ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ನಟನಾಗಿದ್ದುಕೊಂಡು, ಸಾರ್ವಕಾಲಿಕ ಪ್ರೀತಿ ಸಂಪಾದಿಸಿಕೊಂಡಿರುವವರು ಕಮಲ್ ಹಾಸನ್. ಈ ಕಾರಣದಿಂದಲೇ ಕಮಲ್ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆಂಬ ಸುದ್ದಿ ಹೊರ ಬೀಳುತ್ತಲೇ ಅದರ ಸುತ್ತ ನಿರೀಕ್ಷೆಗಳು ತಂತಾನೇ ಜಮಾವಣೆಯಾಗಿರುತ್ತವೆ. ಯಾವಾಗ ಕಮಲ್ ವಿಕ್ರಮ್ ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆಂಬ ಸುದ್ದಿ ಹೊರ ಬಿದ್ದಿತ್ತೋ, ಆವಾಗಿನಿಂದಲೇ ಪ್ರೇಕ್ಷಕರ ಕಣ್ಣಲ್ಲಿ ಹೊಳಪು ಮೂಡಿಕೊಂಡಿತ್ತು. ಆ ಚಿತ್ರವೀಗ ಬಿಡುಗಡೆಗೊಂಡು ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಹಲವಾರು ಏಳುಬೀಳುಗಳು ಮತ್ತು ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ವಿಕ್ರಮ್ ನೂರರ ಗಡಿ ದಾಟಿಕೊಂಡಿದೆ. ಆ ಕಾರಣದಿಂದಲೇ ಬಹುಕಾಲದ ನಂತರ ಕಮಲ್ ಕಣ್ಣಲ್ಲಿ ಖುಷಿಯ ಕಿಡಿ ಕಾಣಿಸಿಕೊಂಡಿದೆ!
ಇದು ಕಮಲ್ ಪಾಲಿಗೆ ನಿಜಕ್ಕೂ ಸಂಭ್ರಮದ ಸಂಗತಿ. ವಿಕ್ರಮ್ ಬಹಳಷ್ಟು ಭಿನ್ನವಾಗಿ, ರಿಚ್ ಆಗಿ ಮೂಡಿ ಬಂದಿದ್ದರೂ ಕೂಡಾ ಬಿಡುಗಡೆಯ ಕ್ಷಣಗಳಲ್ಲಿ ಗ್ರಹಣದಂಥಾ ವಾತಾವರಣವೂ ಇದ್ದಿದ್ದು ನಿಜ. ಯಾಕೆಂದರೆ, ವಿಕ್ರಮ್ ಚೆನ್ನಾಗಿದೆ ಎಂಬ ಅಭಿಪ್ರಾಯಗಳೇ ಮುಸುಕಾಗುವಂತೆ ಮಿಶ್ರ ಪ್ರತಿಕ್ರಿಯೆಗಳ ಒಡ್ಡೋಲಗ ಆರಂಭವಾಗಿತ್ತು. ಇದರಿಂದಾಗಿ ಕೊಂಚ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದರೂ, ವಿಕ್ರಮ್ ಬಹುಬೇಗನೆ ಚೇತರಿಸಿಕೊಂಡು ನಾಗಾಲೋಟ ಪ್ರಾರಂಭಿಸಿತ್ತು. ಅದೇ ಆವೇಗದೊಂದಿಗೆ ಆ ಚಿತ್ರವೀಗ ನೂರು ದಿನದಾಚೆ ಹೆಜ್ಜೆಯಿಟ್ಟಿದೆ. ಈ ಸಂಬಂಧವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಕಮಲ್ ಖುಷಿ ಹಂಚಿಕೊಂಡಿದ್ದಾರೆ.
ಸವಾಲಿನ ನಡುವೆಯೂ ಯಶಸ್ಸಿನ ದಡ ಸೇರಿಸಿದ ಸರ್ವರಿಗೂ ಕಮಲ್ ಧನ್ಯವಾದ ಸಮರ್ಪಣೆ ಮಾಡಿದ್ದಾರೆ. ತಲೆಮಾರುಗಳಾಚೆಗೂ ತನ್ನ ಮೇಲಿನ ಪ್ರೀತಿ ಪ್ರವಹಿಸುತ್ತಿರುವ ಪರಿ ಕಂಡು ಅಚ್ಚರಿಗೊಳ್ಳುತ್ತಲೇ, ಅದಕ್ಕಾಗಿ ಆಭಾರಿಯಾಗಿರೋದಾಗಿಯೂ ಹೇಳಿಕೊಂಡಿದ್ದಾರೆ. ಅಂದಹಾಗೆ, ಇದು ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಲೋಕೇಶ್ ತಮಿಳಿನಲ್ಲಿ ಸ್ಟಾರ್ ನಿರ್ದೇಶಕ. ಕಮಲ್ ಸಾಥ್ನೊಂದಿಗೆ ಅವರ ಸ್ಟಾರ್ ವರ್ಚಸ್ಸು ವಿಕ್ರಮ್ ಮೂಲಕ ಮತ್ತೆ ಮುಂದುವರೆದಿದೆ. ಈ ಚಿತ್ರದಲ್ಲಿ ವಿಜಯ್ ಸೇತುಪಥಿ ಮತ್ತು ಫಹಾಲ್ ಫಾಸಿಲ್ ಕೂಡಾ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಆ ಪಾತ್ರಗಳನ್ನು ಸೃಷ್ಟಿಸಿರುವ ಪರಿ ಮತ್ತು ಅದಕ್ಕೆ ಜೀವ ತುಂಬಿದ ರೀತಿಗಳೆಲ್ಲವನ್ನೂ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಕಾರಣದಿಂದಲೇ ವಿಕ್ರಮ್ ಗೆದ್ದಿದೆ. ಇದರೊಂದಿಗೆ ಕಮಲ್ ಹಾಸನ್ ವೃತ್ತಿಬದುಕಿನ ಮತ್ತೊಂದು ಮೋಹಕ ಇನ್ನಿಂಗ್ಸ್ ಆರಂಭವಾದಂತಿದೆ!