಲ್ಬಂ ಸಾಂಗ್ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ. ಹಾಗೆ ನೋಡಿದರೆ, ಆಲ್ಬಂ ಸಾಂಗುಗಳು ಕನ್ನಡದಲ್ಲಿ ಬಹು ಬೇಗನೆ ಆವರಿಸಿಕೊಂಡಿದ್ದು, ಯಶಸ್ವಿಯಾದದ್ದು ಕಡಿಮೆಯೇ. ಅಂಥಾದ್ದೊಂದು ನಿರ್ವಾತ ಸ್ಥಿತಿಯಲ್ಲಿ ಸದರಿ ಆಲ್ಬಂ ಸಾಂಗ್ ಸಖತ್ತಾಗಿಯೇ ಸೌಂಡು ಮಾಡುತ್ತಿದೆ. ಎಂಥವರನ್ನಾದರೂ ಅರೆಕ್ಷಣ ಭಾವಲೋಕದತ್ತ ಸೆಳೆದೊಯ್ಯುವ, ಯಾವುದೋ ಅನೂಹ್ಯ ಲಹರಿಯೊಂದಕ್ಕೆ ಕಟ್ಟಿ ಹಾಕುವ ಕಸುವಿರುವ ಈ ಹಾಡು ಎಲ್ಲರಿಗೂ ಮೆಚ್ಚುಗೆಯಾಗುವಂತಿದೆ. ಅದಕ್ಕೆ ಹೆಚ್ಚೆಚ್ಚು ವೀವ್ಸ್ ಮತ್ತು ಭರಪೂರ ಮೆಚ್ಚುಗೆ ದಕ್ಕುತ್ತಿರೋದೂ ಕೂಡಾ ಈ ಕಾರಣದಿಂದಲೇ.
ಆರಂಭಿಕವಾಗಿ ಸೀರಿಯಲ್ಲುಗಳ ನಾಯಕಿಯಾಗಿ ಆಗಮಿಸಿದ್ದವರು ಚಂದನಾ. ಆ ನಂತರದಲ್ಲಿ ತನ್ನ ನಟನೆಯ ಚಾತುರ್ಯದಿಂದಲೇ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದರು; ಯಶಸ್ಸನ್ನೂ ತನ್ನದಾಗಿಸಿಕೊಂಡಿದ್ದರು. ಸಾಮಾನ್ಯವಾಗಿ, ಕ್ರಯಾಶೀಲ ಮನಸುಗಳು ಹೆಚ್ಚು ಕಾಲ ಒಂದೇ ಕಸುಬಿನಲ್ಲಿ ತೃಪ್ತಿ ಕಾಣೋದಿಲ್ಲ. ಬೇರೆ ಯಾವುದೋ ತೀರದತ್ತ ಅಂಥವರ ಮನಸು ಸದಾ ಕಾಲವೂ ಹಾತೊರೆಯುತ್ತಲೇ ಇರುತ್ತದೆ. ಬೇರೇನು ಮಾಡಲಾಗದಿದ್ದರೂ ಮಾಡೋ ಕೆಲಸವನ್ನೇ ಡಿಫರೆಂಟಾಗಿ ಮಾಡಿ ಗಮನ ಸೆಳೆಯುತ್ತಾರೆ. ಚಂದನಾ ಕೂಡಾ ಅದೇ ಸಾಲಿಗೆ ಸೇರುವಂಥಾ ಪ್ರತಿಭಾವಂತೆ. ಈ ಕಾರಣದಿಂದಲೇ ಧಾರಾವಾಹಿ ನಾಯಕಿಯಾಗಿ ಉತ್ತುಂಗದಲ್ಲಿರುವಾಗಲೇ ಬಿಗ್ಬಾಸ್ನತ್ತ ಹೊರಳಿಕೊಂಡಿದ್ದರು. ಆ ನಂತರ ಆಕೆಯೊಳಗೊಬ್ಬಳು ಅಮೋಘ ಗಾಯಕಿ ಇರುವ ಅಚ್ಚರಿಯೂ ಜಾಹೀರಾಗಿತ್ತು.ಪ್ರೊಫೆಷನಲ್ ಗಾಯಕಿಯರನ್ನೇ ಮೀರಿಸುವಂಥಾ ಟ್ಯಾಲೆಂಟು ಹೊಂದಿರುವ ಚಂದನಾ, ಆಗಾಗ ಹಾಡುವ ಮೂಲಕ ಸೈ ಅನ್ನಿಸಿಕೊಂಡಿದ್ದಾರೆ.
ಈ ಚೆಂದದ ಆಲ್ಬಂ ಸಾಂಗ್ ಮೂಲಕ ಚಂದನಾ, ನಟನೆಯೊಂದಿಗೆ ಗಾಯಕಿಯಾಗಿಯೂ ಮುಂದುವರೆಯುವಂಥಾ ಭರವಸೆ ಮೂಡಿಸಿದ್ದಾರೆ. ಇದರಲ್ಲಿ ಹಾಡೋದರೊಂದಿಗೆ ತಾವೇ ನಟಿಸುವ ಮೂಲಕ ಆಕೆ ಗಮನ ಸೆಳೆದಿದ್ದಾರೆ. ಚೆಂದದ ಸಾಹಿತ್ಯ, ಅದಕ್ಕೊಪ್ಪುವ ಸಂಗೀತ ಸಂಯೋಜನೆ ಮತ್ತು ಅವೆಲ್ಲವನ್ನೂ ಮತ್ತಷ್ಟು ಮೋಹಕವಾಗಿಸಿರುವ ಲೊಕೇಷನ್ನುಗಳೊಂದಿಗೆ ಈ ಆಲ್ಬಂ ಸಾಂಗ್ ಯಶ ಕಂಡಿದೆ. ಮತ್ತೆ ಮತ್ತೆ ಕೇಳಬೇಕೆನಿಸುತ್ತಾ, ಬಿಟ್ಟೂ ಬಿಡದಂತೆ ಯಾವುದೋ ಗುಂಗಿಗೆ ವಶವಾಗಿಸುವ ಈ ಆಲ್ಬಂ ಸಾಂಗ್ ನಿಜಕ್ಕೂ ಭಿನ್ನವಾಗಿದೆ. ಸದ್ಯ ಸಿನಿಮಾದತ್ತಲೂ ಹೊರಳಿಕೊಂಡಿರುವ ಚಂದನಾ, ಅದಕ್ಕೆ ಪೂರಕವಾಗಿ ಈ ಆಲ್ಬಂ ಸಾಂಗ್ ಅನ್ನು ಮಾಡಿರಲೂ ಬಹುದು. ಅದೇನೇ ಇದ್ದರೂ ಇದು ಇತ್ತೀಚಿನ ದಿನಮಾನದಲ್ಲಿ ಬಂದಿರುವ ಅತ್ಯಂತ ಅಪರೂಪದ ಆಲ್ಬಂ ಸಾಂಗ್. ಬಹುಶಃ ಅಂಥಾ ವಿಶೇಷತೆಗಳಿಲ್ಲದೇ ಹೋಗಿದ್ದರೆ ಅದಕ್ಕೆ ಈ ಮಟ್ಟದ ಪ್ರತಿಕ್ರಿಯೆ ಸಿಗಲು ಸಾಧ್ಯವಿರಲಿಲ್ಲವೇನೋ. ಇಂಥಾದ್ದೊಂದು ವಿಭಿನ್ನ ಸಾಹಸ ಮಾಡಿರುವ ಚಂದನಾಗೆ ಒಳಿತಾಗಲೆಂಬುದು ಸಿನಿಶೋಧ ಹಾರೈಕೆ!